ಮಂಗಳವಾರ, ಡಿಸೆಂಬರ್ 1, 2020
19 °C
ಟಿಎಪಿಸಿಎಂಎಸ್‌ ಚುನಾವಣೆ ಮತಗಟ್ಟೆ ಪರಿಮಿತಿ ವಿವಾದ

ಕನಕಪುರ: ತಹಶೀಲ್ದಾರ್, ಮುಖಂಡರ ಜಟಾಪಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಹಶೀಲ್ದಾರ್‌ ವರ್ಷಾ ಒಡೆಯರ್‌ ಮತ್ತು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಡಿ.ವಿಜಯದೇವು ನಡುವಿನ ಮಾತುಕತೆ

ಕನಕಪುರ: ಟಿಎಪಿಸಿಎಂಎಸ್‌ ಚುನಾವಣೆ ಮತಗಟ್ಟೆ ಪರಿಮಿತಿಗೆ ಸಂಬಂಧಿಸಿದಂತೆ ಚುನಾವಣಾಧಿಕಾರಿ ತಹಶೀಲ್ದಾರ್‌ ಮತ್ತು ಕಾಂಗ್ರೆಸ್‌ ಮುಖಂಡರ ನಡುವೆ ವಾಗ್ವಾದ, ಮಾತಿನ ಚಕಮಕಿ ನಡೆಯಿತು.

ಇಲ್ಲಿನ ಆರ್‌ಇಎಸ್‌ ನ ಬಾಲಕಿಯರ ಪ್ರೌಢಶಾಲೆಯಲ್ಲಿ ನಡೆದ ಟಿಎಪಿಸಿಎಂಎಸ್‌ ನಿರ್ದೇಶಕರ ಆಯ್ಕೆ ಚುನಾವಣೆ ವೇಳೆ ಮತದಾನ ಕೇಂದ್ರದಿಂದ 200 ಮೀಟರ್‌ ಪರಿಮಿತಿ ಆಚೆ ಇರುವಂತೆ ತಹಶೀಲ್ದಾರ್‌ ವರ್ಷಾ ಒಡೆಯರ್‌ ಸೂಚನೆ ನೀಡಿದ್ದು ವಾಗ್ವಾದಕ್ಕೆ ಕಾರಣವಾಯಿತು.

ಯಾವುದೇ ಚುನಾವಣೆ ನಡೆದರೂ ಮತಗಟ್ಟೆಯಿಂದ 100 ಮೀಟರ್‌ ಸುತ್ತಳತೆ ಪರಿಮಿತಿಯಿಂದ ದೂರ ಇರುವಂತೆ ಸೂಚನೆ ನೀಡಲಾಗುತ್ತದೆ. ಆದರೆ, ಈ ಚುನಾವಣೆಯಲ್ಲಿ ತಹಶೀಲ್ದಾರ್‌ ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡರು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸದ ವರ್ಷಾ ಒಡೆಯರ್‌, ಕಾನೂನು ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಡಿ.ವಿಜಯದೇವು ಮಾತನಾಡಿ, ಚುನಾವಣೆಯಲ್ಲಿ 100 ಮೀಟರ್‌ನಿಂದ ಹೊರಗೆ ಇರಬೇಕು. ನೀವು 200 ಮೀಟರ್‌ ಹೇಳುತ್ತಿದ್ದೀರಿ. ಉದ್ದೇಶ ಪೂರ್ವಕವಾಗಿ ಮತ್ತು ಏಕಪಕ್ಷೀಯವಾಗಿ ವರ್ತಿಸುತ್ತಿದ್ದೀರಿ. ಅಧಿಕಾರ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದರು.

ಚುನಾವಣಾ ಕಾರ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ಆರೋಪಿಸಿ ತಹಶೀಲ್ದಾರ್‌ ವರ್ಷ ಒಡೆಯರ್‌ ಇಬ್ಬರು ಕಾಂಗ್ರೆಸ್‌ ಮುಖಂಡರ ವಿರುದ್ಧ ಟೌನ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ದೂರಿಗೆ ಸಂಬಂಧಿಸಿದಂತೆ ನ್ಯಾಯಾಲಯ ಅನುಮತಿ ಪಡೆಯಬೇಕಿರುವುದರಿಂದ ನಂತರ ಪ್ರಕರಣ ದಾಖಲಿಸುವುದಾಗಿ ಎಸ್‌.ಐ.ಲಕ್ಷ್ಮಣ್‌ಗೌಡ ತಿಳಿಸಿದರು.

ಚಟುವಟಿಕೆ ಚುರುಕು

ಮಾಗಡಿ: ’ರಾಜಮಾರ್ಗದಲ್ಲಿ ಗೆದ್ದು ಜನರ ಸೇವೆ ಮಾಡುವುದು ನಮ್ಮ ಧ್ಯೇಯವಾಗಿದೆ’ ಎಂದು ಶಾಸಕ ಎ.ಮಂಜುನಾಥ ತಿಳಿಸಿದರು.

ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಕುರಿತು ಮಾತನಾಡಿದರು. ಗೆದ್ದವರನ್ನು ವಾಮಮಾರ್ಗದಿಂದ ಕರೆದೊಯ್ಯವುದು ಎಲ್ಲರ ಕರ್ತವ್ಯ. ಪಟ್ಟಣ ಮತ್ತು ತಾಲ್ಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ಕೊಡುವುದು ಕರ್ತವ್ಯ‘ ಎಂದು ಹೇಳಿದರು.

ಬಿಜೆಪಿ ಸದಸ್ಯೆ ಭಾಗ್ಯಮ್ಮ ಅವರನ್ನು ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಬೆಂಬಲಿಸುವ ಪಕ್ಷದೊಂದಿಗೆ ಕೈಜೋಡಿಸುವಂತೆ ಪಕ್ಷ ತೀರ್ಮಾನಿಸಿದೆ ಎಂದು ಬಿಜೆಪಿ ಹಿಂದುಳಿದ ವಿಭಾಗದ ಉಪಾಧ್ಯಕ್ಷ ಎ.ಎಚ್‌.ಬಸವರಾಜು ತಿಳಿಸಿದರು.

ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರ ಮನೆಯಲ್ಲಿ ಸಭೆ ನಡೆಸಿ ತೀರ್ಮಾನಿಸಿದ್ದು. ಬಿಜೆಪಿಗೆ, ಜೆಡಿಎಸ್‌ ಅಥವಾ ಕಾಂಗ್ರೆಸ್‌ ಬೆಂಬಲಿಸಿದರೆ ಅವರೊಂದಿಗೆ ಸೇರಿ ಅಧ್ಯಕ್ಷಗಾದಿ ವಹಿಸಿಕೊಳ್ಳುವುದಾಗಿ ತೀರ್ಮಾನಿಸಲಾಗಿದೆ ಎಂದರು.

ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ನ.9ರಂದು ನಡೆಯಲಿದೆ. ಜೆಡಿಎಸ್‌ 12, ಕಾಂಗ್ರೆಸ್‌ 10, ಬಿಜೆಪಿ–1 ಒಟ್ಟು 23 ಸದಸ್ಯರಿದ್ದಾರೆ. ಜೆಡಿಎಸ್‌ ನ 12 ಸದಸ್ಯರಲ್ಲಿ 10 ಜನರು ಯಾತ್ರಾಸ್ಥಳಗಳಿಗೆ ಪ್ರವಾಸ ಹೋಗಿದ್ದಾರೆ.

ಹೊಸಪೇಟೆ ಪುರಸಭೆ ಸದಸ್ಯ ಅಶ್ವತ್ಥ ಮಾತನಾಡಿ, ’ನಾನು ಜೆಡಿಎಸ್‌ ಪಕ್ಷದಿಂದ ಆಯ್ಕೆಯಾಗಿದ್ದೇನೆ. ಶಾಸಕ ಎ.ಮಂಜುನಾಥ ಅವರ ಜತೆಗೆ ಇದ್ದೇನೆ. ಅವರ ತೀರ್ಮಾನದಂತೆ ನಡೆದುಕೊಳ್ಳುವುದಾಗಿ‘ ತಿಳಿಸಿದರು.

ಹೊಂಬಾಳಮ್ಮನಪೇಟೆ ಪುರಸಭೆ ಸದಸ್ಯ ವೆಂಕಟರಾಮ್‌ ದೂರವಾಣಿ ಸಂಪರ್ಕಕ್ಕೆ ಸಿಕ್ಕಿಲ್ಲ. ಆಯ್ಕೆ ಬಗ್ಗೆ ಬಿರುಸಿನ ಚಟುವಟಿಕೆಗಳು ನಡೆದಿವೆ.

 ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಹಿನ್ನೆಲೆಯಲ್ಲಿ ನ.9ರಂದು ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಪಟ್ಟಣದಲ್ಲಿ ಕಲಂ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ತಹಶೀಲ್ದಾರ್‌ ಬಿ.ಜಿ.ಶ್ರೀನಿವಾಸ ಪ್ರಸಾದ್‌ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು