ಕನಕಪುರ (ರಾಮನಗರ): ‘ಆಧುನಿಕ ಮಾಹಿತಿ ತಂತ್ರಜ್ಞಾನ ಈ ಯುಗದಲ್ಲಿ ಗ್ರಾಮೀಣ ಭಾಗದ ಮಕ್ಕಳು ಹಿಂದೆ ಬೀಳಬಾರದು. ಬೆರಳ ತುದಿಯಲ್ಲಿ ಸಿಗುವ ಮಾಹಿತಿ ಸೇರಿದಂತೆ ಸರ್ಕಾರಿ ಸೌಲಭ್ಯಗಳನ್ನು ಬಳಸಿಕೊಂಡು ಜಾಗತಿಕ ಮಟ್ಟದಲ್ಲಿ ಸ್ಪರ್ಧೆಗೆ ಅಣಿಯಾಗಬೇಕು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡಗಳನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ‘ನೀವು ಯಾವುದೇ ಕ್ಷೇತ್ರ ಆಯ್ಕೆ ಮಾಡಿಕೊಂಡರೂ ಅದದಲ್ಲಿ ನಾಯಕತ್ವ ವಹಿಸುವ ಮಟ್ಟಕ್ಕೆ ಬೆಳೆಯಬೇಕು. ಯಾವುದೂ ಅಸಾಧ್ಯವಲ್ಲ. ಬಾಗಲಕೋಟೆ ಸರ್ಕಾರಿ ಶಾಲೆ ವಿದ್ಯಾರ್ಥಿನಿ ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಳು. ನೀವೂ ಅಂತಹ ಸಾಧನೆ ಮಾಡಬೇಕು’ ಎಂದರು.
‘ನಾನು ಶಾಸಕನಾದಾಗ ಕನಕಪುರದ ರಸ್ತೆಗಳು ಹೇಗಿದ್ದವು, ಈಗ ಹೇಗಿವೆ ಎಂಬುದರ ಬಗ್ಗೆ ಒಂದು ಚಿತ್ರ ರಚಿಸಲಾಗಿದೆ. ಕರಿಯಪ್ಪನವರ ಕಾಲದಿಂದಲೂ ಕನಕಪುರ ಶಿಕ್ಷಣ ಕ್ಷೇತ್ರದಲ್ಲಿ ಹೆಸರುವಾಸಿ. ಹಾಸನ, ಮೈಸೂರು, ಬೆಂಗಳೂರಿನಿಂದ ಮಕ್ಕಳು ಬಂದು ಓದುತ್ತಿದ್ದರು. ಕನಕಪುರ-ಬೆಂಗಳೂರು ರಸ್ತೆ ಎಜುಕೇಷನ್ ಕಾರಿಡಾರ್ ಆಗುತ್ತಿದೆ. ದಯಾನಂದ ಸಾಗರ್, ಜೈನ್ ಕಾಲೇಜು ಸೇರಿದಂತೆ ವಿವಿಧ ಸಂಸ್ಥೆಗಳು ಇಲ್ಲಿವೆ’ ಎಂದು ಹೇಳಿದರು.
‘ಮಾಜಿ ಸಂಸದ ಡಿ.ಕೆ. ಸುರೇಶ್ ಸಾಕಷ್ಟು ಪರಿಶ್ರಮ ವಹಿಸಿ ಈ ಭಾಗದ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ನಮ್ಮ ಸಂಸ್ಥೆಯಿಂದ ಪ್ರತಿ ವರ್ಷ 300 ವಿದ್ಯಾರ್ಥಿಗಳಂತೆ ಈಗ ₹4 ಸಾವಿರ ನೆರವು ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಲು ಪ್ರತಿ ವರ್ಷ ಕನಕೋತ್ಸವ ಮಾಡುತ್ತಿದ್ದೇವೆ. ಇಲ್ಲಿ ಹಚ್ಚಿರುವ ಜ್ಯೋತಿ ನಿಮ್ಮ ಬದುಕು ಬೆಳಗಿಸುವ ಜ್ಯೋತಿ. ನಿಮ್ಮ ಬದುಕು ಕತ್ತಲೆಯಿಂದ ಬೆಳಕಿನತ್ತ ಸಾಗಲಿ’ ಎಂದು ತಿಳಿಸಿದರು.
ಕಾಲೇಜಿನಲ್ಲಿ ನೂತನ ಕೊಠಡಿಗಳು, ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಉದ್ಘಾಟಿಸಿದ ಶಿವಕುಮಾರ್ ನಂತರ 2024-25ನೇ ಸಾಲಿನ ಕ್ರೀಡಾ, ಸಾಂಸ್ಕೃತಿಕ, ಎನ್‌ಎಸ್‌ಎಸ್, ರೆಡ್ ಕ್ರಾಸ್ ಹಾಗೂ ರೇಂಜರ್ಸ್ ಚಟುವಟಿಕೆಗಳಿಗೆ ಚಾಲನೆ ನೀಡಿದರು. ವಿಧಾನ ಪರಿಷತ್ ಸದಸ್ಯ ಎಸ್. ರವಿ, ಕರಿಯಪ್ಪ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶ್ರೀಕಂಠು, ರಾಮನಗರ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್, ಪ್ರಾಚಾರ್ಯೆ ಶ್ಯಾಮಲಾ ಇದ್ದರು.
‘ನೀವು ಬೆಂಗಳೂರು ಜಿಲ್ಲೆಯ ಮಕ್ಕಳು’
‘ನೀವು ಕೇವಲ ಕನಕಪುರದ ವಿದ್ಯಾರ್ಥಿಗಳಲ್ಲ. ಬೆಂಗಳೂರು ಜಿಲ್ಲೆಯ ಮಕ್ಕಳು. ಇದು ಬೆಂಗಳೂರು ಜಿಲ್ಲೆ. ಕಾರಣಾಂತರದಿಂದ ಬೇರೆ ಹೆಸರು ಬಂದಿದೆ. ನೀವು ಸರ್ಕಾರಿ ಶಾಲಾ–ಕಾಲೇಜಿನಲ್ಲಿ ಓದುತ್ತಿದ್ದರೂ ಜಾಗತಿಕ ಮಟ್ಟದ ವಿದ್ಯಾರ್ಥಿಗಳ ಜೊತೆ ಸ್ಪರ್ಧಿಸಲು ಪರಿಶ್ರಮ ಹಾಕಬೇಕು. ಕನಕಪುರ ಯಾವ ಮಟ್ಟಕ್ಕೆ ಬೆಳೆಯುತ್ತದೆ ಎಂದು ನಾನು ಈಗ ಹೇಳುವುದಿಲ್ಲ. ಹೇಳಿದರೆ ಅದನ್ನು ಬೇರೆ ರೀತಿ ಬಿಂಬಿಸಲಾಗುತ್ತದೆ. ನೀವು ನಿಮ್ಮ ಮೂಲ ಮರೆಯಬೇಡಿ. ಶಿಕ್ಷಕರು ಮತ್ತು ಪೋಷಕರೇ ನಿಮ್ಮ ಮೂಲ. ಎಷ್ಟೇ ಕಷ್ಟವಿದ್ದರೂ ಅವರು ಉತ್ತಮ ಶಿಕ್ಷಣ ಕೊಡಿಸುತ್ತಿದ್ದಾರೆ. ನೀವು ದೊಡ್ಡ ಕನಸು ಕಂಡು ಅದನ್ನು ಸಾಕಾರಗೊಳಿಸಲು ಪರಿಶ್ರಮ ಹಾಕಬೇಕು’ ಎಂದು ಶಿವಕುಮಾರ್ ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.