ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡಿದರೆ ಮಳೆ ಕರುಣಿಸುವ ಜಲ ಸಿದ್ದೇಶ್ವರ

ರಾಮನಗರಕ್ಕೆ ಸಮೀಪ ಪ್ರಕೃತಿ ಮಡಿಲಿನಲ್ಲಿದೆ ಸುಂದರ ಶಿಲಾತಾಣ
Last Updated 25 ಮೇ 2019, 18:30 IST
ಅಕ್ಷರ ಗಾತ್ರ

ರಾಮನಗರ: ರಾಮನಗರದ ವಾಯುವ್ಯ ದಿಕ್ಕಿಗೆ ನಾಲ್ಕು ಕಿ.ಮೀ.ಗೆ ದೂರವಿರುವ ಜಲಸಿದ್ದೇಶ್ವರ ಬೆಟ್ಟವು ಪ್ರಕೃತಿಯ ಮಡಿಲಿನಲ್ಲಿರುವ ಸುಂದರ ತಾಣವಾಗಿದೆ.

ಈ ಸ್ಥಳದ ಪಾವಿತ್ರ್ಯ ಮತ್ತು ಮಹಿಮೆಯ ಬಗ್ಗೆ ಭಕ್ತರಲ್ಲಿ ಅಪಾರ ಗೌರವವಿದೆ. ಇಲ್ಲಿ ಪುರಾತನವಾದ ಗುಹಾಂತರ ದೇವಾಲಯವಿದ್ದು, ಈ ಗುಹೆಯ ಒಳಗಡೆ ಚಾಚಿಕೊಂಡಿರುವ ಬಂಡೆಯ ಒಳಗಿನ ಹನ್ನೊಂದು ರಂಧ್ರಗಳ ಮೂಲಕ ಹರಿಯುವ ನೀರು ಕೆಳಗಿನ ಹನ್ನೊಂದು ಲಿಂಗಗಳ ಮೇಲೆ ಪ್ರೋಕ್ಷಣೆಯಾಗುವುದು ಈ ಬೆಟ್ಟದ ವೈಶಿಷ್ಟ್ಯವಾಗಿದೆ. ಇದೇ ಕಾರಣದಿಂದ ಈ ಬೆಟ್ಟಕ್ಕೆ 'ಜಲಸಿದ್ದೇಶ್ವರ ಬೆಟ್ಟ' ಎಂದು ಹೆಸರು ಬಂದಿರುವುದಾಗಿ ತಿಳಿದು ಬರುತ್ತದೆ.

'ಏಕಾದಶ ರುದ್ರರು' ಎಂದು ಕರೆಯಲ್ಪಡಉುವ ಈ ಹನ್ನೊಂದು ಲಿಂಗಗಳಿಗೆ ಮಳೆ ಬಾರದ ಸಮಯದಲ್ಲಿ ಭಯ ಭಕ್ತಿಯಿಂದ ಅಭಿಷೇಕ ಮಾಡಿದರೆ ಮಳೆ ಸುರಿಯುತ್ತದೆಂಬ ನಂಬಿಕೆಯಿದೆ. ಈ ಬೆಟ್ಟದಲ್ಲಿ ಹೆಜ್ಜೇನುಗಳು ಹೆಚ್ಚಾಗಿದ್ದು, ಈ ಹೆಜ್ಜೇನು ಕಡಿತದ ಭಯದಿಂದ ಜನ ಈ ಬೆಟ್ಟಕ್ಕೆ ಬರಲು ಹಿಂದುಮುಂದು ನೋಡುತ್ತಾರೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು.

‘ರಾಮಗಿರಿಯ ಪಶ್ಚಿಮಕ್ಕೆ ಇರುವ ಲಿಂಗಗಿರಿ ಇದಾಗಿದೆ. ಈ ಗಿರಿದುರ್ಗಕ್ಕೆ ಕೋಣನ ಕಲ್ಲಿನ ಬೆಟ್ಟ ಪಶ್ಚಿಮಕ್ಕೆ ಇದೆ. ಕೋಣದ ಕಲ್ಲಿನ ಬೆಟ್ಟದ ಆನೆ ಅಂಬಾರಿಯ ನೋಟ (Elephant view) ಬಹಳ ಗಾಂಭೀರ್ಯದ ಭಾವ ತರುತ್ತದೆ, ತುಂಬಾ ಆಕರ್ಷಕವಾಗಿ ನಿಸರ್ಗದ ಕಲಾ ಚಾತುರ್ಯದ ಕಲಾಶಿಲ್ಪವೆನಿಸುತ್ತದೆ. ಅದರ ಬೆನ್ನಿಗೆ ಇರುವುದೇ 'ಜಲಸಿದ್ದೇಶ್ವರ ಬೆಟ್ಟ' ಎಂದು ಹಿರಿಯ ಸಂಶೋಧಕ ಡಾ.ಎಂ.ಜಿ. ನಾಗರಾಜ್ ತಿಳಿಸಿದರು.

‘ಜಲಸಿದ್ದೇಶ್ವರ ಬೆಟ್ಟವು ಪಾಣೀಪಟ್ಟದ ಮೇಲೆ ನಿಂತ ಲಿಂಗಶಿರದಂತಿದೆ. ಇದರ ಪಶ್ಚಿಮ ಪಾರ್ಶ್ವದ ಬುಡದಲ್ಲಿ ಅಡ್ಡಲಾಗಿ ನೀಳವಾದ ಬಂಡೆಯ ಸೀಳೊಂದಿದೆ. ಮನುಷ್ಯರು ಸುಲಭವಾಗಿ ತೂರಬಹುದು. ಈ ಸೀಳಿನ ಒಳಗಿನ ಮೇಲಿನ ಬದಿಯಿಂದ ಹನ್ನೊಂದು ಲಿಂಗಾಕಾರದ ಉಬ್ಬುಗಳಿವೆ. ಕೆಳತಳದಲ್ಲಿ ಅವುಗಳಿಗೆ ನೇರಾಭಿಮುಖವಾಗಿ ಅಷ್ಟೇ ಸಂಖ್ಯೆಯಲ್ಲಿ ಅಬ್ಬಿದ ಲಿಂಗಶಿಖರಗಳಿವೆ’ ಎಂದು ಮಾಹಿತಿ ನೀಡಿದರು.

‘ನೀರು ಮೇಲಿನ ಉಬ್ಬುಗಳಿಂದ ಒಸರಿ ಗಂಗೋತ್ರಿಯಾಗಿ ಈ ಲಿಂಗಶಿಖರಗಳ ಮೇಲೆ ಬೀಳುವ ದೃಶ್ಯ ಮನೋಹರವಾಗಿದೆ. ಭಕ್ತಿಯನ್ನು ಪ್ರೇರೇಪಿಸುವ ಈ ಸ್ಥಳ ನೋಡುವವರಿಗೆ ತೃಪ್ತಿಯನ್ನು ನೀಡುತ್ತದೆ. ಏಕಾದಶ ರುದ್ರಲಿಂಗ ಗಂಗೋತ್ರಿ ಎಂಬ ಮಾತು ಜನಪದದಲ್ಲಿದೆ. ವೈಜ್ಞಾನಿಕವಾಗಿ ವಿಶ್ಲೇಷಿಸಿದರೆ ಈ ಬಂಡೆಯಲ್ಲಿ ಆಂತರಿಕ ಶಿಲಾಸವಕಳಿ ಹೆಚ್ಚಿದ್ದು, ಸಚ್ಛಿದ್ರತೆ ಏರ್ಪಟ್ಟಿದೆ. ಈ ಸಚ್ಛಿದ್ರ ಪೊರೆಗಳಿಂದ ನೀರು ಒಸರಿ ಕಲಾತ್ಮಕ ದೃಶ್ಯವನ್ನೊದಗಿಸುತ್ತದೆ’ ಎಂದ ಅವರು ಬಣ್ಣಿಸಿದರು.

‘ಸೀಳಿನ ಮೇಲೆ ಜೇನುಗೂಡುಗಳು ಸಾಲಾಗಿ ಕಟ್ಟಿ ಅದರ ಅಂದವಾದ ಹುಬ್ಬಿನಂತೆ ಕಾಣುತ್ತವೆ. ಮುಟ್ಟು ಮೈಲಿಗೆಯಲ್ಲಿ ಜಲಸಿದ್ದೇಶ್ವರನ ಬೆಟ್ಟಕ್ಕೆ ಹೋದರೆ ಜೇನುಹುಳುಗಳು ಅಟ್ಟಿಸಿಕೊಂಡು ಬಂದು ಕಚ್ಚುತ್ತವೆ ಎಂಬುದು ಇಲ್ಲಿನ ಜನರ ನಂಬಿಕೆಯಾಗಿದೆ. ಕೆಲವರು ಹಾಗೆ ಹೋಗಿ ಕಡಿಸಿಕೊಂಡು ಬಂದವರುಂಟು. ಇದಕ್ಕೆ ವೈಜ್ಞಾನಿಕ ಸಮರ್ಥನೆ ಇಲ್ಲ’ ಎಂದು ತಿಳಿಸಿದರು.

ಜೇನಿನ ನೊಣಗಳ ಸಂವಹನ ಕ್ರಮ (ಮಾತು ವಿನಿಮಯ, ಅವುಗಳ ರೀತಿಯೇ ಬೇರೆ). ಪೂಜೆಯ ಸ್ಥಳಕ್ಕೆ ಒಂದೆರೆಡು ಜೇನಿನ ನೊಣಗಳು ಬರುತ್ತವೆ. ಸಹ್ಯವಲ್ಲದ ವಾಸನೆ ಅದಕ್ಕೆ ತಾಗಿತೆಂದರೆ ಗೂಡಿನ ಬಳಿ ಹೋಗಿ ನರ್ತಿಸುತ್ತವೆ. ಇದೇ ಸಾಕು ಜೇನುನೊಣಗಳು ಕಚ್ಚಲಿಕ್ಕೆ. ಬಸವನ ವಿಗ್ರಹದ ಪ್ರತಿಷ್ಠೆ ಜಲಸಿದ್ದೇಶ್ವರ ಲಿಂಗದ ಎದುರು ಸ್ಥಾಪನಾ ಘಳಿಗೆ ವ್ಯತ್ಯಾಸವಾಗಿ, ಜೇನಿನ ನೊಣಗಳಿಗೆ ಅಪಾಚಾರವೆನಿಸಿ ನಡೆಯಲಿಲ್ಲವಂತೆ. ಇದರ ಹಿನ್ನೆಲೆಯಲ್ಲಿ ದೂಪ ಬೀಳಬಾರದು, ಕೆಟ್ಟ ವಾಸನೆ ಬರಬಾರದು, ಮಡಿಯಲ್ಲಿ ಭಕ್ತಿಯಿಂದ ಜಲಸಿದ್ದೇಶ್ವರನ ದರ್ಶನಕ್ಕೆ ಎಂಬ ಭಾವುಕ ಮೌಲ್ಯವಿದೆ ಎಂದರು.

52 ವರ್ಷಗಳ ಹಿಂದೆ ಪ್ರತಿಷ್ಠೆ ಮಾಡಿದ ಸುಂದರವಾದ ಪುಟ್ಟದಾದ ಶಿವಲಿಂಗವೂ ಈ ಸೀಳಿನಲ್ಲಿದೆ. ಪ್ರಾಚೀನ ಗಣಪತಿಯ ವಿಗ್ರಹವೂ ಇದೆ. ವರ್ಷಕ್ಕೊಮ್ಮೆ ಜಲಸಿದ್ದೇಶ್ವರನ ಹೆಸರಿನಲ್ಲಿ ಆರಾಧನೆ (ಪರ) ನಡೆಯುತ್ತದೆ. ಮಳೆ ಬಾರದಿದ್ದಾಗ, ಈ ಜಲಸಿದ್ದೇಶ್ವರನಿಗೆ ಸೋಮವಾರ ಕುಂಭಾಭಿಷೇಕದ ಸೇವೆ ಮಾಡಿದರೆ ಅದರಿಂದ ಮಳೆ ಬರುತ್ತದೆ ಎಂದು ನಂಬಿಕೆ ಇದೆ ಎಂದು ತಿಳಿಸಿದರು.

ರೇವಣಸಿದ್ಧರು ಇಲ್ಲಿಗೆ ಬಂದು ಗೋದಾಹ ಅಡಗಿಸಿದರೆಂಬ ಸ್ಥಳ ಪುರಾಣವೂ ಇದೆ. ಪ್ರತಿ ಸೋಮವಾರ ಭಕ್ತರು ಇಲ್ಲಿಗೆ ಪೂಜೆಗೆಂದು ಶುದ್ಧರಾಗಿ ಬರುತ್ತಾರೆ. ಮೊದಲು ತುಂಬಿ ತುಂಬಿ ಒಸರುತ್ತಿದ್ದ ಜಲಸ್ರೋತ ಈಗ ಕಡಿಮೆಯಾಗಿದೆ. ಏಕಾದಶಿ ಲಿಂಗಗಳ ಮೇಲೆ ಇಳಿಯುವ ಗಂಗೋತ್ರಿ, ಪ್ರಕೃತಿಯ ಸುಂದರ ನೋಟಗಳ ಒಂದು ಪ್ರತಿನಿಧಿಯಂತೆ ಕಾಣುತ್ತದೆ. ಭಾವುಕರಿಗೆ ಪವಿತ್ರವೆನಿಸಿರುವಂತೆ, ನಿಸರ್ಗ ಪ್ರೇಮಿಗಳಿಗೆ ರಮ್ಯವೆನಿಸಿದೆ ಎಂದು ತಿಳಿಸಿದರು.

ಇಲ್ಲಿಂದ ನೈರುತ್ಯಕ್ಕೆ ಶಿವಗಿರಿ ಬೆಟ್ಟವಿದೆ. ಮಾಗಡಿ ಕೆಂಪೇಗೌಡ ಕಟ್ಟಿಸಿದ ಕೋಟೆ, ಇತಿಹಾಸದ ಸಾಕ್ಷಿಯಾಗಿ ಇನ್ನೂ ನಿಂತಿದೆ. ಈ ಗಿರಿಯನ್ನು ಕ್ಯಾಪ್ಟನ್ ವೇಲ್ಷನು ಮೂರನೇ ಮೈಸೂರು ಯುದ್ಧದಲ್ಲಿ ವಶಪಡಿಸಿಕೊಂಡು ನಂತರ ರಾಮಗಿರಿಯತ್ತ ಸಾಗಿದ. ಈ ಗಿರಿದುರ್ಗದಲ್ಲಿ ಬಹಳ ಹಿಂದೆ ಹರಹರಿ ಎಂಬ ಪಾಳೇಗಾರರಿದ್ದರಂತೆ. ಇವರ ಕಾಲ 13ನೇ ಶತಮಾನವೆಂದು ವಿಜಯನಗರ ಸಾಮ್ರಾಜ್ಯದ ಸ್ಥಾಪಕರಾದ ಹಕ್ಕಬುಕ್ಕರ ಕತೆಯಿಂದ ತಿಳಿದು ಬರುತ್ತದೆ ಎಂದರು.

'ಪರ' ಕ್ಕೆ ಮಹತ್ವ:

‘ನಮ್ಮ ತಾತನ ಕಾಲದಿಂದಲೂ ನಡೆಯುತ್ತಿರುವ ಜಲಸಿದ್ದೇಶ್ವರನ ಪರಕ್ಕೆ ತನ್ನದೇ ಆದ ಮಹತ್ವವಿದೆ. ಯುಗಾದಿ ಹಬ್ಬ ಕಳೆದ ಹದಿನೈದು ದಿನದ ಒಳಗಾಗಿ ಪರ ನಡೆಯುತ್ತದೆ’ ಎಂದು ಬಿಳಗುಂಬ ಗ್ರಾಮದ ಯಜಮಾನ್ ತಿಮ್ಮಪ್ಪ ತಿಳಿಸಿದರು.

‘ಪರದಲ್ಲಿ ಬಿಳಗುಂಬ, ಅರೇಹಳ್ಳಿ, ಕುರುಬರಹಳ್ಳಿ, ಕೂನಮುದ್ದನಹಳ್ಳಿ, ಕೂಟಗಲ್, ಚೌಡೇಶ್ವರಿಹಳ್ಳಿ, ಹೊಸೂರು, ಪಾಲಬೋವಿದೊಡ್ಡಿ, ಕೆಂಪೇಗೌಡನದೊಡ್ಡಿ, ನಿಂಗೇಗೌಡನದೊಡ್ಡಿ, ಪಾದರಹಳ್ಳಿ ಸೇರಿದಂತೆ ಜಿಲ್ಲೆಯ ನಾನಾ ಗ್ರಾಮಗಳಿಂದ ಜನರು ಆಗಮಿಸುತ್ತಾರೆ. ಈ ಪರದಲ್ಲಿ ಊಟ ಮಾಡುವುದೇ ಅದೃಷ್ಟ ಎಂಬುದು ಜನರ ಭಾವನೆಯಾಗಿದೆ’ ಎಂದರು.

ಪ್ರವಾಸಿ ತಾಣವಾಗಲಿ

ಸುಂದರವಾದ ನಿಸರ್ಗ ತಾಣವಾಗಿರುವ ಜಲಸಿದ್ದೇಶ್ವರ ಬೆಟ್ಟವನ್ನು ಪ್ರವಾಸಿತಾಣವನ್ನಾಗಿ ಮಾಡಬೇಕು. ಇದರಿಂದ ಇಲ್ಲಿನ ಐತಿಹಾಸಿಕ, ಚಾರಿತ್ರಿಕ ಹಾಗೂ ಧಾರ್ಮಿಕ ಹಿರಿಮೆಗೆ ಮಹತ್ವ ಸಿಕ್ಕಾಂತಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಟಿ. ದಿನೇಶ್ ತಿಳಿಸಿದರು.

ರೇವಣಸಿದ್ಧೇಶ್ವರ ಬೆಟ್ಟ, ಕೂನಗಲ್ ಬೆಟ್ಟ, ಕೂಟಗಲ್ ಬೆಟ್ಟ ಹಾಗೂ ಮಲ್ಲೇಶ್ವರ ಬೆಟ್ಟಗಳನ್ನು ಪ್ರವಾಸಿ ತಾಣಗಳನ್ನಾಗಿ ಮಾರ್ಪಡಿಸಬೇಕು. ಇದರಿಂದ ರಾಮನಗರ ತಾಲ್ಲೂಕಿನ ಸಾಂಸ್ಕೃತಿಕ ಹಾಗೂ ಸಾಮಾಜಿಕ ಹಿರಿಮೆ ಹೆಚ್ಚಾಗುತ್ತದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT