ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

16ರಿಂದ ‘ಜನತಾ ಜಲಧಾರೆ’ ಆರಂಭ

ರಾಜ್ಯದಾದ್ಯಂತ ಏಕಕಾಲಕ್ಕೆ ರಥಯಾತ್ರೆ ಸಂಚಾರ: 15 ‘ಗಂಗಾ ರಥ’ಗಳು ಸಜ್ಜು
Last Updated 6 ಏಪ್ರಿಲ್ 2022, 21:02 IST
ಅಕ್ಷರ ಗಾತ್ರ

ರಾಮನಗರ: ಜಾತ್ಯತೀತ ಜನತಾದಳದ ‘ಜನತಾ ಜಲಧಾರೆ’ ಕಾರ್ಯಕ್ರಮಕ್ಕೆ ಇದೇ 16ರಂದು ಚಾಲನೆ ದೊರೆಯಲಿದ್ದು, ನೀರಾವರಿ ವಿಷಯ ಮುಂದಿಟ್ಟುಕೊಂಡು ಚುನಾವಣಾ ರಣಕಹಳೆ ಊದಲು ಜೆಡಿಎಸ್ ಸಿದ್ಧತೆ ನಡೆಸಿದೆ. ರಾಜ್ಯದಾದ್ಯಂತ ಏಕಕಾಲದಲ್ಲಿ ಈ ಯಾತ್ರೆ ನಡೆಯಲಿರುವುದು ವಿಶೇಷ.

ಕಾಂಗ್ರೆಸ್ ಮೇಕೆದಾಟಿನಿಂದ ಬೆಂಗಳೂರುವರೆಗೆ ಪಾದಯಾತ್ರೆ ಕೈಗೊಳ್ಳುವ ಸಂದರ್ಭದಲ್ಲೇ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಈ ಯಾತ್ರೆಯನ್ನು ಘೋಷಣೆ ಮಾಡಿದ್ದರು. ಆದರೆ, ಕೋವಿಡ್ ಕಾರಣಕ್ಕೆ ಕಾರ್ಯಕ್ರಮ ಮುಂದೂಡಲ್ಪಟ್ಟಿತ್ತು. ಇದೇ ತಿಂಗಳ ಮಧ್ಯಭಾಗದಲ್ಲಿ ಇದಕ್ಕೆ ಹಸಿರು ನಿಶಾನೆ ತೋರಲಿದ್ದಾರೆ.

‘ಜಲ ಶ್ಯಾಮಲದಿಂದ ಸಸ್ಯ ಶ್ಯಾಮಲ’ ಎಂಬ ಧ್ಯೇಯದೊಂದಿಗೆ ನಡೆಯಲಿರುವ ಯಾತ್ರೆಗೆಂದೇ 15 ವಾಹನಗಳನ್ನು ವಿಶೇಷವಾಗಿ ಸಜ್ಜುಗೊಳಿಸಲಾಗುತ್ತಿದೆ.

ಏನಿದರ ಉದ್ದೇಶ: ರಾಜ್ಯದಲ್ಲಿ ನದಿ ನೀರಿನ ಸದ್ಬಳಕೆ, ಜಲಾಶಯಗಳ ಅಭಿವೃದ್ಧಿ, ನೀರಾವರಿ ಯೋಜನೆಗಳಿಗೆ ಚುರುಕು ಮುಟ್ಟಿಸುವುದು, ಪ್ರತಿ ಜಿಲ್ಲೆಯಲ್ಲೂ ನೀರಿನ ಸಮಾನತೆ ಸೇರಿದಂತೆ ವಿವಿಧ ಆಶಯದೊಂದಿಗೆ ಜೆಡಿಎಸ್ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. 31 ಜಿಲ್ಲೆಗಳಲ್ಲಿ 184ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಜಲಧಾರೆ ರಥ ಸಂಚರಿಸಲಿದೆ. ರಾಜ್ಯದಲ್ಲಿನ ನೀರಾವರಿ ಯೋಜನೆಗಳು, ಸರ್ಕಾರಗಳ ವೈಫಲ್ಯ ಹಾಗೂ ಜೆಡಿಎಸ್‌ನ ಭವಿಷ್ಯದ ಯೋಜನೆಗಳ ಕುರಿತು ವಾಹನಗಳ ಮೂಲಕ ಪ್ರಚಾರ ನಡೆಸಲಿದೆ. 15 ರಥಗಳಿಗೂ ತಲಾ ಒಬ್ಬರು ಜೆಡಿಎಸ್ ನಾಯಕರು ಸಾರಥ್ಯವಹಿಸಲಿದ್ದಾರೆ.

ನಿತ್ಯ ಗಂಗಾ ಪೂಜೆ: 15 ಹದಿನೈದು ವಾಹನಗಳಲ್ಲಿ 15 ನದಿಗಳಿಂದ ಕಳಸಗಳ ಮೂಲಕ ನದಿ ನೀರನ್ನು ಸಂಗ್ರಹಿಸಿ ಮೆರವಣಿಗೆಯಲ್ಲಿ ಒಯ್ಯಲಾಗುತ್ತದೆ. ಹೀಗೆ ನದಿಗಳಿಂದ ಸಂಗ್ರಹಿಸಲಾದ ನೀರನ್ನು ಒಂದು ಬ್ರಹ್ಮ ಕಳಸದಲ್ಲಿ ಸಂಗ್ರಹಿಸಿ ಗಂಗಾ ಪೂಜೆ ಮಾಡಿ ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಅದಕ್ಕೆ ಮುಂದಿನ ಒಂದು ವರ್ಷ ನಿತ್ಯ ಬೆಳಿಗ್ಗೆ–ಸಂಜೆ ಗಂಗಾ ಪೂಜೆ ನಡೆಯಲಿದೆ. ಕಾರ್ಯಕ್ರಮದ ಸಮಾರೋಪವಾಗಿ ಮೇ ಮೊದಲ ವಾರದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್‌ ಸಂಕಲ್ಪ ಸಮಾವೇಶಕ್ಕೆ ಜೆಡಿಎಸ್
ಉದ್ದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT