ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಹಸಿ ತ್ಯಾಜ್ಯ ನೀರಾಗಿಸುವ ಯಂತ್ರ ಸ್ಥಾಪನೆ

Last Updated 21 ಜುಲೈ 2019, 19:45 IST
ಅಕ್ಷರ ಗಾತ್ರ

ರಾಮನಗರ: ಹಸಿ ಕಸ ಸಂಸ್ಕರಣೆಯಾಗಿ ನೀರಾಗಿ ಹರಿದರೆ? ಹೀಗೆ ಹರಿದ ನೀರು ಕೃಷಿಗೆ ಉಪಯೋಗಿಸುವಂತಾದರೆ? ಈ ಪ್ರಶ್ನೆಗಳಿಗೆ ಉತ್ತರವಾಗಿ ಇಲ್ಲಿನ ನಗರಸಭೆ ಖಾಸಗಿ ಸಂಸ್ಥೆಯೊಂದರ ಯಂತ್ರವನ್ನು ಇಂದಿರಾ ಕ್ಯಾಂಟೀನ್ನಲ್ಲಿ ಪ್ರಾಯೋಗಿಕವಾಗಿ ಸ್ಥಾಪಿಸಿದೆ.

ಹಸಿಕಸವನ್ನು ನೀರು ಮಾಡುವ ಯಂತ್ರವನ್ನು ಆರ್‌ಗ್ರೀನ್‌ ಎಂಬ ಸಂಸ್ಥೆ ದಕ್ಷಿಣ ಕೊರಿಯಾದಿಂದ ಆಮದು ಮಾಡಿಕೊಂಡಿದೆ. ಬೆಂಗಳೂರು ಮೂಲದ ಈ ಸಂಸ್ಥೆಯ ಅಧಿಕಾರಿಗಳು ಹೇಳುವ ಪ್ರಕಾರ ವಿಶ್ವದ ಐದು ರಾಷ್ಟ್ರಗಳಲ್ಲಿ ಮಾತ್ರ ಈ ತಂತ್ರಜ್ಞಾನ ಚಾಲ್ತಿಯಲ್ಲಿದೆ. ಇಡೀ ದೇಶದಲ್ಲಿ ಪ್ರಥಮವಾಗಿ ರಾಮನಗರ ನಗರಸಭೆ ಆಸಕ್ತಿವಹಿಸಿದ್ದರಿಂದ ಪ್ರಾಯೋಗಿಕವಾಗಿ ಯಂತ್ರವನ್ನು ಇಂದಿರಾ ಕ್ಯಾಂಟೀನ್‌ನಲ್ಲಿ ಸ್ಥಾಪಿಸಲಾಗಿದೆ.

ಯಂತ್ರದ ಕಾರ್ಯನಿರ್ವಹಣೆ ಹೇಗೆ?: ಇದೊಂದು ಸರಳ ಯಂತ್ರ. ನಮ್ಮ ಹೊಟ್ಟೆಯಲ್ಲಿ ಸಂಸ್ಕರಣೆ ಆಗುವ ರೀತಿಯಲ್ಲೇ ಈ ಯಂತ್ರವೂ ಕಾರ್ಯನಿರ್ವಹಿಸುತ್ತದೆ. ಹೊಟ್ಟೆಯಲ್ಲಿ ಇರುವ ಕಿಣ್ವ (ಎನ್‌ಜೈಮ್) ಆಹಾರವನ್ನು ಸಂಸ್ಕರಿಸುತ್ತದೆ. ಯಂತ್ರದಲ್ಲಿಯೂ ಕಿಣ್ವ ಮತ್ತು ಬಯೋಸ್ಥಾರ್ ಎಂದು ನಾಮಾಂಕಿತವಾಗಿರುವ ಮೈಕ್ರೋ ಆರ್ಗಾನಿಸಂ ಇರುತ್ತದೆ. ಬಯೋಸ್ಟಾರ್ ಗಳು ತ್ಯಾಜ್ಯ ಆಹಾರದಲ್ಲಿನ ಕೊಬ್ಬು ಮತ್ತು ಎಣ್ಣೆಯ ಅಂಶಗಳನ್ನು ಸಂಸ್ಕರಿಸಿ ನೀರಾಗಿ ಪರಿವರ್ತಿಸುತ್ತದೆ. ಸಂಸ್ಕರಣೆಯ ವೇಳೆ ಕಾರ್ಬನ್‌ ಡೈ ಆಕ್ಸೈಡ್ ಉತ್ಪತ್ತಿಯಾಗುತ್ತದೆ. ಆದರೆ, ಹಾಲಿ ಇರುವ ತ್ಯಾಜ್ಯ ಸಂಸ್ಕರಣ ಪದ್ಧತಿಯಲ್ಲಿ ಉತ್ಪತ್ತಿಯಾಗುವ ಪ್ರಮಾಣಕ್ಕಿಂತ ಅತಿ ಕಡಿಮೆ ಕಾರ್ಬನ್‌ ಡೈ ಆಕ್ಸೈಡ್ ಉತ್ಪತ್ತಿಯಾಗುವುದರಿಂದ ಪರಿಸರ ಹಾನಿ ಆಗುವುದಿಲ್ಲ ಎಂಬುದು ಆರ್‌ಗ್ರೀನ್‌ ಸಂಸ್ಥೆಯ ಅಧಿಕಾರಿಗಳ ವಾದ.

ಪರಿವರ್ತಿಸಲು 24 ಗಂಟೆ ಬೇಕು: ಹಸಿ ಕಸವನ್ನು ನೀರಾಗಿ ಪರಿವರ್ತಿಸಲು ಯಂತ್ರಕ್ಕೆ 24 ಗಂಟೆ ಬೇಕು. ಆದರೆ, ಯಂತ್ರ ನಿರಂತರವಾಗಿ ಕಾರ್ಯನಿರ್ವಹಿಸುವುದರಿಂದ ತ್ಯಾಜ್ಯವೂ ನಿರಂತರವಾಗಿ ನೀರಾಗಿ ಪರಿವರ್ತನೆಯಾಗುತ್ತಿರುತ್ತದೆ. ಹೀಗಾಗಿ ಯಂತ್ರಕ್ಕೆ ಪದೇ ಪದೆ ಹಸಿ ತ್ಯಾಜ್ಯವನ್ನು ಸೇರಿಸುತ್ತಿರಬಹುದು.

ಲ್ಯಾಬ್ ಗಳ ವರದಿಯನ್ನಾಧರಿಸಿ ಕ್ರಮ: ಇಂದಿರಾ ಕ್ಯಾಂಟೀನ್ ನಲ್ಲಿ ಸ್ಥಾಪಿಸಿರುವ ಯಂತ್ರದಿಂದ ಹೊರಬರುವ ನೀರು ಕೃಷಿಗೆ ಯೋಗ್ಯವೇ ಎಂದು ಕೃಷಿ ವಿವಿಗೆ ಸ್ಯಾಂಪಲ್ ಕಳುಹಿಸಿ, ವರದಿಗೆ ನಗರಸಭೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ. ಇನ್ನೊಂದೆಡೆ ಯಂತ್ರದಿಂದ ಪರಿಸರದ ಮೇಲೆ ಯಾವ ರೀತಿಯ ದುಷ್ಪರಿಣಾಮಗಳು ಬೀರುವುದಿಲ್ಲ ಎಂಬುದನ್ನು ಖಾತರಿ ಪಡಿಸಿಕೊಳ್ಳಲು ಪರಿಸರ ಮಾಲಿನ್ಯ ನಿಯಂತ್ರ ಇಲಾಖೆಗೂ ಪತ್ರ ಬರೆದಿದ್ದಾರೆ. ಎಲ್ಲಾ ವರದಿಗಳಲ್ಲು ಸಕಾರಾತ್ಮಕ ಪ್ರತಿಕ್ರಿಯೆ ಬಂದರಷ್ಟೇ ಯಂತ್ರವನ್ನು ಕೊಳ್ಳುವ ವಿಚಾರದಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಎಷ್ಟು ವೆಚ್ಚ?: ಪ್ರಾಯೋಗಿಕವಾಗಿ ಸ್ಥಾಪನೆಯಾಗಿರುವ ಯಂತ್ರ 50 ಕೆ.ಜಿ ಹಸಿ ತ್ಯಾಜ್ಯ ಸಂಸ್ಕರಿಸುತ್ತದೆ. ಇದರ ಆಮದು ಬೆಲೆ ಸುಮಾರು ₹9.50 ಲಕ್ಷ. ಇನ್ನೊಂದು ವರ್ಷದಲ್ಲಿ ಭಾರತದಲ್ಲೇ ಇಂತಹ ಯಂತ್ರಗಳನ್ನು ತಯಾರಿಸುವ ಪ್ರಯತ್ನ ಸಾಗಿದೆ. ಆದರೆ, ಯಂತ್ರಕ್ಕೆ ಬಳಕೆಯಾಗುವ ಬಯೋಸ್ಟಾರ್ ಗಳನ್ನು ದಕ್ಷಿಣ ಕೊರಿಯಾದ ಸಂಸ್ಥೆ ವಿಶ್ವ ಪೇಟೆಂಟ್ ಪಡೆದುಕೊಂಡಿದೆ. ಹೀಗಾಗಿ ಅಲ್ಲಿಂದಲೇ ಆಮದು ಮಾಡಿಕೊಳ್ಳಬೇಕಾಗಿದೆ ಎಂದು ಆರ್‌ಗ್ರೀನ್‌ ವೇಸ್ಟ್ ಟು ವಾಟರ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ವಿ.ಸುಬ್ಬರಾವ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT