ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಎದೆಯಲ್ಲಿ ಕನ್ನಡ ಬೀಜ ಬಿತ್ತಬೇಕು

Last Updated 12 ನವೆಂಬರ್ 2019, 16:41 IST
ಅಕ್ಷರ ಗಾತ್ರ

ಚನ್ನಪಟ್ಟಣ: ಮಾತೃಭಾಷೆಯನ್ನು ಮುಂದಿನ ಪೀಳಿಗೆಗೂ ಉಳಿಸುವ ನಿಟ್ಟಿನಲ್ಲಿ ಬಾಲ್ಯದಿಂದಲೇ ಮಕ್ಕಳ ಎದೆಯಲ್ಲಿ ಕನ್ನಡ ಬೀಜವನ್ನು ಬಿತ್ತಬೇಕು ಎಂದು ಅರ್ಚಕರಹಳ್ಳಿ ಆದಿಚುಂಚನಗಿರಿ ಶಾಖಾ ಮಠದ ಅನ್ನದಾನೇಶ್ವರ ಸ್ವಾಮೀಜಿ ಸಲಹೆ ನೀಡಿದರು.

ಪಟ್ಟಣದ ಉರ್ದು ಶಾಲೆಯಲ್ಲಿ ಅಮೃತ ವಿಕಲಚೇತನ ಟ್ರಸ್ಟ್ ಹಾಗೂ ನವಚೇತನ ಚಾರಿಟಬಲ್ ಟ್ರಸ್ಟ್ ಫಾರ್ ಡಿಸೇಬಲ್ಸ್ ಸಂಸ್ಥೆಗಳ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಹಾಗೂ ವಿವಿಧ ಉರ್ದು ಶಾಲಾ ಮಕ್ಕಳಿಗೆ ಶೈಕ್ಷಣಿಕ ಪರಿಕರ ವಿತರಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

‘ನಮ್ಮ ಮಕ್ಕಳಿಗೆ ಕನ್ನಡ ಕಲಿಸಿದರೆ ಅದರ ಕಂಪು ಮುಂದಿನ ತಲೆಮಾರಿಗೂ ಪಸರಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ವಿವಿಧತೆಯಲ್ಲಿ ಏಕತೆಯನ್ನು ಸಾರುವ ಭಾರತದಲ್ಲಿ ಪ್ರಾದೇಶಿಕ ಭಾಷೆಗಳಿಗೆ ತಮ್ಮದೇ ಆದ ಇತಿಹಾಸವಿದ್ದು, ಮಾತೃ ಭಾಷೆ ಕನ್ನಡವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಬೆಳೆಸುವ ದಿಕ್ಕಿನಲ್ಲಿ ಸಂಘಸಂಸ್ಥೆಗಳ ಜತೆಗೆ ಜನಸಾಮಾನ್ಯರೂ ಕೈ ಜೋಡಿಸಬೇಕು’ ಎಂದರು.

ಅಮೃತ ವಿಕಲಚೇತನ ಟ್ರಸ್ಟ್ ಕಾರ್ಯದರ್ಶಿ ಟಿ.ರಮೇಶ್ ಮಾತನಾಡಿ, ‘ಸಂಘದ ವತಿಯಿಂದ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಜಿಲ್ಲೆಯ ವಿವಿಧೆಡೆ ಶಾಲಾ ಮಕ್ಕಳಿಗೆ ಶೈಕ್ಷಣಿಕ ಪರಿಕರಗಳನ್ನು ನೀಡುವ ಮೂಲಕ ಸರ್ಕಾರಿ ಶಾಲೆಗಳ ಉಳಿವಿಗೆ ಅಳಿಲು ಸೇವೆ ಸಲ್ಲಿಸುತ್ತಿದ್ದೇವೆ’ ಎಂದರು.

ನವಚೇತನ ಚಾರಿಟಬಲ್ ಟ್ರಸ್ಟ್ ಫಾರ್ ಡಿಸೇಬಲ್ಸ್ ಸಂಸ್ಥೆ ಅಧ್ಯಕ್ಷ ಕೆ.ಎಸ್.ಮಂಜುನಾಥ್ ಮಾತನಾಡಿದರು.

ಮುಸ್ಲಿಂ ಧರ್ಮಗುರು ಸಯ್ಯದ್ ಉಲ್ಲಾ ಸಾಹೇಬ್ ಇಬ್ರಾಹಿಂ, ಕನ್ನಡ ಸಾಹಿತ್ಯ ಪರಿಷತ್ ರಾಮನಗರ ಜಿಲ್ಲಾ ಘಟಕದ ಅಧ್ಯಕ್ಷ ಸಿಂ.ಲಿಂ.ನಾಗರಾಜು, ಟ್ರಸ್ಟ್ ಖಜಾಂಚಿ ಸಪ್ನಾ ರಮೇಶ್, ಖದೀರ್ ಮಹಮ್ಮದ್ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ವಿವಿಧ ಸರ್ಕಾರಿ ಉರ್ದು ಶಾಲೆಗಳ 1,500 ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಹಾಗೂ ಶೈಕ್ಷಣಿಕ ಪರಿಕರ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT