ಕುದೂರು: ನಾಡು, ನುಡಿ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಸಂಸ್ಕೃತಿಯನ್ನು ಸದಾ ಮೈಗೂಡಿಸಿಕೊಳ್ಳಬೇಕು. ಕರ್ನಾಟಕ ರಚನೆ ಸಂದರ್ಭದಲ್ಲಿ ದುಡಿದ ಮಹನೀಯರನ್ನು ಸ್ಮರಿಸುವುದು ಎಲ್ಲರ ಕರ್ತವ್ಯವಾಗಬೇಕು. ಆಗ ಮಾತ್ರ ರಾಜ್ಯ ರಚನೆಗೆ ಸಾರ್ಥಕತೆ ಬರಲಿದೆ ಎಂದು ಶಾಸಕ ಎಚ್.ಸಿ ಬಾಲಕೃಷ್ಣ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ನಡೆದ ಕನ್ನಡ ರಾಜ್ಯೋತ್ಸವ, ವಿವಿಧ ಸಹಪಠ್ಯ ಚಟುವಟಿಕೆ ಹಾಗೂ ಕಲಾ ಜ್ಯೋತಿ ಸಭಾಂಗಣ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಇಂದಿನ ದಿನಮಾನಗಳಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ತುಂಬಾ ಬುದ್ಧಿವಂತಿಕೆ ಇದೆ. ಆದರೆ, ಅಭಿವ್ಯಕ್ತಿ ವಿಧಾನದಲ್ಲಿನ ಹಿಂಜರಿಕೆಯಿಂದ ತೊಡಕು ಉಂಟಾಗುತ್ತಿದೆ ಎಂದರು.
ಸರ್ಕಾರಿ ಶಾಲಾ–ಕಾಲೇಜುಗಳಲ್ಲಿ ಮೂಲ ಸೌಕರ್ಯ ಹೆಚ್ಚಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ಜನವರಿಯಲ್ಲಿ ಕಾಲೇಜಿನ ರಜತ ಮಹೋತ್ಸವ
ಕುದೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ಉದ್ಘಾಟನೆಗೊಂಡು 25 ವರ್ಷ ಕಳೆದಿದೆ. ಹಾಗಾಗಿ ಈ ಸವಿನೆನಪಿಗೆ ಕಾಲೇಜಿನಲ್ಲಿ ರಜತ ಮಹೋತ್ಸವ ಮುಂದಿನ ಜನವರಿ ತಿಂಗಳಲ್ಲಿ ಅದ್ದೂರಿಯಾಗಿ ಆಚರಿಸುವುದಾಗಿ ಹೇಳಿದರು.
ಮುಖ್ಯ ಅತಿಥಿ ಕನ್ನಡದ ನಿವೃತ್ತ ಪ್ರಾಧ್ಯಾಪಕಿ ಡಾ.ಬಿ.ಟಿ ನೇತ್ರಾವತಿ ಗೌಡ, ಆತ್ಮವಿಶ್ವಾಸದಿಂದ ಸಮಸ್ಯೆಗಳನ್ನು ಎದುರಿಸುವ ಛಾತಿಯುನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಗುರುಮೂರ್ತಿ ಕೆ.ಎಚ್ ಮಾತನಾಡಿ, ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಮನೋಭಾವ ಬೆಳಸುವಲ್ಲಿ ಕಾರ್ಯ ಯೋಜನೆ ರೂಪಿಸಲಾಗುವುದು ಎಂದರು.
ಮುಖಂಡರಾದ ಕೆಇಬಿ ರಾಜಣ್ಣ, ಹನುಮಂತರಾಯಪ್ಪ, ಪ್ರಕಾಶ್, ಬೋರ್ವೆಲ್ ಗಿರೀಶ್, ಜಯರಾಮಣ್ಣ, ಯತೀಶ್, ವಿನಯ್, ಮರಿಗೌಡ್ರು ಯಾಸಿನ್, ಕುಮಾರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.