ಕುದೂರು: ಇನ್ನೊಂದು ತಿಂಗಳಲ್ಲಿ ಪ್ರತಿ ಗ್ರಾಮ ಪಂಚಾಯಿತಿಗಳಿಗೆ 100 ಆಶ್ರಯ ಮನೆಗಳನ್ನು ನೀಡಲಾಗುವುದು ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.
ಕುದೂರು ಗ್ರಾಮ ಪಂಚಾಯಿತಿಯಲ್ಲಿ ಸೋಮವಾರ ನಡೆದ ಹೋಬಳಿ ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 100 ಮನೆಗಳು ಪೂರ್ಣಗೊಂಡ ನಂತರ ಇನ್ನೊಂದು ವರ್ಷದ ಒಳಗೆ ಮತ್ತೆ 100 ಮನೆಗಳನ್ನು ನೀಡಲಾಗುವುದು. ಅರ್ಹ ಫಲಾನುಭವಿಗಳ ಪಟ್ಟಿ ತಯಾರಿಸಿ ನೀಡುವಂತೆ ಪಿಡಿಒಗಳಿಗೆ ಸೂಚಿಸಿದರು.
ಕುದೂರು ಹೋಬಳಿ ವ್ಯಾಪ್ತಿಯಲ್ಲಿ ಎಷ್ಟು ಮಂದಿಗೆ ಬಿ ಕರಾಬು ಮಾಡಲಾಗಿದೆ ಎಂಬುದರ ಬಗ್ಗೆ ಪಟ್ಟಿ ಮಾಡಿ, ಜಂಟಿ ಸರ್ವೆ ನಡೆಸುವಂತೆ ಶಿರಸ್ತೆದಾರರಿಗೆ ಸೂಚಿಸಿದ ಶಾಸಕರು ಇದನ್ನು ಜಿಲ್ಲಾಧಿಕಾರಿಗೆ ಕಳುಹಿಸುವಂತೆ ತಿಳಿಸಿದರು.
ಜನಸ್ಪಂದನ ಸಭೆ ಕಾಟಾಚಾರಕ್ಕೆ ನಡೆಸುವುದಿಲ್ಲ ಸುಖಾಸುಮ್ಮನೆ ಸಭೆಗಳಿಗೆ ತಪ್ಪಿಸಿಕೊಳ್ಳದೇ ದಾಖಲೆಗಳೊಂದಿಗೆ ಭಾಗವಹಿಸಿ ಸರಿಯಾದ ರೀತಿಯಲ್ಲಿ ಕೆಲಸಮಾಡಿ ಎಂದು ಅಧಿಕಾರಿಗಳಿಗೆ ಚಾಟಿ ಬೀಸಿದರು.
ಫಾರಂ ನಂ. 50, 53 ಅಡಿಯಲ್ಲಿ ಅರ್ಜಿ ಸಲ್ಲಿಸಿರುವ ಫಲಾನುಭವಿಗಳ ಜಮೀನನ್ನು ಸ್ಕೆಚ್ ಮಾಡಿ ಹಕ್ಕು ಪತ್ರ ನೀಡಿ, ಕೆಂಪಯ್ಯನಪಾಳ್ಯದಲ್ಲಿ ಸರ್ಕಾರದ ಜಮೀನಿಗೆ ಅಳವಡಿಸಿರುವ ಕಲ್ಲುಗಳನ್ನು ಹೊಡೆದು ಹಾಕಿದ್ದಾರೆ. ಈ ಬಗ್ಗೆ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಸಮಸ್ಯೆ ಬಗ್ಗೆ ನಾಗರಿಕರು ಕಚೇರಿಗೆ ಬಂದು ಅರ್ಜಿ ಸಲ್ಲಿಸಿದರೆ ಸಂಬಂಧಪಟ್ಟ ಕಚೇರಿಗಳಿಗೆ ರಿಪೋರ್ಟ್ ಹಾಕಿದ್ದೀನಿ ಎಂದು ಏಕೆ ವಿಳಂಬ ಮಾಡುತ್ತೀರಾ? ಕಚೇರಿ ಅಮೆರಿಕದಲ್ಲಿದೆಯೇ? ವಾಸ್ತವಿಕ ವರದಿ ನೀಡಿ ಕಚೇರಿಗೆ ಅಲೆಸುವುದನ್ನು ತಪ್ಪಿಸಿ, ಪುಸ್ತಕ ಇಟ್ಟುಕೊಂಡು ಕೆಲಸಮಾಡದೆ ಸ್ಥಳಕ್ಕೆ ಭೇಟಿ ನೀಡಿ ವಾಸ್ತವಾಂಶ ತಿಳಿಯಿರಿ ಎಂದು ಸೂಚನೆ ನೀಡಿದರು.
ಗ್ರಾ.ಪಂ. ವ್ಯಾಪ್ತಿಯಲ್ಲಿ ನಿವೇಶನ ಇಲ್ಲದ ಅರ್ಹ ಫಲಾನುಭವಿಗಳಿಗೆ ನಿವೇಶನ ನೀಡಲು ಜಾಗ ಗುರುತಿಸಿ, ಈ ಬಗ್ಗೆ ವರದಿ ತಯಾರಿಸುವಂತೆ ಪಿಆರ್‌ಇಡಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ನ್ಯಾಯಾಲಯದಲ್ಲಿ ಕೇಸ್ ಇರುವ ವೇಳೆ ಸಬ್ ರಿಜಿಸ್ಟರ್, ಕಂದಾಯ ಅಧಿಕಾರಿಗಳು ಹಣ ಪಡೆದು ಖಾತೆ ಮಾಡಿಕೊಟ್ಟಿದ್ದಾರೆ ಎಂದು ಕೆಂಚನಹಳ್ಳಿ ಗಂಗಣ್ಣ ಶಾಸಕರ ಬಳಿ ಅಳಲು ತೋಡಿಕೊಂಡರು. ಈ ವೇಳೆ ಎಸಿ ಕೋರ್ಟ್‌ಗೆ ಹೋಗುವಂತೆ ಶಾಸಕರು ತಿಳಿಸಿದರು.
ಇದಕ್ಕೆ ಕುಪಿತಗೊಂಡ ಗಂಗಣ್ಣ, ಅಧಿಕಾರಿಗಳು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆಯಾಗಬೇಕು ಅದನ್ನು ಬಿಟ್ಟು ನಾವೇಕೆ ಎಸಿ ಕೋರ್ಟ್‌ಗೆ ಅಲೆಯಬೇಕು ಎಂದು ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾದರು. ಈ ವೇಳೆ ಶಾಸಕರು ಮಧ್ಯಪ್ರವೇಶಿಸಿ ಸಮಾಧಾನ ಪಡಿಸಿದರು.
ಶಿರಸ್ತೆದಾರ್ ಸೋಮಶೇಖರ್, ಅಕ್ಷರ ದಾಸೋಹ ಅಧಿಕಾರಿ ಗಂಗಾಧರ್, ಸಿಡಿಪಿಒ ಸುರೇಂದ್ರ, ಗ್ರಾ.ಪಂ. ಅಧ್ಯಕ್ಷೆ ಕುಸುಮಾ, ಸದಸ್ಯೆ ನಿರ್ಮಲಾ, ಜಯರಾಮು, ಕೆ.ಬಿ. ಬಾಲರಾಜು, ಸುಗ್ಗನಹಳ್ಳಿ ರಂಗಸ್ವಾಮಿ, ಜಗದೀಶ್, ಪಿಡಿಒ ವೆಂಕಟೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.