ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಷ್ಮೆ ಉದ್ಯಮದ ನೆರವಿಗೆ ಧಾವಿಸಲು ಒತ್ತಾಯ

ರೈತರು – ಗ್ರಾಹಕರ ನಡುವೆ ವಾಟ್ಸ್‌ಆ್ಯಪ್‌ ಗ್ರೂಪ್‌ಗಳು ಸೇತುವೆಯಾಗಿ ಕೆಲಸ ಮಾಡ‌ಲಿ
Last Updated 17 ಮೇ 2020, 16:46 IST
ಅಕ್ಷರ ಗಾತ್ರ

ರಾಮನಗರ: ಲಾಕ್‍ಡೌನ್‌ನಿಂದಾಗಿ ರೇಷ್ಮೆ ಉದ್ಯಮವನ್ನೇ ನಂಬಿರುವ ಲಕ್ಷಾಂತರ ಜನರ ಬದುಕು ಬೀದಿಗೆ ಬೀಳುತ್ತಿದ್ದು, ಸರ್ಕಾರ ಅವರ ನೆರವಿಗೆ ಧಾವಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ರವಿ ಸರ್ಕಾರವನ್ನು ಆಗ್ರಹಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 'ಲಾಕ್‍ಡೌನ್‍ನಿಂದಾಗಿ ರೀಲರ್ಸ್‍ಗಳು ಉತ್ಪಾದಿಸುವ ರೇಷ್ಮೆ ನೂಲನ್ನು ಕೊಳ್ಳುವವರೇ ಇಲ್ಲದಂತಾಗಿದೆ. ಆರ್ಥಿಕ ಸಂಕಷ್ಟದಿಂದ ತತ್ತರಗೊಂಡಿರುವ ರೀಲರ್ಸ್‍ಗಳು ಗೂಡು ಖರೀದಿಯನ್ನೇ ನಿಲ್ಲಿಸುವ ಮೂಲ ಮುಷ್ಕರ ಆರಂಭಿಸಿದ್ದರು. ನಮ್ಮ ನಾಯಕರ ಮನವಿ ಮೇರೆಗೆ ಮುಷ್ಕರವನ್ನು ಕೈಬಿಟ್ಟಿರುವ ರೀಲರ್ಸ್‍ಗಳು ಗೂಡು ಖರೀದಿಸುತ್ತಿದ್ದಾರೆ’ ಎಂದು ಹೇಳಿದರು.

ಉದ್ಯಮವನ್ನು ಉಳಿಸಲು ಸರ್ಕಾರ ತಕ್ಷಣ ಅಗತ್ಯ ಕ್ರಮಗಳನ್ನು ಕೈಗೊಳ್ಳದಿದ್ದರೆ ರೈತರು, ರೀಲರ್ಸ್‍ಗಳು, ನೇಕಾರರು ಸೇರಿದಂತೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉದ್ಯಮವನ್ನು ಅವಲಂಬಿಸಿರುವವರ ಜತೆಗೆ ಇಡೀ ಉದ್ಯಮವೇ ನಶಿಸಿಹೋಗಲಿದೆ ಎಂದು ಎಚ್ಚರಿಸಿದರು.

ಸರ್ಕಾರ ಕೆಎಸ್‍ಎಂಬಿ ಮೂಲಕ ರೇಷ್ಮೆನೂಲು ಒತ್ತೆ ಇರಿಸಿಕೊಂಡು ಪ್ರತಿ ರೀಲರ್‌ಗೆ 2 ಲಕ್ಷ ಸಾಲ ನೀಡುತ್ತಿದೆ. ಇದು ಯಾವುದಕ್ಕೂ ಸಾಲದು. ಈ ಮೊತ್ತವನ್ನು ಹೆಚ್ಚಿಸಬೇಕು ಎಂದರು.

ರಾಮನಗರ, ಮಂಡ್ಯ ಸೇರಿದಂತೆ ಹಳೆ ಮೈಸೂರು ಭಾಗದ ಜಿಲ್ಲೆಗಳ ರೈತರು ರೇಷ್ಮೆಯನ್ನು ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಿದ್ದಾರೆ. ಈ ಉದ್ಯಮ ನಶಿಸಿಹೋದರೆ ಈ ಜಿಲ್ಲೆಗಳ ಆರ್ಥಿಕತೆಯೇ ಕುಸಿದುಹೋಗಲಿದೆ. ಸರ್ಕಾರ ಕೂಡಲೇ ರೈತರು, ರೀಲರ್ಸ್‍ಗಳು, ನೇಕಾರರು, ಅಧಿಕಾರಿಗಳ ಸಭೆ ಕರೆದು, ಅವರ ಸಮಸ್ಯೆಗಳನ್ನು ಆಲಿಸಿ ಇಡೀ ಉದ್ಯಮದ ಉಳಿವಿಗಾಗಿ ಅಗತ್ಯ ಯೋಜನೆ ರೂಪಿಸಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್‌ ಮುಖಂಡ ಇಕ್ಬಾಲ್ ಹುಸೇನ್ ಮಾತನಾಡಿ, ರೇಷ್ಮೆ ಮತ್ತು ಹೈನೋದ್ಯಮ ಜಿಲ್ಲೆಯ ರೈತರ ಪ್ರಮುಖ ವಾಣಿಜ್ಯ ಬೆಳೆಗಳಾಗಿವೆ. ಆದರೆ, ರೇಷ್ಮೆಗೆ ಸೂಕ್ತ ಬೆಲೆ ಸಿಗದ ಕಾರಣ ಬೆಳೆಗಾರರೂ ಸೇರಿದಂತೆ ಉದ್ಯಮವನ್ನೇ ನಂಬಿದವರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದರು. ಸಮಸ್ಯೆ ಉಲ್ಬಣಗೊಂಡಾಗ ಮಾತ್ರ ಸರ್ಕಾರ 5- 10 ಕೋಟಿ ಕೆಎಸ್‍ಎಂಬಿಗೆ ನೀಡುವ ಮೂಲಕ ರೈತರ ಕಣ್ಣೊರೆಸುವ ನಾಟಕವಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೈತರು ಹಿಪ್ಪುನೇರಳೆ ಗಿಡಗಳನ್ನು ಕಿತ್ತೆಸೆದು ಬೇರೆ ಬೆಳೆ ಬೆಳೆಯಲು ಮುಂದಾಗುವ ಮುನ್ನ ಎಚ್ಚೆತ್ತುಕೊಂಡು ಸರ್ಕಾರ ಕೆಎಸ್‍ಎಂಬಿಗೆ ಹೆಚ್ಚಿನ ಮೊತ್ತದ ಹಣ ನೀಡಬೇಕು. ಆ ಮೂಲಕ ರೇಷ್ಮೆ ಉದ್ದಿಮೆ ಉಳಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಗಂಗಾಧರ್, ಮುಖಂಡರಾದ ಕೆ.ರಮೇಶ್, ಸಿ.ಎನ್.ವೆಂಕಟೇಶ್, ಗಾಣಕಲ್ ನಟರಾಜು, ಎ.ಬಿ.ಚೇತನ್‍ಕುಮಾರ್, ವಿ.ಎಚ್.ರಾಜು, ನರಸಿಂಹಮೂರ್ತಿ, ನಿಜಾಮುದ್ದೀನ್ ಷರೀಫ್, ಬಿ.ಸಿ.ಪಾರ್ವತಮ್ಮ, ಅನಿಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT