ಭಾನುವಾರ, ಸೆಪ್ಟೆಂಬರ್ 19, 2021
29 °C
ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥಾಪನಾ ದಿನ ಆಚರಣೆ

‘ಕನ್ನಡದ ಒಗ್ಗೂಡುವಿಕೆಗೆ ಶ್ರಮಿಸಿದ ಒಡೆಯರ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ‘ ಸ್ವಾತಂತ್ರ್ಯ ನಂತರದಲ್ಲಿ ಕನ್ನಡ ಭಾಷೆ, ಸಂಸ್ಕೃತಿಯನ್ನು ಒಗ್ಗೂಡಿಸುವ ಕೆಲಸಕ್ಕೆ ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್’ ಎಂದು ಸಂಗೀತ ವಿದ್ವಾನ್ ಶಿವಾಜಿ ರಾವ್ ಸ್ಮರಿಸಿದರು.

ಅರ್ಚಕರಹಳ್ಳಿಯ ಪ್ರಕಾಶ್ ಚಂದ್ರ ಕಾಂಪ್ಲೆಕ್ಸ್ ನ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ವತಿಯಿಂದ ಭಾನುವಾರ ಸಂಜೆ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 104ನೇ ಸಂಸ್ಥಾಪನ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ನಾಡಿಗೆ ಒಡೆಯರ್ ಅವರ ಕೊಡುಗೆ ಅಪಾರವಾಗಿದೆ. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕತಿ ರಕ್ಷಿಸಲು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ಕನ್ನಡ ಸಾಹಿತ್ಯ ಪರಿಷತ್ 1915ರಲ್ಲಿ ಸ್ಥಾಪನೆಯಾಯಿತು. ಎಚ್.ವಿ. ನಂಜುಂಡಯ್ಯನವರ ಅಧ್ಯಕ್ಷತೆಯಲ್ಲಿ ನಾಲ್ಕು ದಿನಗಳ ಕಾಲ ನಡೆದ ಸಭೆಯಲ್ಲಿ ಸಾಹಿತ್ಯ ಪರಿಷತ್ ಸ್ಥಾಪನೆಗೆ ತೀರ್ಮಾನಿಸಲಾಯಿತು. ಆ ಸಭೆಯೇ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನವಾಗಿ ಆರಂಭವಾಯಿತು ಎಂದರು.

1920ರಲ್ಲಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನ ಅರಸು ಮನೆತನಕ್ಕೆ ಉಳಿಸಿ, ಉಪಾಧ್ಯಕ್ಷ ಸ್ಥಾನವನ್ನು ಚುನಾವಣೆ ಮೂಲಕ ಆಯ್ಕೆ ಮಾಡುವ ವ್ಯವಸ್ಥೆ ಆರಂಭವಾಯಿತು. ದೇಶದಲ್ಲಿ ಚುನಾವಣೆ ಅಂದರೇನು ಎಂದು ಗೊತ್ತಿಲ್ಲದ ಕಾಲದಲ್ಲಿ ಮೊದಲ ಬಾರಿಗೆ ಚುನಾವಣೆಯನ್ನು ಮೈಸೂರು ಅರಸರು ಚಾಲನೆಗೆ ತಂದರು. ಡಿ.ವಿ. ಗುಂಡಪ್ಪ ಪರಿಷತ್ತಿನ ಅಧ್ಯಕ್ಷರಾದ ಕಾಲದಲ್ಲಿ ಮೈಸೂರು ಪ್ರಾಂತ್ಯಕ್ಕೆ ಸೀಮಿತವಾಗಿದ್ದ ಪರಿಷತ್ ಅನ್ನು ಬೇರೆ ಪ್ರಾಂತಗಳಲ್ಲೂ ಶಾಖೆಗಳನ್ನು ತೆರೆಯುವ ಕೆಲಸ ಮಾಡಿದರು ಎಂದರು.

ರಾಮನಗರದಲ್ಲಿ ಪರಿಷತ್ತಿನ ಬೆಳವಣಿಗೆಗೆ ಎಂ.ಜಿ.ನಾಗರಾಜು, ಎಸ್.ಎಲ್.ತಿಮ್ಮಯ್ಯ, ಎಲ್. ಚಿಕ್ಕಪ್ಪಾಜಿ, ಕೃಷ್ಣೇಗೌಡ, ಚೊ.ಶಿವಣ್ಣ ಸೇರಿದಂತೆ ಹಲವರು ಪ್ರಮುಖ ಕಾರಣರಾಗಿದ್ದಾರೆ ಎಂದು ಅವರು ಹೇಳಿದರು.

ಉಪನ್ಯಾಸ ನೀಡಿದ ಸಾಹಿತಿ ವಿ.ಎಚ್. ರಾಜಶೇಖರ್ ಇತ್ತೀಚಿನ ವರ್ಷಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ ರಾಜಕಾರಣಿಗಳು, ಉದ್ಯಮಿಗಳು ಮತ್ತು ಮಠಾಧೀಶರ ಪ್ರವೇಶದಿಂದ ಪರಿಷತ್ತಿನ ಆಶಯಗಳಿಗೆ ಧಕ್ಕೆಯಾಗುತ್ತಿದೆ. ಮೈಸೂರು ಸಂಸ್ಥಾನದ ನರಸಿಂಹರಾಜ ಒಡೆಯರ್, ದಿವಾನ್ ಸರ್.ಎಂ.ವಿಶ್ವೇಶ್ವರಯ್ಯ, ಎಚ್.ವಿ.ನಂಜುಂಡಯ್ಯ ಅವರ ಪರಿಶ್ರಮದಿಂದ ಕನ್ನಡ ಸಾಹಿತ್ಯ ಪರಿಷತ್ತು ಸಾಂಸ್ಕೃತಿಕ ಸಂಘಟನೆಯಾಗಿ ರಚನೆಯಾಯಿತು ಎಂದು ತಿಳಿಸಿದರು.

ಇಂತಹ ಸ್ವಾಯತ್ತ ಸಂಸ್ಥೆಗೆ ಒಳದಾರಿಯಲ್ಲಿ ರಾಜಕಾರಣಿಗಳು ಪ್ರವೇಶಿಸಿ ಸಾಮ್ರಾಜ್ಯ ವಿಸ್ತರಣೆಯ ಪ್ರಯತ್ನ ಮಾಡುತ್ತಿರುವುದರಿಂದ ಪರಿಷತ್ತನ್ನು ಕಟ್ಟಿ ಬೆಳೆಸಿದ ಮಹನೀಯರ ಆಶೋತ್ತರಗಳು ನಶಿಸುತ್ತಿವೆ. ಜತೆಗೆ ಹಲವು ಸವಾಲುಗಳನ್ನು ಎದುರಿಸಬೇಕಾಗಿದೆ. ಭಾಷೆ ಮತ್ತು ಸಂಸ್ಕೃತಿಯ ಜತೆಗೆ ಶಿಕ್ಷಣ ಮಾಧ್ಯಮವನ್ನು ಕನ್ನಡ ಮಾಧ್ಯಮದಲ್ಲಿ ಭೋಧನೆ ಮಾಡಬೇಕು. ಗಡಿನಾಡ ಕನ್ನಡಿಗರ ಪರವಾಗಿ ಧ್ವನಿ ಎತ್ತಬೇಕಿದೆ ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸಿಂ.ಲಿಂ. ನಾಗರಾಜ್ ಮಾತನಾಡಿ ಬೆಂಗಳೂರಿನ ಕೂಗಳತೆಯಲ್ಲಿರುವ ರಾಮನಗದಲ್ಲಿ ಕನ್ನಡ ಭವನ ನಿರ್ಮಾಣ ಮಾಡಲಾಗಿಲ್ಲ. ಪರಿಷತ್ತಿನ ಕೂಗು ಕೇವಲ ಧ್ವನಿಯಾಗಿ ಉಳಿದಿದೆ. ಇದಕ್ಕೆ ರಾಜಕೀಯ ಮುಖಂಡರು ಮತ್ತು ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯೇ ಕಾರಣವಾಗಿದೆ. ಆದ್ದರಿಂದ ಜಿಲ್ಲಾ ಕೇಂದ್ರದಲ್ಲಿ ಕನ್ನಡ ಭವನ ನಿರ್ಮಾಣಕ್ಕಾಗಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನಾ ಧರಣಿ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ಎಚ್.ಪಿ. ನಂಜೇಗೌಡ, ಎಚ್.ಎಸ್. ರೂಪೇಶ್ ಕುಮಾರ್, ರವೀಂದ್ರ, ಅಂಕನಹಳ್ಳಿ ಪಾರ್ಥ, ಎಸ್. ಸುಮಂಗಳ ಹಾರೋಕೊಪ್ಪ, ಆರ್.ವಿ. ನಾರಾಯಣ್, ಚಲುವರಾಜು, ಬಿ.ಟಿ. ದಿನೇಶ್, ಕೂ.ಗಿ. ಗಿರಿಯಪ್ಪ, ಪಿ.ಎಸ್. ರಾಜು, ಎಲ್.ಎನ್. ವನರಾಜು, ಗೋಪಾಲ್, ವಿ. ವಿನಯ್ ಕುಮಾರ್, ಗೋಪಾಲ್ ಇದ್ದರು.

* ರಾಮನಗರದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಸರ್ಕಾರ, ಜಿಲ್ಲಾಡಳಿತ ಸ್ಪಂದಿಸುತ್ತಿಲ್ಲ. ಈ ಧೋರಣೆ ಮುಂದುವರಿದರೆ ಪ್ರತಿಭಟನೆ ಅನಿವಾರ್ಯ
–ಸಿಂ.ಲಿಂ. ನಾಗರಾಜು, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು