ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ಪಾವತಿಗೆ ಸಮಯ ನೀಡಲು ಒತ್ತಾಯ

Last Updated 17 ಸೆಪ್ಟೆಂಬರ್ 2021, 2:52 IST
ಅಕ್ಷರ ಗಾತ್ರ

ಕನಕಪುರ: ಬ್ಯಾಂಕಿನಿಂದ ಪಡೆದ ಸಾಲವನ್ನು ಏಕಾಏಕಿ ಮರುಪಾವತಿಸುವಂತೆ ಒತ್ತಾಯಿಸಿ ಕರ್ನಾಟಕ ಬ್ಯಾಂಕ್‌ ಸೂಚಿಸಿರುವುದನ್ನು ವಿರೋಧಿಸಿ ಕೊಳ್ಳಿಗನಹಳ್ಳಿ ಗ್ರಾಮದಲ್ಲಿ ಮಂಗಳವಾರ ರೈತರು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕಿನ ಹಾರೋಹಳ್ಳಿ ಹೋಬಳಿ ಕೊಳ್ಳಿಗನಹಳ್ಳಿ ಗ್ರಾಮದಲ್ಲಿರುವ ಕರ್ನಾಟಕ ಬ್ಯಾಂಕ್‌ ಸಾಲ ಪಡೆದಿರುವ ಸುತ್ತಮುತ್ತಲ ಗ್ರಾಮಗಳ ರೈತರಿಗೆ ಅಸಲು ಮತ್ತು ಬಡ್ಡಿಯ ಪೂರ್ಣ ಹಣವನ್ನು ಕಟ್ಟುವಂತೆ ಸೂಚಿಸಿದೆ. ಇದನ್ನು ವಿರೋಧಿಸಿ ನೂರಾರು ರೈತರು ಬ್ಯಾಂಕ್‌ ಮುಂದೆ ಜಮಾವಣೆಗೊಂಡು ಪ್ರತಿಭಟನೆ ನಡೆಸಿದರು.

ರೈತ ಮುಖಂಡರು ಮಾತನಾಡಿ, ‘ಎರಡು ವರ್ಷದಿಂದ ಕೊರೊನಾ ಸೋಂಕಿನಿಂದ ಎಲ್ಲರೂ ಕಷ್ಟಕ್ಕೆ ಸಿಲುಕಿ ಜೀವನ ನಡೆಸುವುದೇ ಕಷ್ಟವಾಗಿದೆ. ಇಂತಹ ಕಠಿಣ ಸಂದರ್ಭದಲ್ಲಿ ಬ್ಯಾಂಕ್‌ನವರು ಮಾನವೀಯತೆ ಮರೆತು ಸಾಲಮರುಪಾವತಿಸುವಂತೆ ಒತ್ತಾಯಿಸುತ್ತಿರುವುದು ಅಮಾನವೀಯ’ ಎಂದರು.

‘ಕೃಷಿಸಂಬಂಧಿತವಾಗಿ ರೈತರು ಸಾಲ ಪಡೆದಿದ್ದಾರೆ. ಆದರೆ ಈ ಬ್ಯಾಂಕಿನಲ್ಲಿ ಒಂದಕ್ಕೆ ಮೂರುಪಟ್ಟು, ನಾಲ್ಕು ಪಟ್ಟು ಆಗಿದೆ. ರೈತರಿಗೆ ಬಡ್ಡಿ ಚಕ್ರಬಡ್ಡಿ ವಿಧಿಸಿ ಬ್ಯಾಂಕ್‌ ತೊಂದರೆ ಕೊಡುತ್ತಿದ್ದು ಅದನ್ನು ಪರಿಶೀಲಿಸಿ ರೈತರಿಗೆ ವಿಧಿಸಿರುವ ಬಡ್ಡಿಯಲ್ಲಿ ರಿಯಾಯಿತಿ ನೀಡಿ ಉಳಿಕೆಯನ್ನು ಕಟ್ಟಿಸಿಕೊಳ್ಳಬೇಕು. ಬ್ಯಾಂಕಿನ ಹಿರಿಯ ಅಧಿಕಾರಿಗಳು ಇಲ್ಲಿಗೆ ಬಂದು ರೈತರೊಂದಿಗೆ ಮಾತನಾಡಬೇಕು’ ಎಂದು ಆಗ್ರಹಿಸಿದರು.

‘ಬ್ಯಾಂಕ್‌ ನಮ್ಮದು, ನಾವು ಪಡೆದಿರುವ ಸಾಲವನ್ನು ಕಟ್ಟುವುದಿಲ್ಲವೆಂದು ಹೇಳುವುದಿಲ್ಲ. ಈ ಭಾಗದಲ್ಲಿ ನಾಲೆಯಲ್ಲಿ ನೀರನ್ನು 6 ತಿಂಗಳಿನಿಂದ ನಿಲ್ಲಿಸಿದ್ದಾರೆ. ಡ್ಯಾಂ ಕೆಲಸ ಮುಗಿದ ಮೇಲೆ ನೀರು ಕೊಡುವುದು. ಅಲ್ಲಿಯ ತನಕ ವ್ಯವಸಾಯ ಮಾಡುವುದು ಕಷ್ಟವಾಗಿದೆ. ಸಾಲದ ಜತೆಗೆ ಸ್ವಲ್ಪ ಬಡ್ಡಿಯನ್ನು ಸೇರಿಸಿ ಕಟ್ಟುತ್ತೇವೆ’ ಎಂದರು. ಅಧಿಕಾರಿಗಳೊಂದಿಗೆ ಮಾತನಾಡಿ ರೈತರು ಮನೆಗಳಿಗೆ ವಾಪಸ್ಸಾದರು.

ರೈತ ಮುಖಂಡರಾದ ಬಾಲಾಜಿಸಿಂಗ್‌, ಸೊಂಟೇನಹಳ್ಳಿ ದಿನೇಶ್‌, ಸ್ವಾಮಿ, ನಾಗೇಶ್‌, ಯೋಗೇಶ್ವರರಾವ್‌, ಕರಿಯಪ್ಪ, ಅಂಕಮ್ಮ, ಕಾಳೇಗೌಡ, ನಂಜುಂಡಪ್ಪ, ಶಾಂತಮ್ಮ, ಗುರುವಯ್ಯ, ನಾಗರಾಜು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT