ಗುರುವಾರ , ಡಿಸೆಂಬರ್ 1, 2022
20 °C
ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪ

ಗಲಾಟೆಗೆ ಪೊಲೀಸರೇ ಕಾರಣ: ನಿಖಿಲ್ ಕುಮಾರಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಪಟ್ಟಣ: ಇಲ್ಲಿ ಶನಿವಾರ ನಡೆದ ಅಹಿತಕರ ಘಟನೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇರ ಕಾರಣ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.

ಭಾನುವಾರ ನಗರಕ್ಕೆ ಆಗಮಿಸಿ ಡಿವೈಎಸ್ಪಿ ಓಂಪ್ರಕಾಶ್ ಅವರನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿ ಶನಿವಾರ ನಡೆದ ಘಟನೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ನೆನ್ನೆಯ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಉಲ್ಲಂಘನೆ ಮಾಡಲಾಗಿತ್ತು. ಜಿಲ್ಲಾಧಿಕಾರಿಗಳು ಕಾರ್ಯಕ್ರಮ ರದ್ದು ಮಾಡಿದ ಆದೇಶ ಪಾಲನೆ ಮಾಡದೇ, ಪೊಲೀಸರು ಕಾರ್ಯಕ್ರಮಕ್ಕೆ ಸಹಕಾರಿ ಸಿದ್ದಾರೆ. ಪೊಲೀಸ್ ಕಾರ್ಯಕ್ರಮವನ್ನು ಏಕೆ ತಡೆಗಟ್ಟಲಿಲ್ಲ?. ಇದೇ ಘಟನೆಗೆ ಕಾರಣವಾಗಿದೆ’ ಎಂದು ದೂರಿದರು.

‘ಪೊಲೀಸ್ ಇಲಾಖೆ ಜೆಡಿಎಸ್ ಪಕ್ಷದ 14 ಮಂದಿ ಕಾರ್ಯಕರ್ತರ ಮೇಲೆ ಎಫ್.ಐ.ಆರ್. ದಾಖಲು ಮಾಡಿದೆ. ಲಾಠಿಪ್ರಹಾರದಲ್ಲಿ ಏಟು ತಿಂದು ಆಸ್ಪತ್ರೆಯಲ್ಲಿ ದಾಖಲಾಗಿರುವ ಅಮಾಯಕ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಡಿವೈಎಸ್ಪಿ ಅವರನ್ನು ಪ್ರಶ್ನಿಸಿದರೆ ಅವರ ಬಳಿ ಉತ್ತರವಿಲ್ಲ. ವೀಡಿಯೊ ಆಧಾರದ ಮೇಲೆ ಪ್ರಕರಣ ದಾಖಲಿಸಿದ್ದೇವೆ ಎನ್ನುತ್ತಾರೆ. ವೀಡಿಯೊ ಇದ್ದರೆ ಯಾರನ್ನಾದರೂ ಬಂಧಿಸಬಹುದಾ’ ಎಂದು ಪ್ರಶ್ನಿಸಿದರು.

‘ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ ನಾರಾಯಣ ಕಾರ್ಯಕ್ರಮಕ್ಕೆ ಬಾರದೆ ಗೌರವ ಉಳಿಸಿಕೊಂಡಿದ್ದಾರೆ. ಯೋಗೇಶ್ವರ್ ಅವರು ಈ ಘಟನೆ ಮೂಲಕ ರಾಜಕೀಯ ಲಾಭಕ್ಕಾಗಿ ಹವಣಿಸುತ್ತಿದ್ದಾರೆ. ಜನರನ್ನು ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ. ಇದನ್ನು ಯೋಗೇಶ್ವರ್ ಅರಿತುಕೊಳ್ಳಬೇಕು. ಪ್ರಜ್ಞಾವಂತ ಜನರಿಗೆ ಯಾರು ಅಭಿವೃದ್ಧಿ ಮಾಡಿದ್ದಾರೆ ಎಂದು ಗೊತ್ತಿದೆ. ಚನ್ನಪಟ್ಟಣದ ಜನರನ್ನು ದಾರಿ ತಪ್ಪಿಸಲು ಸಾಧ್ಯವಿಲ್ಲ’ ಎಂದು ವಾಗ್ದಾಳಿ ನಡೆಸಿದರು.

ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಯಮುತ್ತು, ಮುಖಂಡರಾದ ಹಾಪ್ ಕಾಮ್ಸ್ ದೇವರಾಜು, ಗೋವಿಂದಹಳ್ಳಿ ನಾಗರಾಜು, ಕುಕ್ಕೂರುದೊಡ್ಡಿ ಜಯರಾಂ, ಎಂ.ಸಿ. ಕರಿಯಪ್ಪ, ರೇಖಾ ಉಮಾಶಂಕರ್ ಇತರರು ಇದ್ದರು.

‘ಸಿಪಿವೈ ಬೆಂಬಲಿಗರ ಮೇಲೂ ಪ್ರಕರಣ ದಾಖಲಿಸಿ’

‘ಪೊಲೀಸರಿಗೆ ಈ ಘಟನೆಯನ್ನು ಕೈಬಿಡಲು ಮನವಿ ಮಾಡಿದ್ದೇನೆ. ಬೇರೆಯವರಂತೆ ಅಹಂಕಾರದಿಂದ ನಡೆದುಕೊಂಡಿಲ್ಲ. ಮನವಿ ಸಲ್ಲಿಸಿ ಗೌರವಯುತವಾಗಿ ನಡೆದುಕೊಂಡಿದ್ದೇನೆ. ಇದನ್ನು ಇಲ್ಲಿಗೆ ಕೈಬಿಟ್ಟರೇ ಸರಿ. ಇಲ್ಲದಿದ್ದರೆ ಹೋರಾಟ ನಡೆಸುವುದು ನಮಗೂ ಗೊತ್ತಿದೆ. ಪಾರದರ್ಶಕವಾಗಿ ತನಿಖೆ ಮಾಡಿದರೆ ಯಾವುದೇ ಅಭ್ಯಂತರವಿಲ್ಲ. ಸಿಪಿವೈ ಬೆಂಬಲಿಗರ ಮೇಲೂ ಪ್ರಕರಣ ದಾಖಲು ಮಾಡಲಿ’ ಎಂದು ನಿಖಿಲ್ ಕುಮಾರಸ್ವಾಮಿ ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು