ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ವ ಜಲಾಶಯದಲ್ಲಿ ದೋಣಿ ವಿಹಾರ ಶೀಘ್ರ ಆರಂಭ

ಜಲಾಶಯದ ಪರಿಮಿತಿಯಲ್ಲಿ ಪ್ರವಾಸೋದ್ಯಮ ಚಟುವಟಿಕೆಗೆ ಸರ್ಕಾರದ ಉತ್ತೇಜನ
Last Updated 21 ನವೆಂಬರ್ 2019, 19:45 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಚನ್ನಪಟ್ಟಣ ತಾಲ್ಲೂಕಿನ ಕಣ್ವ ಜಲಾಶಯದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳ ವಿಸ್ತರಣೆಗೆ ಜಿಲ್ಲಾಡಳಿತ ಯೋಜನೆ ರೂಪಿಸಿದೆ. ಸದ್ಯದಲ್ಲೇ ಅಲ್ಲಿ ದೋಣಿ ವಿಹಾರ ಆರಂಭವಾಗಲಿದೆ.

ಅಧಿಕಾರಿಗಳ ತಂಡವು ಈಚೆಗಷ್ಟೇ ಕಣ್ವ ಜಲಾಶಯ ಹಾಗೂ ಸುತ್ತಲಿನ ಪರಿಸರವನ್ನು ವೀಕ್ಷಿಸಿದ್ದು, ದೋಣಿ ವಿಹಾರಕ್ಕೆ ಹಸಿರು ನಿಶಾನೆ ತೋರಿದೆ. ಪ್ರವಾಸೋದ್ಯಮ ಇಲಾಖೆಯು ಈ ಸಂಬಂಧ ಕಾವೇರಿ ನೀರಾವರಿ ನಿಗಮಕ್ಕೆ ಸದ್ಯದಲ್ಲೇ ಪತ್ರ ಬರೆದು ಅನುಮತಿ ಕೋರಲಿದೆ.

ಕಣ್ವ ಜಲಾಶಯವನ್ನು ಪ್ರವಾಸಿ ತಾಣವನ್ನಾಗಿ ರೂಪಿಸಬೇಕು ಎನ್ನುವುದು ದಶಕಗಳ ಹಿಂದಿನ ಬೇಡಿಕೆ. ಇಲ್ಲಿ ಸುಸಜ್ಜಿತವಾದ ಮಕ್ಕಳ ಉದ್ಯಾನ ಮಾಡುವುದಾಗಿ ಹಿಂದಿನ ಕಾಂಗ್ರೆಸ್‌ ಹಾಗೂ ಜೆಡಿಎಸ್‌–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರಗಳು ಘೋಷಣೆ ಮಾಡಿದ್ದವು. ಅದಕ್ಕಾಗಿ ₹2 ಕೋಟಿ ಅನುದಾನವೂ ಬಂದಿತ್ತು. ಆದರೆ ಯಾವುದೇ ಕಾಮಗಾರಿ ಆರಂಭವಾಗಿರಲಿಲ್ಲ.

ಇದೀಗ ಅದೇ ಅನುದಾನ ಬಳಸಿಕೊಂಡು ಮೊದಲ ಹಂತದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಪ್ರವಾಸೋದ್ಯಮ ಇಲಾಖೆಯು ಉದ್ದೇಶಿಸಿದೆ. ಆರಂಭದಲ್ಲಿ ಜಲಾಶಯದ ದಡವನ್ನು ಸ್ವಚ್ಛಗೊಳಿಸಿ, ಸುತ್ತಲೂ ಕಾಂಪೌಂಡ್‌ ನಿರ್ಮಿಸಿ ಯಾಂತ್ರೀಕೃತ ದೋಣಿಗಳ ವಿಹಾರಕ್ಕೆ ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ. ಇದರ ಪರಿಷ್ಕೃತ ಯೋಜನಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ಇಲಾಖೆಯು ಸಿದ್ಧತೆ ನಡೆಸಿದೆ.

‘ಮೊದಲ ಹಂತದಲ್ಲಿ ಇಲ್ಲಿ ದೋಣಿ ವಿಹಾರದ ಮೂಲಕ ಪ್ರವಾಸಿಗರನ್ನು ಸೆಳೆಯಲಾಗುವುದು. ಮಕ್ಕಳ ಉದ್ಯಾನ ನಿರ್ಮಾಣಕ್ಕೆ ಸರ್ಕಾರಕ್ಕೆ ಪರಿಷ್ಕೃತ ಪ್ರಸ್ತಾವ ಸಲ್ಲಿಸಲಾಗುತ್ತದೆ. ಮುಂದಿನ ಹಂತದಲ್ಲಿ ಅದೂ ಸಹ ಇಲ್ಲಿ ನಿರ್ಮಾಣವಾಗಲಿದೆ’ ಎಂದು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಎಸ್‌. ಶಂಕರಪ್ಪ ತಿಳಿಸಿದರು.

ನೆಚ್ಚಿನ ಪ್ರವಾಸಿ ತಾಣ
ರಾಮನಗರ–ಚನ್ನಪಟ್ಟಣ ಗಡಿ ಭಾಗದಲ್ಲಿ ಇರುವ ಕಣ್ವ ಜಲಾಶಯವು 1946ರಲ್ಲಿ ನಿರ್ಮಾಣಗೊಂಡಿದೆ. ಅಣೆಕಟ್ಟೆಗೆ ಸ್ವಯಂಚಾಲಿತ ಬಾಗಿಲುಗಳ ವ್ಯವಸ್ಥೆ (ಸೈಫನ್‌ ವರ್ಕ್‌) ಮಾಡಿ ವಿನ್ಯಾಸ ಮಾಡಿದ್ದು ಸರ್‌. ಎಂ. ವಿಶ್ವೇಶ್ವರಯ್ಯನವರು. ಇಂತಹ ವ್ಯವಸ್ಥೆ ಹೊಂದಿದ ಏಷ್ಯಾ ಖಂಡದ ಮೊದಲ ಜಲಾಶಯ ಎಂಬ ಕೀರ್ತಿ ಇದರದ್ದು.

ಕಣ್ವ ರಾಮನಗರದಿಂದ ಸುಮಾರು 15 ಕಿ.ಮೀ. ಹಾಗೂ ಚನ್ನಪಟ್ಟಣದಿಂದ 12 ಕಿ.ಮೀ. ದೂರದಲ್ಲಿ ಇದೆ. ಜಲಾನಯನ ಪ್ರದೇಶ ಕಡಿಮೆಯಾಗುತ್ತ ನೀರಿಲ್ಲದೇ ಸೊರಗಿ ಹೋಗಿದ್ದ ಈ ಜಲಾಶಯಕ್ಕೆ ಕಣ್ವ ಏತ ನೀರಾವರಿ ಯೋಜನೆಯಿಂದಾಗಿ ಜೀವ ಕಳೆ ಬಂದಿದೆ. ಈಗ ವರ್ಷವಿಡೀ ಜಲಾಶಯದಲ್ಲಿ ನೀರು ನಿಲ್ಲುತ್ತಿದೆ. ಇದರಿಂದಾಗಿ ಪ್ರವಾಸಿಗರು ಇದರತ್ತ ಆಕರ್ಷಿತರಾಗುತ್ತಿದ್ದಾರೆ.

₹2 ಕೋಟಿ ವೆಚ್ಚದಲ್ಲಿ ಜಲಾಶಯದ ಸುತ್ತ ಕಾಂಪೌಂಡ್‌ ನಿರ್ಮಾಣ, ದೋಣಿ ವಿಹಾರ ಚಟುವಟಿಕೆ ಆರಂಭಿಸಲು ನಿರ್ಧರಿಸಲಾಗಿದೆ
– ಎಸ್‌. ಶಂಕರಪ್ಪ, ಉಪನಿರ್ದೇಶಕ, ಪ್ರವಾಸೋದ್ಯಮ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT