ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌ ಕಾರ್ಯಕರ್ತರಿಗೆ ಅನಾಥ ಪ್ರಜ್ಞೆ: ಸಿ.ಪಿ. ಯೋಗೇಶ್ವರ್‌ ಲೇವಡಿ

Last Updated 16 ಏಪ್ರಿಲ್ 2019, 13:32 IST
ಅಕ್ಷರ ಗಾತ್ರ

ರಾಮನಗರ: ‘ಜಿಲ್ಲೆಯ ಜೆಡಿಎಸ್ ಕಾರ್ಯಕರ್ತರಲ್ಲಿ ಅನಾಥ ಪ್ರಜ್ಞೆ ಕಾಡುತ್ತಿದ್ದು, ಬಿಜೆಪಿ ಅಭ್ಯರ್ಥಿ ಅಶ್ವಥ್‌ ನಾರಾಯಣರನ್ನು ಬೆಂಬಲಿಸಲಿದ್ದಾರೆ’ ಎಂದು ಬಿಜೆಪಿ ಮುಖಂಡ ಸಿ.ಪಿ. ಯೋಗೇಶ್ವರ್‌ ವಿಶ್ವಾಸ ವ್ಯಕ್ತಪಡಿಸಿದರು.

‘ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆಗೆ ಬದಲಾಗಿ ನೇರ ಸ್ಪರ್ಧೆ ಇದೆ. ಜೆಡಿಎಸ್‌ ನಾಯಕರು ಜಿಲ್ಲೆಯಲ್ಲಿ ಕಾರ್ಯಕರ್ತರ ಮೂರ್ನಾಲ್ಕು ದಶಕಗಳ ಹೋರಾಟಕ್ಕೆ ಅಂತ್ಯ ಹಾಡಿದ್ದಾರೆ. ಹೀಗಾಗಿ ಆ ಪಕ್ಷದ ಕಾರ್ಯಕರ್ತರಲ್ಲಿ ಚುನಾವಣೆ ಬಗ್ಗೆ ನಿರ್ಲಿಪ್ತ ಭಾವ ಇದೆ. ಅವರು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವ ಸಾಧ್ಯತೆ ಕಡಿಮೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು.

‘ಪ್ರಾದೇಶಿಕ ಪಕ್ಷಗಳು ರಾಷ್ಟ್ರೀಯ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದು ಅಪಾಯಕಾರಿ. ಕುಮಾರಸ್ವಾಮಿ ಹಾಗೂ ಡಿ.ಕೆ. ಶಿವಕುಮಾರ್ ಕೇವಲ ಅಧಿಕಾರಕ್ಕಾಗಿ ಹೊಂದಾಣಿಕೆ ಮಾಡಿಕೊಂಡಿದ್ದು, ಅದರಿಂದ ಜಿಲ್ಲೆ ಯಾವುದೇ ಅಭಿವೃದ್ಧಿ ಕಂಡಿಲ್ಲ. ಎಚ್‌ಡಿಕೆ ದಂಪತಿ ಜಿಲ್ಲೆ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳಿದ್ದು, ಡಿ.ಕೆ. ಸಹೋದರರು ಐ.ಟಿ. ನ್ಯಾಯಾಲಯದ ಬಾಗಿಲಿಗೆ ಅಲೆದಾಡುತ್ತಿದ್ದಾರೆ. ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರ ಜೀವಂತವಾಗಿ ಇದೆಯೇ ಎಂಬ ಭಾವನೆ ಜನರಲ್ಲಿದೆ’ ಎಂದು ಲೇವಡಿ ಮಾಡಿದರು.

‘ಡಿ.ಕೆ. ಸಹೋದರರು ಇಡೀ ರಾಜ್ಯ ರಾಜಕೀಯಕ್ಕೆ ಕಳಂಕ. ಕಾಂಗ್ರೆಸ್‌ನಲ್ಲೂ ಅವರಿಗೆ ಸಹಮತ ಇಲ್ಲ. ಕೆಲವರು ಒಲ್ಲದ ಮನಸ್ಸಿಂದ ಪ್ರಚಾರಕ್ಕೆ ಬರುತ್ತಿದ್ದಾರೆ. ನರೇಗಾ ಅನುದಾನ ಲೂಟಿ ಮಾಡಿದ್ದೇ ಸುರೇಶ್ ಸಾಧನೆ. ಸಹೋದರರ ಅಕ್ರಮ ಗಣಿಗಾರಿಕೆ ಕುರಿತು ಎಸ್‌ಐಟಿ ಕನಕಪುರದಲ್ಲಿ ದಾಖಲೆ ಕೆದಕುತ್ತಿದೆ. ಈ ಚುನಾವಣೆ ಬಳಿಕ ಅವರ ಒಂದೊಂದೇ ಹಗರಣಗಳು ಹೊರಬರಲಿವೆ’ ಎಂದು ಎಚ್ಚರಿಸಿದರು.

‘ಚುನಾವಣೆಯಲ್ಲಿ ಸ್ಪರ್ಧಿಸುವಂತೆ ನನ್ನ ಗಂಡಸ್ತನಕ್ಕೆ ಅವರು ಸವಾಲು ಹಾಕಿದ್ದಾರೆ. ನಾನೇನಾದರೂ ಸ್ಪರ್ಧಿಸಿದ್ದರೆ ಮೊದಲ ದಿನವೇ ಗೆಲ್ಲುತ್ತಿದ್ದೆ. ಚನ್ನಪಟ್ಟಣದಲ್ಲಿ ನನ್ನ ಭವಿಷ್ಯ ಕಳೆದುಕೊಂಡಿದ್ದು, ಅಲ್ಲಿಯೇ ಹುಡುಕಿಕೊಳ್ಳುತ್ತೇನೆ’ ಎಂದರು.

‘ಲೋಕಸಭಾ ಚುನಾವಣೆ ಬಳಿಕ ರಾಜ್ಯ ಸರ್ಕಾರ ಬೀಳುವುದು ಖಚಿತ. ಇದನ್ನು ಕುಮಾರಸ್ವಾಮಿ, ಸಿದ್ದರಾಮಯ್ಯ ಅವರೇ ಹೇಳುತ್ತಿದ್ದಾರೆ. ಶಿವಕುಮಾರ್‌ ಅಧಿಕಾರ ದಾಹದಿಂದ ಕುಮಾರಸ್ವಾಮಿ ಬೆನ್ನ ಹಿಂದೆ ಬಿದ್ದಿದ್ದಾರೆ. ಅವರು ಮಂತ್ರಿಯಾಗಲು ಮುಂದೊಂದು ದಿನ ಬಿಜೆಪಿಗೂ ಬರಬಹುದು’ ಎಂದರು.

ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯವು ಮೆಗಾಸಿಟಿ ವಂಚನೆ ಪ್ರಕರಣದಲ್ಲಿ ತಮ್ಮನ್ನು ಖುಲಾಸೆ ಮಾಡಿರುವುದಕ್ಕೆ ಅವರು ಹರ್ಷ ವ್ಯಕ್ತಪಡಿಸಿದರು.

‘ಚುನಾವಣಾ ಅಕ್ರಮಕ್ಕೆ ಹುನ್ನಾರ’

ಚುನಾವಣೆಯಲ್ಲಿ ರಾಮನಗರ ಜಿಲ್ಲೆಯಲ್ಲಿಯೂ ಹಣದ ಹೊಳೆ ಹರಿಯುವ ಸಾಧ್ಯತೆಗಳಿವೆ. ಹೀಗಾಗಿ ಐ.ಟಿ. ಇ.ಡಿ. ಅಧಿಕಾರಿಗಳು ಇತ್ತಲೂ ಗಮನ ಹರಿಸಬೇಕು ಎಂದು ಯೋಗೇಶ್ವರ್‌ ಮನವಿ ಮಾಡಿದರು.

‘ತಮಿಳುನಾಡು ಗಡಿಗೆ ಹೊಂದಿಕೊಂಡಂತೆ ಇರುವ 2–3 ಹೋಬಳಿಗಳಲ್ಲಿ ತಮಿಳರನ್ನು ಕರೆತಂದು ಕಳ್ಳ ಮತ ಹಾಕಿಸಲು ಸಿದ್ಧತೆ ನಡೆದಿದೆ. ಈ ಬಗ್ಗೆ ಈಗಾಗಲೇ ನಮ್ಮ ಅಭ್ಯರ್ಥಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ’ ಎಂದರು.

*ಸುರೇಶ್‌ ಹಲವು ವಿಚಾರಗಳಲ್ಲಿ ಕುಮಾರಸ್ವಾಮಿಗೆ ಅಡ್ಡಗಾಲು ಹಾಕಿದ್ದಾರೆ. ಹೀಗಾಗಿ ಅವರು ಗೆಲ್ಲುವುದು ಎಚ್‌ಡಿಕೆಗೆ ಮನಸ್ಸಾರೆ ಇಷ್ಟವಿಲ್ಲ
–ಸಿ.ಪಿ. ಯೋಗೇಶ್ವರ್‌,ಬಿಜೆಪಿ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT