ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕ‍ಪುರ ತಹಶೀಲ್ದಾರ್‌ ಖಾಸಗಿ ದರ್ಬಾರ್‌

ಜನರ ಯೋಗಕ್ಷೇಮ ವಿಚಾರಿಸಿ, ಆಶಯ ನುಡಿದ ದಂಡಾಧಿಕಾರಿ
Last Updated 9 ಅಕ್ಟೋಬರ್ 2019, 14:12 IST
ಅಕ್ಷರ ಗಾತ್ರ

ಕನಕಪುರ: ‘ತಾಲ್ಲೂಕಿನಲ್ಲಿ ಈ ಬಾರಿ ಉತ್ತಮ ಮಳೆ ಮತ್ತು ಬೆಳೆಯಾಗುತ್ತಿದ್ದು ಮುಂದೆಯು ಇದೇ ರೀತಿ ಮಳೆಗಾಲ ನಡೆಸಿಕೊಟ್ಟು ತಾಲ್ಲೂಕಿನ ಜನತೆ ಸುಖ ಶಾಂತಿ ನೆಮ್ಮದಿಯನ್ನು ಭಗವಂತ ಕರುಣಿಸಲಿ’ಎಂದು ತಹಶೀಲ್ದಾರ್‌ ಎಂ.ಆನಂದಯ್ಯ ಆಶಿಸಿದರು.

ಇಲ್ಲಿನ ಮಿನಿ ವಿಧಾನಸೌಧದಲ್ಲಿ ಮಂಗಳವಾರ ಸಂಜೆ ತಾಲ್ಲೂಕು ಆಡಳಿತ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜನೆ ಮಾಡಿದ್ದ ವಿಜಯದಶಮಿ ಆಯುಧಪೂಜೆ ಕಾರ್ಯಕ್ರಮದಲ್ಲಿ ಖಾಸಗಿ ದರ್ಬಾರ್‌ ನಡೆಸಿ ತಾಲ್ಲೂಕಿನ ಜನತೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ತಾಲ್ಲೂಕಿನಲ್ಲಿ ಮುಂಗಾರು ಮಳೆ ತಡವಾಗಿ ಆರಂಭವಾಗಿದ್ದರೂ ಜನತೆಯ ನಿರೀಕ್ಷೆಯಂತೆ ಮಳೆಯಾಗಿದೆ. ಜನತೆಯು ಹದ ಮಾಡಿಕೊಂಡಿದ್ದ ಭೂಮಿಗೆ ಬಿತ್ತನೆ ಮಾಡಿದ್ದು ಎಲ್ಲಾ ಕಡೆ ಸಮೃದ್ಧವಾಗಿ ಬೆಳೆ ಬಂದಿರುವುದನ್ನು ಕಂದಾಯ ಇಲಾಖೆಯೊಂದಿಗೆ ನಡೆಸಿದ ಬೆಳೆ ಪರಿಶೀಲನೆ ವೇಳೆ ವೀಕ್ಷಣೆ ಮಾಡಿದ್ದೇನೆ’ ಎಂದರು.

ತಾಲ್ಲೂಕು ಕಚೇರಿ ಸೇರಿದಂತೆ ಹಲವು ತಾಲ್ಲೂಕುಮಟ್ಟದ ವಿವಿಧ ಇಲಾಖೆಗಳು ಮಿನಿ ವಿಧಾನಸೌಧದ ನೂತನ ಕಚೇರಿಗೆ ಸ್ಥಳಾಂತರಗೊಂಡಿದ್ದು ಕೆಲಸ ನಿರ್ವಹಿಸುತ್ತಿವೆ. ಕಟ್ಟಡ ನಿರ್ಮಾಣ ಪೂರ್ಣಗೊಳ್ಳದಿರುವುದರಿಂದ ಕೆಲವು ಕಚೇರಿ ಕೆಲಸಗಳು ಬಾಕಿ ಉಳಿದಿವೆ. ಸದ್ಯದಲ್ಲೇ ಎಲ್ಲಾ ಕೆಲಸ ಪೂರ್ಣಗೊಳಿಸಿ ಜನತೆಗೆ ಅನುಕೂಲವಾಗುವಂತೆ ಕಚೇರಿ ಕೆಲಸ ನಿರ್ವಹಿಸುವುದಾಗಿ ಹೇಳಿದರು.

ಇನ್ನು ಸ್ವಚ್ಚತೆ ಬಗ್ಗೆ ಹೇಳಿದ್ದೀರಿ. ಕಟ್ಟಡದಲ್ಲಿ ಕಚೇರಿ ಕೆಲಸ ಪೂರ್ಣವಾಗದಿರುವುದರಿಂದ ಮತ್ತು ಹೊರಗಡೆ ಮಳೆ ಆಗುತ್ತಿರುವುದರಿಂದ ಸ್ವಚ್ಛತೆ ಎಷ್ಟೇ ಮಾಡಿದರೂ ನಿಯಂತ್ರಣ ಆಗುತ್ತಿಲ್ಲ. ಕಟ್ಟಡ ಕಚೇರಿ ಕೆಲಸ ಪೂರ್ಣಗೊಂಡ ಮೇಲೆ ಹೊರಗಡೆ ಯಾವ ಕಚೇರಿ ಎಲ್ಲಿವೆ ಎಂದು ಮಾಹಿತಿ ಫಲಕ ಹಾಕಿ ಸ್ವಚ್ಛತೆ ಮಾಡುವುದಾಗಿ ಹೇಳಿದರು.

ವಿಜಯದಶಮಿ ಆಯುಧಪೂಜೆಯನ್ನು ಕನಕಪುರ ತಾಲ್ಲೂಕಿನಲ್ಲಿ ತುಂಬಾ ವಿಶೇಷವಾಗಿ ಆಚರಣೆ ಮಾಡಲಾಯಿತು. ದಂಡಾಧಿಕಾರಿಗಳಿಗೆ ಸಾಂಪ್ರದಾಯಿಕ ಹೊಸ ವಸ್ತ್ರವನ್ನು ತೊಡಿಸಿ ಮೈಸೂರು ಪೇಟೆ ತೊಡಿಸಿ ಕಚೇರಿಯಿಂದ ವಾದ್ಯಗೋಷ್ಠಿಯೊಂದಿಗೆ ಕರೆತರಲಾಯಿತು.

ಹೊರಗಡೆ ಆವರಣದಲ್ಲಿ ಗ್ರಾಮ ದೇವರುಗಳಾದ ಮಳಗಾಳು ಮಹದೇಶ್ವರಸ್ವಾಮಿ, ಕೋಟೆ ಕೋದಂಡರಾಮಸ್ವಾಮಿ, ಕೋಟೆ ರಂಗನಾಥಸ್ವಾಮಿ ದೇವರ ಉತ್ಸವ ಮೂರ್ತಿಯನ್ನಿಟ್ಟು ಪೂಜೆ ನೆರವೇರಿಸಲಾಯಿತು.

ನಂತರ ಬನ್ನಿ ಮುಡಿಸುವ ಕಾರ್ಯಕ್ರಮವನ್ನು ತಹಶೀಲ್ದಾರ್‌ ನೆರವೇರಿಸಿಕೊಟ್ಟರು.

ಬಾಳೆಕಂಬಕ್ಕೆ ಬನ್ನಿಯನ್ನು ಮುಡಿಸಿದ್ದು ಅದನ್ನು ಕತ್ತರಿಸುತ್ತಿದ್ದಂತೆ ನೆರೆದಿದ್ದ ಜನತೆ ಬನ್ನಿಸೊಪ್ಪನ್ನು ಸಮೃದ್ಧಿಯ ಸಂಪತ್ತಿನ ಸಂಕೇತವಾಗಿ ಮನೆಗೆ ತೆಗೆದುಕೊಂಡು ಹೋದರು. ತಹಶೀಲ್ದಾರ್‌ ಕುಟುಂಬದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT