ಸೋಮವಾರ, ನವೆಂಬರ್ 30, 2020
19 °C

ಕನ್ನಡ ಶ್ರೀಮಂತ ಭಾಷೆ: ಕರವೇ ಜಿಲ್ಲಾ ಅಧ್ಯಕ್ಷ ವಾಡೇದೊಡ್ಡಿ ಕಬ್ಬಾಳೇಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನಕಪುರ: ‘ದೇಶದ ಭಾಷೆಗಳಲ್ಲಿ ಕನ್ನಡವೂ ಪ್ರಮುಖ ಭಾಷೆಯಾಗಿದೆ. ಕನ್ನಡಕ್ಕೆ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಲಭಿಸಿದ್ದು ಶ್ರೀಮಂತ ಭಾಷೆಯಾಗಿದೆ’ ಎಂದು ಕರವೇ ಜಿಲ್ಲಾ ಅಧ್ಯಕ್ಷ ವಾಡೇದೊಡ್ಡಿ ಕಬ್ಬಾಳೇಗೌಡ ಹೇಳಿದರು.

ಇಲ್ಲಿನ ಮಿನಿ ವಿಧಾನಸೌಧದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕನ್ನಡ ಪ್ರವರ್ಧಮಾನಕ್ಕೆ ಬರಬೇಕಾದರೆ ವ್ಯಾವಹಾರಿಕ ಮತ್ತು ಆಡಳಿತಾತ್ಮಕವಾಗಿ ಜಾರಿಗೊಳ್ಳಬೇಕು. ಕನ್ನಡಿಗರಿಗೆ ಕನ್ನಡ ನೆಲದಲ್ಲಿ, ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದಲ್ಲಿ ಸಿಂಹಪಾಲು ಉದ್ಯೋಗ ಸಿಗಬೇಕು. ಅಂತಹ ದೃಢ ನಿರ್ಧಾರವನ್ನು ಸರ್ಕಾರ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ತಹಶೀಲ್ದಾರ್‌ ವರ್ಷಾ ಒಡೆಯರ್‌ ಮಾತನಾಡಿ, ಭಾಷೆ ಮತ್ತು ಬದುಕು ನಾಣ್ಯದ ಎರಡು ಮುಖವಿದ್ದಂತೆ. ಬದುಕಿನೊಟ್ಟಿಗೆ ಭಾಷೆ ಬೆಸೆದುಕೊಂಡಿದೆ. ಭಾಷೆ ಮತ್ತು ಸಂಸ್ಕೃತಿ ಎಲ್ಲವೂ ಏಳ್ಗೆಯಾಗಲು ಸರ್ಕಾರದ ಬೆಂಬಲಬೇಕಿದೆ ಎಂದರು.

ಭಾಷೆ ಎಂಬುದು ಭಾ‍ಷಾಂದವಾಗಬಾರದು. ಭಾರತ ವಿವಿಧತೆಯಲ್ಲಿ ಏಕತೆ ಕಾಣುವ ದೇಶವಾಗಿದೆ. ಹಲವು ರಾಜ್ಯ ಮತ್ತು ಭಾ‍ಷೆಗಳಿದ್ದರೂ ಹಿಂದಿ ರಾಷ್ಟ್ರಭಾಷೆಯಾಗಿದೆ. ಅದರ ನೆರಳಿನಲ್ಲಿ ಪ್ರಾದೇಶಿಕ ಭಾಷೆ ಮತ್ತು ಸಂಸ್ಕೃತಿ ದೇಶದ ಅಭಿವೃದ್ಧಿಗೆ ತೊಡಕಾಗದಂತೆ ಬೆಳೆಯಬೇಕಿದೆ ಎಂದು ಹೇಳಿದರು. 

ಕನ್ನಡ ರಾಜ್ಯೋತ್ಸವ ನಮ್ಮೆಲ್ಲರ ಹೆಮ್ಮೆಯ ಹಬ್ಬವಾಗಿದೆ. ಇಂತಹ ಕಾರ್ಯಕ್ರಮಕ್ಕೆ ಬೆರಳೆಣಿಕೆಯಷ್ಟು ಇಲಾಖೆಯವರು ಮಾತ್ರ ಬಂದಿರುವುದು ವಿಷಾದನೀಯ ಎಂದರು. 

ಜಿಲ್ಲಾ ಲೇಖಕರ ವೇದಿಕೆಯ ಅಧ್ಯಕ್ಷ ಕೂ.ಗಿ. ಗಿರಿಯಪ್ಪ ರಾಜ್ಯೋತ್ಸವ ಕುರಿತು ಮಾತನಾಡಿದರು. ಕರವೇ ಮುಖಂಡರಾದ ಜೈ. ಕೃಷ್ಣಪ್ಪ, ಅಂದಾನಿಗೌಡ, ಕೆ.ಎಸ್‌. ಭಾಸ್ಕರ್‌, ಅಂಗಡಿ ರಮೇಶ್‌, ರೈತ ಸಂಘದ ಚೀಲೂರು ಮುನಿರಾಜು, ಡ್ರೀಂ ಫೌಂಡೇ‍ಶನ್‌ನ‌ ಜೈರಾಮೇಗೌಡ, ಶಿಕ್ಷಣ ಇಲಾಖೆಯ ಸತೀಶ್‌, ಅಹಾರ ಇಲಾಖೆಯ ಪ್ರಕಾಶ್‌, ಶಿರಸ್ತೇದಾರ್‌ ರಘು ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು