ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಜೀವನ್‌ ಮಿಷನ್‌: ಕಾಮಗಾರಿ ಕಿರಿಕಿರಿ

ಪೈಪ್‌ಲೈನ್‌ಗಾಗಿ ರಸ್ತೆ ಮಧ್ಯೆ ಗುಂಡಿ: ಶೀಘ್ರ ದುರಸ್ತಿಗೆ ನಾಗರಿಕರ ಒತ್ತಾಯ
Last Updated 25 ಅಕ್ಟೋಬರ್ 2021, 6:55 IST
ಅಕ್ಷರ ಗಾತ್ರ

ರಾಮನಗರ: ಜಲಜೀವನ್‌ ಮಿಷನ್ ಮೂಲಕ ಜಿಲ್ಲೆಯ ಮನೆ ಮನೆಗೂ ಕುಡಿಯುವ ನೀರು ಪೂರೈಕೆ ಕಾರ್ಯ ಚುರುಕಿನಿಂದ ನಡೆದಿದೆ. ಆದರೆ, ಇದಕ್ಕಾಗಿ ಅಗೆದ ರಸ್ತೆಯನ್ನು ಸರಿಯಾಗಿ ಮುಚ್ಚದ ಕಾರಣ ಜನರು ಪರಿತಪಿಸುವಂತೆ ಆಗಿದೆ.

ನಗರ ಹಾಗೂ ಗ್ರಾಮೀಣ ಪ್ರದೇಶಗಳೆರಡರಲ್ಲೂ ಏಕಕಾಲಕ್ಕೆ ಕಾಮಗಾರಿ ಸಾಗಿದೆ. ಮನೆಗಳ ಮುಂಭಾಗ ರಸ್ತೆಗಳನ್ನು ಇದಕ್ಕಾಗಿ ಅಗೆಯಲಾಗುತ್ತಿದೆ. ಆದರೆ, ಹೀಗೆ ಅಗೆಯಲಾದ ಗುಂಡಿಗಳನ್ನು ವೈಜ್ಞಾನಿಕ ರೀತಿಯಲ್ಲಿ ಮುಚ್ಚುತ್ತಿಲ್ಲ. ಕೆಲವು ಕಡೆಗಳಲ್ಲಿ ವಾರಗಟ್ಟಲೆ ರಸ್ತೆ ಅಗೆದು ಹಾಗೆಯೇ ಬಿಡಲಾಗುತ್ತಿದೆ.

ಕಳೆದೆರಡು ವಾರಗಳಿಂದ ಜಿಲ್ಲೆಯಲ್ಲಿ ಮಳೆ ನಿರಂತರವಾಗಿದ್ದು, ಈ ಸಂದರ್ಭದಲ್ಲೇ ಮನೆ ಮುಂದಣ ರಸ್ತೆಗಳೂ ಕೆಸರುಮಯವಾಗಿರುವ ಕಾರಣ ಜನರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಇನ್ನೂ ಕೆಲವು ಮನೆಗಳ ಮುಂದೆ ಗುಂಡಿ ತೋಡಿ ಒಂದೆರಡು ದಿನ ಹಾಗೆಯೇ ಬಿಡುತ್ತಿದ್ದು, ಆ ಸಂದರ್ಭ ವಾಹನ ಸಂಚಾರಕ್ಕೆ ಅವಕಾಶ ಇಲ್ಲದ ಕಾರಣ ಜನರು ‘ಗೃಹ ಬಂಧನ’ ಅನುಭವಿಸುವಂತೆ ಆಗಿದೆ.

‘ನಮ್ಮ ಮನೆ ಮುಂದೆ ಅರೆಬರೆಯಾಗಿ ರಸ್ತೆ ಅಗೆದು ಐದು ದಿನವಾಯಿತು. ಇನ್ನೂ ಪೂರ್ಣ ಪ್ರಮಾಣದಲ್ಲಿ ಗುಂಡಿ ತೋಡಿ ಪೈಪ್‌ಗಳನ್ನು ಅಳವಡಿಸಿಲ್ಲ. ಇನ್ನೆಷ್ಟು ದಿನಕ್ಕೆ ಈ ಕೆಲಸ ಪೂರ್ಣಗೊಳಿಸುತ್ತಾರೆಯೋ ಗೊತ್ತಿಲ್ಲ. ಅಲ್ಲಿಯವರೆಗೂ ಮನೆಯಿಂದ ಒಳ–ಹೊರಗೆ ವಾಹನಗಳನ್ನು ತೆಗೆಯಲು ತೊಂದರೆ. ಜೊತೆಗೆ ನಿತ್ಯ ದೂಳು ಮನೆ ತುಂಬುತ್ತಿದೆ. ಹೀಗಾಗಿ ಆದಷ್ಟು ಶೀಘ್ರ ಕಾಮಗಾರಿ ಪೂರ್ಣಗೊಳಿಸಿ ಅಗೆದ ರಸ್ತೆಗೆ ತೇಪೆ ಹಾಕಬೇಕು’ ಎನ್ನುತ್ತಾರೆ ರಾಮನಗರದ ಮಲ್ಲೇಶ್ವರ ಬಡಾವಣೆಯ
ನಿವಾಸಿಗಳು.

ಗ್ರಾಮೀಣ ಪ್ರದೇಶಗಳಲ್ಲಿಯೂ ಇದೇ ಪರಿಸ್ಥಿತಿ ಇದೆ. ಶಾಸಕರ ಅನುದಾನ, ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಮೊದಲಾದವುಗಳ ಅಡಿ ಸಾಕಷ್ಟು ಹಳ್ಳಿಗಳಲ್ಲಿ ಸಿಮೆಂಟ್ ಕಾಂಕ್ರಿಟ್‌ ರಸ್ತೆಗಳನ್ನು ಹಾಕಲಾಗಿದೆ. ಆದರೆ, ಈಗ ಇದೇ ರಸ್ತೆಗಳನ್ನೇ ಮತ್ತೆ ಅಗೆಯುತ್ತಿರುವುದು ಜನರಲ್ಲಿ ಬೇಸರ
ತರಿಸಿದೆ.

‘ಜಲಜೀವನ್ ಮಿಷನ್‌ ಯೋಜನೆ ಮೂಲಕ ಪ್ರತಿ ಮನೆಗೂ ನೀರು ಪೂರೈಕೆ ಯೋಜನೆ ಹಮ್ಮಿಕೊಂಡಿರುವುದು ಉತ್ತಮ ವಿಚಾರ. ಇದರಿಂದ ಹಳ್ಳಿಗಳಲ್ಲಿನ ನೀರಿನ ಸಮಸ್ಯೆ ತಕ್ಕಮಟ್ಟಿಗೆ ಬಗೆಹರಿಯಲಿದೆ. ಆದರೆ, ಕಾಮಗಾರಿಗಳ ಸಂದರ್ಭ ಜನರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕು. ಕೆಲವು ಹಳ್ಳಿಗಳಲ್ಲಿ ಕಳಪೆ ಗುಣಮಟ್ಟದ ಪೈಪ್‌ ಅಳವಡಿಕೆ ಬಗ್ಗೆ ಈಗಾಗಲೇ ದೂರುಗಳು ಕೇಳಿಬಂದಿವೆ. ಈ ಬಗ್ಗೆ ಎಚ್ಚರ ವಹಿಸಬೇಕು’ ಎನ್ನುತ್ತಾರೆ ಕೆಂಪೇಗೌಡನದೊಡ್ಡಿ ನಿವಾಸಿ ಹರೀಶ್‌.

ಏನೆನ್ನುತ್ತದೆ ನಿಯಮ: ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸರ್ಕಾರಿ ಇಲ್ಲವೇ ಖಾಸಗಿ ಏಜೆನ್ಸಿ ಯಾವುದೇ ಇರಲಿ ಅನುಮತಿ ಪಡೆದು ರಸ್ತೆಯಲ್ಲಿ ಕಾಮಗಾರಿ ಕೈಗೊಳ್ಳಬೇಕು. ಕಾಮಗಾರಿ ಮುಕ್ತಾಯದ ಬಳಿಕ ರಸ್ತೆಗಳನ್ನು ಮೊದಲಿನಂತೆ ಇಡಬೇಕು. ಇದಕ್ಕೆ ಅಗತ್ಯವಾದ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳುವುದು ಸಂಬಂಧಿಸಿದ ಗುತ್ತಿಗೆ ಏಜೆನ್ಸಿಗಳ ಜವಾಬ್ದಾರಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT