ಮಂಗಳವಾರ, ಸೆಪ್ಟೆಂಬರ್ 21, 2021
29 °C

ವರ್ಚಸ್ಸು ವೃದ್ಧಿಗೆ ಬಿಜೆಪಿ ಜನಾಶೀರ್ವಾದ ಯಾತ್ರೆ; ಎಚ್‌ಡಿಕೆ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ‘ನಶಿಸುತ್ತಿರುವ ವರ್ಚಸ್ಸು ವೃದ್ಧಿಗೆ ಬಿಜೆಪಿಯ ಕೇಂದ್ರ ಸಚಿವರು ರಾಜ್ಯದಲ್ಲಿ ಜನಾಶೀರ್ವಾದ ಯಾತ್ರೆ ಹಮ್ಮಿಕೊಂಡಿದ್ದು, ಅದರಿಂದ ಯಾವುದೇ ಪ್ರಯೋಜನ ಇಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಟೀಕಿಸಿದರು.

ನಗರದಲ್ಲಿ ಸೋಮವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು ‘ಕೋವಿಡ್ ಮೂರನೇ ಅಲೆ ನಿಯಂತ್ರಿಸಬೇಕಾದ ಸರ್ಕಾರಗಳೇ ಇಂತಹ ಪ್ರವಾಸ ಹಮ್ಮಿಕೊಂಡಿರುವುದು ಆತಂಕಕಾರಿ ಸಂಗತಿ. ಕೋವಿಡ್ ಅನ್ನು ಲಘುವಾಗಿ ಪರಿಗಣಿಸಬೇಡಿ. ಯಾತ್ರೆಗಳ ಬದಲಿಗೆ ಜನರ ಕಷ್ಟಗಳನ್ನು ನೋಡಿ ಅವರಿಗೆ ಸರ್ಕಾರದಿಂದ ಆರ್ಥಿಕ ನೆರವು ತಲುಪಿಸುವ ಪ್ರಯತ್ನ ಮಾಡಿ’ ಎಂದು ಸಲಹೆ ನೀಡಿದರು.

ಯಾರಿಗೆ ವರದಿ ಕೊಟ್ಟಿದ್ದರು?: ಜಾತಿಗಣತಿ ವರದಿಯನ್ನು ಕುಮಾರಸ್ವಾಮಿ ಸ್ವೀಕಾರ ಮಾಡಿಲ್ಲ ಎಂಬ ಸಿದ್ದರಾಮಯ್ಯರ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ ಎಚ್‌ಡಿಕೆ ‘ನನ್ನ ಹತ್ತಿರ ಯಾರೂ ವರದಿ ಕೊಟ್ಟಿಲ್ಲ. ನಮ್ಮ ಸಮ್ಮಿಶ್ರ ಸರ್ಕಾರದಲ್ಲಿ ಅವರೇ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದರು. ಜನಗಣತಿ ವರದಿ ಬಗ್ಗೆ ನನ್ನ ಜೊತೆ ಚರ್ಚೆ ಮಾಡಿದ್ದರ? ನನ್ನ ಬಳಿ ವರದಿ ಇದೆ ತೆಗೆದುಕೊಳ್ಳಿ ಅಂದ ಬಂದಿದ್ರಾ?’ ಎಂದು ಮರು ಪ್ರಶ್ನಿಸಿದರು.

‘ಇವಾಗ ಅಹಿಂದ ಹೆಸರಿನಲ್ಲಿ ಏನೋ ಮಾಡಲು ಹೊರಟಿದ್ದರಲ್ಲಾ ಅವರು ಮುಖ್ಯಮಂತ್ರಿ ಆಗಿದ್ದಾಗ ಐದು ವರ್ಷದಲ್ಲಿ ಏನ್‌ ಮಾಡಿದ್ದಾರೆ ಅಂತ ಗೊತ್ತಿದೆ’ ಎಂದು ಟೀಕಿಸಿದರು.

ನೆಹರು–ವಾಜಪೇಯಿ ಕುರಿತು ಸಿ.ಟಿ. ರವಿ ಮತ್ತು ಪ್ರಿಯಾಂಕ ಖರ್ಗೆ ವಾಗ್ವಾದದ ಕುರಿತು ಪ್ರತಿಕ್ರಿಯಿಸಿ ‘ಯಾರ ಹೆಸರುಗಳ ಬಗ್ಗೆ ಈ ಇಬ್ಬರು ಚರ್ಚೆ ಮಾಡುತ್ತಿದ್ದಾರೋ ಅವರ ಕಾಲದಲ್ಲಿ ಇವರುಗಳು ಹುಟ್ಟೇ ಇರಲಿಲ್ಲ. ಅಂತಹವರ ಬಗ್ಗೆ ಮಾತನಾಡುವುದು ಸಣ್ಣತನ. ಸಾರ್ವಜನಿಕ ಜೀವನದಲ್ಲಿ ಇನ್ನೊಬ್ಬರ ಬಗ್ಗೆ ಮಾತನಾಡುವಾಗ ಗೌರವಯುತವಾಗಿ ನಡೆದುಕೊಳ್ಳಬೇಕು. ಕೀಳುಮಟ್ಟದ ಭಾಷೆ ಬಳಸಬಾರದು’ ಎಂದು ಕಿವಿಮಾತು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು