ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Karnataka assembly election 2023 | ಛಾಯಾಗ್ರಾಹಕರಿಗೆ ಈಗ ಸುಗ್ಗಿ ಕಾಲ

ಚುನಾವಣಾ ಆಯೋಗ, ಅಭ್ಯರ್ಥಿಗಳಿಂದ ಪರಿಣಿತರಿಗೆ ಬೇಡಿಕೆ
Published : 17 ಏಪ್ರಿಲ್ 2023, 9:06 IST
ಫಾಲೋ ಮಾಡಿ
Comments

ರಾಮನಗರ: ಚುನಾವಣೆ ಎಂದರೆ ಕೆಲವು ದುಡಿಯುವ ಕೈಗಳಿಗೆ ಶುಕ್ರದೆಸೆಯ ಕಾಲ. ಅದರಲ್ಲೂ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಛಾಯಾಗ್ರಾಹಕರು– ವಿಡಿಯೊಗ್ರಾಫರ್‌ಗಳಿಗೆ ಇನ್ನಿಲ್ಲದ ಬೇಡಿಕೆ ಕುದುರಿದ್ದು, ಶುಭ ಸಮಾರಂಭಗಳಿಗೆ ಇವರ ಕೊರತೆ ಕಾಡುತ್ತಿದೆ.

ರಾಮನಗರ ಜಿಲ್ಲೆ ಒಂದರಲ್ಲಿಯೇ 800ಕ್ಕೂ ಹೆಚ್ಚು ಛಾಯಾಗ್ರಾಹಕರು, ವಿಡಿಯೊಗ್ರಾಫರ್ಸ್‌ ಇದ್ದಾರೆ. ಶುಭ ಸಮಾರಂಭಗಳೇ ಇವರ ದುಡಿಮೆಯ ಮೂಲ. ಆದರೆ ಕೋವಿಡ್‌ನಿಂದಾಗಿ ಕಳೆದ ಕೆಲವು ವರ್ಷಗಳ ಕಾಲ ಭಾರಿ ಸಮಾರಂಭಗಳು ಬಂದ್ ಆಗಿ
ಬದುಕು ಸಾಗಿಸುವುದೇ ಕಷ್ಟ ಎನ್ನುವಂತೆಆಗಿತ್ತು. ದಿನದಿಂದ ದಿನಕ್ಕೆ ಇವರ ಸಂಖ್ಯೆಯೂ ಹೆಚ್ಚುತ್ತಿದ್ದು, ತೀವ್ರ ಸ್ಪರ್ಧೆಯಿಂದಾಗಿ ಸಂಪಾದನೆಯೂ ಕಡಿಮೆ ಆಗಿದೆ. ಹೀಗಿರುವಾಗ ಚುನಾವಣೆ ಕಾಲದಲ್ಲಿ ಮತ್ತೆ ಬೇಡಿಕೆ ಬಂದಿದೆ.

ಆಯೋಗಕ್ಕೂ ಬೇಕು: ಜಿಲ್ಲೆಯಲ್ಲಿ ಮಾ. 29ರಿಂದಲೇ ನೀತಿಸಂಹಿತೆಯು ಜಾರಿಯಲ್ಲಿದೆ. ಅಂದಿನಿಂದ ಈವರೆಗೂ ಜಿಲ್ಲೆಯ ಪ್ರತಿ ಚಟುವಟಿಕೆಗಳ ಮೇಲೂ ಚುನಾವಣಾ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ. ಜನರು ಎಲ್ಲಿ ಗುಂಪು ಗೂಡಿದರೂ, ಅಭ್ಯರ್ಥಿಗಳು ಪ್ರಚಾರ ನಡೆಸಿದರೂ ಎಲ್ಲವನ್ನೂ ವಿಡಿಯೊ ರೆಕಾರ್ಡ್‌ ಮಾಡಲಾಗುತ್ತಿದೆ. ಜೊತೆಗೆ ಜಿಲ್ಲೆಯಲ್ಲಿನ 16 ಚೆಕ್‌ಪೋಸ್ಟ್‌ಗಳಲ್ಲಿ ದಿನದ 24 ತಾಸು ಕ್ಯಾಮೆರಾಗಳ ಕಣ್ಗಾವಲು ಇದ್ದು, ಕ್ಯಾಮೆರಾ ಇಟ್ಟುಕೊಂಡೇ ಎಲ್ಲವನ್ನೂ ತಪಾಸಣೆ ಮಾಡಲಾಗುತ್ತಿದೆ. ಈ ಎಲ್ಲಕ್ಕೂ ಚುನಾವಣಾ ಆಯೋಗವು ಖಾಸಗಿ ಛಾಯಾಗ್ರಾಹಕರನ್ನು ನೇಮಿಸಿಕೊಂಡಿದೆ. ಇವರಿಗೆ ದಿನಕ್ಕೆ ₹3 ಸಾವಿರದಿಂದ ₹8 ಸಾವಿರದವರೆಗೆ ಬಾಡಿಗೆಯನ್ನು ಪಾವತಿಸಲಾಗುತ್ತಿದೆ. ಜಿಲ್ಲೆಯಲ್ಲಿ ಚುನಾವಣಾ ಕಾರ್ಯಕ್ಕೆಂದೇ 50–60ಕ್ಕೂ ಹೆಚ್ಚು ವಿಡಿಯೊಗ್ರಾಫರ್ಸ್‌ಗಳನ್ನು ನಿಯೋಜಿಸಲಾಗಿದೆ.

ಅಭ್ಯರ್ಥಿಗಳಿಗೂ ಬೇಕು:

ಸಾಕಷ್ಟು ಅಭ್ಯರ್ಥಿಗಳು ಈಗ ಪ್ರಚಾರಕ್ಕೆ ಆನ್‌ಲೈನ್‌ ಮಾಧ್ಯಮದ ಮೊರೆ ಹೋಗಿದ್ದಾರೆ. ಅವರ ದೈನಂದಿನ ಪ್ರಚಾರಕಾರ್ಯಗಳೆಲ್ಲವೂ ಸಾಮಾಜಿಕ ಜಾಲತಾಣಗಳ ಮೂಲಕ ನೇರಪ್ರಸಾರಗೊಳ್ಳುತ್ತಿವೆ. ಈ ಕೆಲಸಕ್ಕೆ ನುರಿತ ಛಾಯಾಗ್ರಾಹಕರನ್ನು ನೇಮಿಸಿಕೊಳ್ಳಲಾಗಿದೆ. ಕೆಲವರು ಎರಡು ತಿಂಗಳ ಪೂರ್ಣ ಅವಧಿಗೆ ಕೆಲಸಗಾರರನ್ನು ಬುಕ್‌ ಮಾಡಿಕೊಂಡಿದೆ. ಅವರಿಗೆ ತಿಂಗಳಿಗೆ ₹40 ಸಾವಿರದಿಂದ ಹಿಡಿದು ₹1 ಲಕ್ಷದವರೆಗೂ ವೇತನ ರೂಪದಲ್ಲಿ ಹಣ ನೀಡಲಾಗುತ್ತಿದೆ. ಅದರಲ್ಲೂ ಬರವಣಿಗೆ ಬಲ್ಲ ಛಾಯಾಗ್ರಾಹಕರು ದುಪ್ಪಟ್ಟು ಸಂಪಾದನೆ ಮಾಡುತ್ತಿದ್ದಾರೆ.

ಸದ್ಯ ನಾಮಪತ್ರ ಸಲ್ಲಿಕೆ ಭರಾಟೆ ನಡೆದಿದೆ. ಈಗಾಗಲೇ ಅನೇಕ ಮಂದಿ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಇದೇ 17ರಿಂದ 19ರವರೆಗೆ ನಾಮಪತ್ರ ಸಲ್ಲಿಕೆ ಮೂಲಕ ಶಕ್ತಿ ಪ್ರದರ್ಶನ ಮಾಡಲಿದ್ದಾರೆ. ಇದರ ಕವರೇಜ್‌ಗೆಂದು ಅಭ್ಯರ್ಥಿಗಳು ಪರಿಣಿತರ ವಿಶೇಷ ತಂಡಗಳನ್ನೇ ನಿಯೋಜಿಸಿಕೊಂಡಿದ್ದಾರೆ. ಇವರಿಗೆ ವಿಶೇಷ ರೂಪದ ಭತ್ಯೆಗಳೂ ಸಿಗತೊಡಗಿವೆ.

ಶುಭ ಸಮಾರಂಭಗಳಿಗೆ ಕೊರತೆ: ಇಷ್ಟೆಲ್ಲ ಬೇಡಿಕೆ ಇರುವ ಕಾರಣ ಈಗ ಸಾಮಾನ್ಯ ಶುಭ ಸಮಾರಂಭಗಳಿಗೆ ಛಾಯಾಗ್ರಾಹಕರು ಸಿಗದಂತೆ ಆಗಿದೆ. ಸಿಕ್ಕರೂ ಹಣದ ವಿಚಾರದಲ್ಲಿ ಚೌಕಾಸಿ ಮಾಡುವ ಹಾಗಿಲ್ಲ. ಏಪ್ರಿಲ್‌ 17, 22, 23, 24, 29, 30 ಹಾಗೂ ಮೇ 6, 7 ರಂದು ಶುಭ ಲಗ್ನಗಳು ಇವೆ. ಈ ದಿನಗಳಂದು ಹುಡುಕಿದರೂ ಛಾಯಾಗ್ರಾಹಕರು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಆದರೆ ಈ ಸಂಪಾದನೆ ತಾತ್ಕಾಲಿಕ ಮಾತ್ರ. ಮೇ 13ರಂದು ಮತ ಎಣಿಕೆ ನಡೆದು, ಫಲಿತಾಂಶ ಹೊರಬಿದ್ದ ಬಳಿಕ ಇವರನ್ನು ಕೇಳುವವರಿಲ್ಲ. ಆಗ ಉಳಿದ ಸಂಪಾದನೆಯೇ ಗತಿ ಎನ್ನುತ್ತಾರೆ ಜಿಲ್ಲೆಯ ಛಾಯಾಗ್ರಾಹಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT