ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೂರಿಗೆ ತಿಂಗಳೊಳಗೆ ಪರಿಹಾರ: ಅಧಿಕಾರಿಗಳಿಗೆ ತಾಕೀತು

ಅಕ್ಕೂರಿನಲ್ಲಿ ಜನತಾ ದರ್ಶನ ನಡೆಸಿದ ಮುಖ್ಯಮಂತ್ರಿ ಕುಮಾರಸ್ವಾಮಿ
Last Updated 17 ಜೂನ್ 2019, 15:53 IST
ಅಕ್ಷರ ಗಾತ್ರ

ಚನ್ನಪಟ್ಟಣ ( ರಾಮನಗರ): ಜನತಾ ದರ್ಶನದಲ್ಲಿ ಸಲ್ಲಿಕೆಯಾಗುವ ಅರ್ಜಿಗಳಿಗೆ ತಿಂಗಳ ಒಳಗೆ ಪರಿಹಾರ ದೊರಕಿಸಿಕೊಡಬೇಕು. ಇಲ್ಲವಾದಲ್ಲಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಎಚ್ಚರಿಸಿದರು.

ಅಕ್ಕೂರು ಗ್ರಾಮದಲ್ಲಿ ಸೋಮವಾರ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಕ್ಕೂರು ಜಿ.ಪಂ. ಕ್ಷೇತ್ರವೊಂದರಲ್ಲಿಯೇ 1001 ಅರ್ಜಿಗಳು ಸಲ್ಲಿಕೆಯಾಗಿವೆ. ಇದರಲ್ಲಿ ಜಿಲ್ಲಾಧಿಕಾರಿ ವ್ಯಾಪ್ತಿಗೆ 403, ಜಿ.ಪಂ. ಸಿಇಒ ವ್ಯಾಪ್ತಿಗೆ 199 ಹಾಗೂ ಕಂದಾಯ ಇಲಾಖೆ ವ್ಯಾಪ್ತಿಗೆ 60 ಅರ್ಜಿಗಳು ಸೇರಿವೆ. ಪ್ರತಿ ಅರ್ಜಿಗೂ ಸ್ವೀಕೃತಿ ಪತ್ರ ನೀಡಲಾಗಿದೆ. ಮತ್ತೆ ಜನರು ನನ್ನ ಬಳಿಗೆ ಬರಬೇಕಿಲ್ಲ. ಎಲ್ಲವನ್ನೂ ಕಾಲಮಿತಿಯೊಳಗೆ ಇತ್ಯರ್ಥಪಡಿಸಲಾಗುವುದು ಎಂದು ಭರವಸೆ ನೀಡಿದರು.

‘ದೇವಸ್ಥಾನ ನಿರ್ಮಾಣ, ಕಾಂಕ್ರೀಟ್ ರಸ್ತೆ, ಒಳಚರಂಡಿ, ಇಂಗ್ಲಿಷ್ ಮಾಧ್ಯಮ ಶಾಲೆ ಮೊದಲಾದವುಗಳಿಗೆ ಜನರು ಮನವಿ ಮಾಡಿದ್ದಾರೆ. ಇಂದು ಅಕ್ಕೂರು ಜಿ.ಪಂ. ಕ್ಷೇತ್ರ ವ್ಯಾಪ್ತಿಯಲ್ಲಿಯೇ ₨60 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದ್ದು, ಇದರಿಂದ ಪ್ರತಿ ಹಳ್ಳಿಯಲ್ಲಿ ಕಾಂಕ್ರಿಟ್ ರಸ್ತೆ, ಒಳಚರಂಡಿ ನಿರ್ಮಾಣ ಆಗಲಿದೆ’ ಎಂದರು.

ಸಸ್ಪೆಂಡ್ ಮಾಡ್ತೀನಿ: ‘ಕಂದಾಯ ಇಲಾಖೆ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಹೆಚ್ಚಿನ ದೂರು ಬಂದಿವೆ. ತಹಶೀಲ್ದಾರ್. ಆರ್.ಐ. ಹಾಗೂ ವಿ.ಎ.ಗಳು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು. ಜನರನ್ನು ಸರ್ಕಾರಿ ಕಚೇರಿಗಳಿಗೆ ಅಲೆಸಿದರೆ ಅಮಾನತು ಮಾಡುತ್ತೇನೆ’ ಎಂದು ಎಚ್ಚರಿಸಿದರು.

‘ಕಳೆದ ಒಂದು ವರ್ಷದಲ್ಲಿ ನನ್ನ ಜನರನ್ನು ಅರ್ಥ ಮಾಡಿಕೊಂಡಿಲ್ಲ ಎಂಬ ಕೊರಗು ಇದೆ. ಹೀಗಾಗಿ ಮತ್ತೆ ಗ್ರಾಮ ವಾಸ್ತವ್ಯ ಆರಂಭಿಸುತ್ತಿದ್ದೇನೆ. ಜಿಲ್ಲೆಯಲ್ಲೂ ಮುಂದೊಂದು ದಿನ ಗ್ರಾಮ ವಾಸ್ತವ್ಯ ಮಾಡುತ್ತೇನೆ’ ಎಂದರು.

‘ವೃದ್ಧಾಪ್ಯ ವೇತನವನ್ನು ಮುಂದಿನ ವರ್ಷದಿಂದ 1 ಸಾವಿರದಿಂದ 2 ಸಾವಿರಕ್ಕೆ ಏರಿಸಲಾಗುವುದು. ವಿಧವಾ ವೇತನ ವಿತರಣೆ ವಿಳಂಬ ಆಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದರು.

ಇದೇ ಸಂದರ್ಭ ರೈತರಿಗೆ ಸಾಲಮನ್ನಾ ಯೋಜನೆಯ ಅಡಿ ಋಣಮುಕ್ತ ಪತ್ರ, ಬೆಳೆಸಾಲ ಮನ್ನಾ ಪಾವತಿ ಪತ್ರ, ವಿವಿಧ ವಸತಿ ಯೋಜನೆಗಳು, ಭಾಗ್ಯಲಕ್ಷ್ಮಿ ಬಾಂಡ್‌ ಫನಾನುಭವಿಗಳಿಗೆ ಸಾಂಕೇತಿಕವಾಗಿ ಪತ್ರಗಳನ್ನು ವಿತರಿಸಲಾಯಿತು. ಅಂಗವಿಕಲರಿಗೆ ವೀಲ್‌ಚೇರ್‌ ವಿತರಣೆಗಾಗಿ ಮುಖ್ಯಮಂತ್ರಿ ತಾವೇ ಕೆಳಗೆ ಇಳಿದುಬಂದರು.

ಜಿಲ್ಲಾಧಿಕಾರಿ ರಾಜೇಂದ್ರ, ಜಿ.ಪಂ. ಸಿಇಒ ಮುಲ್ಲೈ ಮುಹಿಲನ್, ಜಿ.ಪಂ. ಅಧ್ಯಕ್ಷ ಎಂ.ಎನ್‌. ನಾಗರಾಜು, ಉಪಾಧ್ಯಕ್ಷೆ ವೀಣಾ ಚಂದ್ರು, ಸದಸ್ಯ ಎಸ್‌. ಗಂಗಾಧರ್‌, ಸ್ಥಳೀಯ ಮುಖಂಡರು ಇದ್ದರು.

**
ಅಕ್ಕೂರಿಗೆ ಅನ್ಯಾಯ ಮಾಡಿಲ್ಲ
' ಅಕ್ಕೂರು ಕೆರೆಗೆ ಬೇಕೆಂತಲೇ ನೀರು ತುಂಬಿಸಿಲ್ಲ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಅದನ್ನು ನಂಬಬೇಡಿ' ಎಂದು ಕುಮಾರಸ್ವಾಮಿ ಮನವಿ ಮಾಡಿದರು.

ಕೆರೆ ತುಂಬಿಸುವ ವಿಚಾರದಲ್ಲಿ ತಾಲ್ಲೂಕಿನಲ್ಲಿ ದೊಡ್ಡ ನಾಟಕವೇ ನಡೆದಿದೆ. ಆದರೆ ಇಗ್ಗಲೂರು ಜಲಾಶಯ ತುಂಬಿಸಿದ್ದು ಯಾರೆಂದು ಎಲ್ಲರಿಗೂ ಗೊತ್ತು ಎಂದು ಯೋಗೇಶ್ವರ್ ಗೆ ಟಾಂಗ್ ನೀಡಿದರು. ಕಳೆದ ವರ್ಷ ತಾಲ್ಲೂಕಿನ ಕೇವಲ 25 ಕೆರೆ ತುಂಬಿಸಲಾಗಿದೆ. ಹಂತಹಂತವಾಗಿ ಎಲ್ಲ ಕೆರೆಗಳೂ ತುಂಬಲಿವೆ. ಅಕ್ಕೂರು ಕೆರೆಯಲ್ಲಿ ಮರಳು ಎತ್ತಿದ್ದರಿಂದ ಬೇಗ ನೀರು ಇಂಗಿಹೋಗಿದೆ. ಕೆರೆ ನೀರು ಬಂತೆಂದು ಜನರು ಭತ್ತ, ಕಬ್ಬು ಬೆಳೆಯಬಾರದು. ನೀರನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.

**
ಸಾಲಮನ್ನಾಕ್ಕೆ ₹25 ಸಾವಿರ ಕೋಟಿ
‘ಸಾಲಮನ್ನಾಕ್ಕೆ ಕಳೆದ ಬಜೆಟ್ ನಲ್ಲಿ ₹12 ಸಾವಿರ ಕೋಟಿ ಹಾಗೂ ಈ ಬಜೆಟ್ ನಲ್ಲಿ ₹13 ಸಾವಿರ ಕೋಟಿ ಅನುದಾನ ನೀಡಿದ್ದೇನೆ ಎಂದು ಕುಮಾರಸ್ವಾಮಿ ತಿಳಿಸಿದರು.

‘ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರಾಜ್ಯದ ರೈತರ ₹34 ಸಾವಿರ ಕೋಟಿ ಕೃಷಿ ಸಾಲ ಇರುವುದಾಗಿ ಅಧಿಕಾರಿಗಳು ಆರಂಭದಲ್ಲಿ ಮಾಹಿತಿ ನೀಡಿದ್ದರು. ನಂತರದಲ್ಲಿ ರೈತರಿಂದ ಅರ್ಜಿಗಳನ್ನು ಪಡೆದು ಪರಿಶೀಲಿಸಲಾಗಿ ಕೆಲವು ಕಡೆ ಸಂಘಗಳ ಕಾರ್ಯದರ್ಶಿಗಳೇ ರೈತರ ದಾಖಲೆ ದುರ್ಬಳಕೆ ಮಾಡಿಕೊಂಡು ಸಾಲ ಪಡೆದಿರುವುದು ಕಂಡುಬಂದಿತು. ಇದೆನ್ನೆಲ್ಲ ಕಳೆದು ಸಾಲಮನ್ನಾದ ಮೊತ್ತ ಕಡಿಮೆ ಆಗಿದೆ’ ಎಂದು ಸಮಜಾಯಿಷಿ ನೀಡಿದರು.

**
ಕೆ.ಆರ್. ಪೇಟೆ ರೈತ ಸುರೇಶ್‌ ಆತ್ಮಹತ್ಯೆ ಮಾಡಿಕೊಂಡು ಕುಮಾರಸ್ವಾಮಿ ತನ್ನ ಅಂತ್ಯಕ್ರಿಯೆಗೆ ಬರಬೇಕು ಎಂದಿದ್ದು ತಿಳಿದು ನೋವಾಯಿತು. ಕೃಷಿಕರು ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು
- ಎಚ್‌.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT