ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರೆಯಾಗುವ ಜನಪದ ಗೀತೆಗಳ ಮೂಲ ಧಾಟಿ

ಶಾಂತಲಾ ಚಾರಿಟಬಲ್ ಟ್ರಸ್ಟ್ ವತಿಯಿಂದ ತಿಂಗಳ ಕಲಾ ಬೆಳಕು ಸಂವಾದ
Last Updated 8 ಸೆಪ್ಟೆಂಬರ್ 2019, 13:58 IST
ಅಕ್ಷರ ಗಾತ್ರ

ರಾಮನಗರ: ಆಧುನಿಕತೆಯ ಭರಾಟೆಯಲ್ಲಿ ಜನಪದ ಗೀತೆಗಳ ಮೂಲ ಧಾಟಿಗಳು ಮರೆಯಾಗುತ್ತಿದ್ದು, ಅವುಗಳನ್ನು ಉಳಿಸಲು ಪ್ರಯತ್ನಿಸಬೇಕಾಗಿದೆ ಎಂದು 79 ವರ್ಷದ ಜನಪದ ಹಿರಿಯ ಗಾಯಕ ಕಾನ್‌ಕಾನಳ್ಳಿ ಚಿಕ್ಕಮರಿಗೌಡ ಹೇಳಿದರು.

ಶಾಂತಲಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಇಲ್ಲಿನ ಶಾಂತಲಾ ಕಲಾ ಕೇಂದ್ರದ ದರ್ಪಣ ಸಭಾಂಗಣದಲ್ಲಿ ಶನಿವಾರ ಸಂಜೆ ನಡೆದ ತಿಂಗಳ ಕಲಾ ಬೆಳಕು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೆಲವರು ಮೂಲ ಜನಪದ ಧಾಟಿಗಳನ್ನು ಚಲನಚಿತ್ರಗಳಲ್ಲಿ ಬಳಸಿಕೊಂಡು ಸ್ವತಂತ್ರ ಗೀತೆಗಳನ್ನು ರಚಿಸುತ್ತಿದ್ದಾರೆ. ಇನ್ನೂ ಕೆಲವರು ಜನಪದ ಧಾಟಿಯಲ್ಲಿ ಸ್ವರವಿತ ಕವನಗಳನ್ನು ಪ್ರಚಾರ ಮಾಡುತ್ತಿದ್ದು ಜನರಿಗೆ ಯಾವುದು ಮೂಲ ಜನಪದ, ಯಾವುದು ಜನಪದವಲ್ಲ ಎಂಬ ಬಗೆಗೆ ಗೊಂದಲ ಉಂಟಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮೂಲ ಜನಪದ ಗೀತೆಗಳನ್ನು ಹೆಚ್ಚು ಹೆಚ್ಚು ಪ್ರಚಾರಕ್ಕೆ ತರುವ ಅಗತ್ಯವಿದೆ ಎಂದು ತಿಳಿಸಿದರು.

ಜನಪದ ಉಳಿಯಬೇಕಾದರೆ ಶಿಷ್ಯ ಪರಂಪರೆಯನ್ನು ಬೆಳೆಸಬೇಕು. ಜೀವನದಲ್ಲಿ ಸತ್ಯವನ್ನು ಪ್ರತಿಪಾದಿಸುವುದೆ ಜನಪದ ಸಾಹಿತ್ಯವಾಗಿದೆ. ಸ್ತುತಿ ಗೀತೆಗಳು, ಸಾಂಸಾರಿಕ ಗೀತೆಗಳು, ಪ್ರೇಮ ಗೀತೆಗಳು, ನೀತಿ ಗೀತೆ, ಸಂವಾದ ಗೀತೆ, ಸಂಕೀರ್ಣ ಗೀತೆ, ಕಥನ ಗೀತೆ, ಪೌರಾಣಿಕ ಗೀತೆ ಎಂಬ 8 ವಿಧಗಳು ಜನಪದ ಗೀತೆಗಳಲ್ಲಿವೆ ಎಂದು ಅವರು ಹೇಳಿದರು.

‘1941 ರಲ್ಲಿ ರೈತ ಕುಟುಂಬದಲ್ಲಿ ಜನಿಸಿದೆ. ನನ್ನ ತಾಯಿ, ಅಕ್ಕ ಮತ್ತು ಅಣ್ಣನ ಗಾಯನದಿಂದ ಪ್ರೇರಿತನಾಗಿ ಜನಪದ ಗಾಯಕನಾಗಿ ರೂಪುಗೊಂಡೆ. ಗಾಂಧಿವಾದ ಕರಿಯಪ್ಪನವರ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕನಾಗಿ ಕೆಲಸಕ್ಕೆ ಸೇರಿಕೊಂಡೆ. 1957 ರಿಂದ 1978ರ ವರೆಗೆ ಆಕಾಶವಾಣಿಯಲ್ಲಿ ಗಾಯಕನಾಗಿ 31 ವರ್ಷ ಸೇವೆ ಸಲ್ಲಿಸಿದೆ’ ಎಂದು ತಿಳಿಸಿದರು.

‘ದೂರದರ್ಶನ ಚಂದನ ವಾಹಿನಿಯಲ್ಲಿ 2010 ರಿಂದ ಈವರೆಗೆ ಸೇವೆ ಸಲ್ಲಿಸುತ್ತಿದ್ದೇನೆ. 1972 ರಿಂದ 1999 ರವರೆಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಚಾರ ಕಾರ್ಯದಲ್ಲಿ ಗಾಯನದ ಮೂಲಕ ಸೇವೆ ಸಲ್ಲಿಸಿದ್ದೇನೆ. ಸಾವಿರಾರು ಮಕ್ಕಳಿಗೆ ಕಲಿಸಿದ್ದೇನೆ, ಈಗಲೂ ಕಲಿಸಿ ಕೊಡುತ್ತಿದ್ದೇನೆ. 2018ರಲ್ಲಿ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ’ ಎಂದು ತಿಳಿಸಿದರು.

ಜನಪದ ಶುದ್ಧ ಸಾಹಿತ್ಯ ಒಳಗೊಂಡಿದ್ದು, ಅದರ ಮೂಲ ಮಟ್ಟುಗಳು ಕೆಡದಂತೆ ಉಳಿಸಿಕೊಂಡು ಹೋಗುವುದು ಎಲ್ಲರ ಜವಾಬ್ದಾರಿ. ಜನಪದ ಕಾಯಕ ಸಾಹಿತ್ಯವಾಗಿದ್ದು, ಅದಕ್ಕೆ ವಾದ್ಯಗಳು ಬೇಕಿಲ್ಲ. ಗ್ರಾಮೀಣ ಬದುಕಿನ ನಿತ್ಯದ ಎಲ್ಲಾ ಕಾರ್ಯಗಳಲ್ಲಿಯೂ ಜನಪದ ಸಾಹಿತ್ಯ ಹಾಸುಹೊಕ್ಕಾಗಿದೆ. ಕೃತಕ ಕಲೆ ಕಲಿಯುವುದು ನಮ್ಮ ತನ ಕಳೆದುಕೊಂಡಂತೆ ಎಂದರು.

ಗ್ರಾಮೀಣ ಪ್ರದೇಶದವರು ಹಾಡಿಲ್ಲದೇ ಕೆಲಸ ಮಾಡಲಾರರು. 500 ಕ್ಕೂ ಹೆಚ್ಚು ಜನಪದ ಕಲೆಗಳಿದ್ದು, ಅದು ಗ್ರಾಮೀಣ ಪ್ರದೇಶದ ವೈವಿಧ್ಯತೆಯಿಂದ ಕೂಡಿದೆ. ಆ ಕಲೆ ಕಳೆದುಕೊಳ್ಳಬಾರದು. ಕಲೆಗಳು ಸಂಬಂಧವನ್ನು ಬೆಸೆಯುತ್ತವೆ. ಯುವ ಸಮುದಾಯ ಆಸಕ್ತಿಯಿಂದ ಕಲೆಯನ್ನು ಕಲಿತು ಕಲೆ ಮೂಲಕ ಸಂಸ್ಕೃತಿ, ಸಮಾಜ ಉಳಿಸುವ ಕಾರ್ಯ ಮಾಡಬೇಕು ಎಂದು ತಿಳಿಸಿದರು.

ಸಂಗೀತ ವಿದ್ವಾನ್ ಶಿವಾಜಿರಾವ್, ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎಲ್ಲೇಗೌಡ ಬೆಸಗರಹಳ್ಳಿ, ಜಿಲ್ಲಾ ಲೇಖಕರ ವೇದಿಕೆಯ ಅಧ್ಯಕ್ಷ ಕೂ.ಗಿ. ಗಿರಿಯಪ್ಪ, ಜನಪದ ಗಾಯಕ ಹುರುಗಲವಾಡಿ ರಾಮಯ್ಯ, ಶಾಂತಲಾ ಚಾರಿಬಟಲ್ ಟ್ರಸ್ಟಿನ ಸಂಸ್ಥಾಪಕ ಕಾರ್ಯದರ್ಶಿ ಕವಿತಾರಾವ್, ನೃತ್ಯ ಶಿಕ್ಷಕಿ ಚಿತ್ರಾರಾವ್, ಉಪನ್ಯಾಸಕ ರಮೇಶ್ ಹೊಸದೊಡ್ಡಿ, ಕೆ.ಎಸ್. ಧನಂಜಯ, ಶಿಕ್ಷಕರಾದ ಕೆ.ಆರ್. ವಿನುತಾ, ನೆ.ರ. ಪ್ರಭಾಕರ್, ಗಾಯಕರಾದ ಮನೋಹರ್, ಮಹದೇವಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT