ಬುಧವಾರ, ಮೇ 18, 2022
23 °C
ಚನ್ನಪಟ್ಟಣ ಕಸಾಪ ತಾಲ್ಲೂಕು ಅಧ್ಯಕ್ಷರ ಪದಗ್ರಹಣ

‘ಕನ್ನಡಿಗರ ಬದುಕು ಹಸನಾಗಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಪಟ್ಟಣ: ‘ಕನ್ನಡ ಹಾಗೂ ಕನ್ನಡಿಗರ ಬದುಕು ಹಸನಾಗಿದ್ದರೆ ಭಾಷೆ, ಸಂಸ್ಕೃತಿ ಸಮೃದ್ಧವಾಗಿರುತ್ತದೆ’ ಎಂದು ಜಾನಪದ ವಿದ್ವಾಂಸ ಡಾ.ಚಕ್ಕೆರೆ ಶಿವಶಂಕರ್ ಅಭಿಪ್ರಾಯಪಟ್ಟರು.

ನಗರದ ಮಹದೇಶ್ವರ ದೇವಸ್ಥಾನದ ಬಳಿಯ ಕಲ್ಯಾಣ ಮಂಟಪದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಶನಿವಾರ ನಡೆದ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬದುಕು ನಾಶವಾದರೆ ಸಾಹಿತ್ಯ, ಸಂಸ್ಕೃತಿ ನಾಶವಾಗುತ್ತದೆ. ಹಾಗಾಗಿ, ಕನ್ನಡಿಗರು ಮೊದಲು ಬದುಕನ್ನು ಕಟ್ಟಿಕೊಳ್ಳಬೇಕು. ನಾಡಿನ ಜನರ ಬದುಕಿನ ಮೇಲೆ ಆಗುತ್ತಿರುವ ಸಾಮಾಜಿಕ ಆಘಾತಗಳು, ರಾಜಕೀಯ ದಾಳಿಗಳು ಬದುಕಿನ ಸಾಮರಸ್ಯವನ್ನು ಹಾಳು ಮಾಡುತ್ತಿವೆ. ಎಲ್ಲರ ಗಮನ ಒಡೆದು ಆಳುವ ನೀತಿಯ ಕಡೆಗೆ ಇದೆ. ಕನ್ನಡಿಗರು ಎಚ್ಚೆತ್ತುಕೊಂಡು ತಮ್ಮ ಬದುಕು ಹಸನಾಗಿಸಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಸಿಂ.ಲಿಂ. ನಾಗರಾಜು ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾಗಿ 108ನೇ ವರ್ಷಕ್ಕೆ ಕಾಲಿಡುತ್ತಿದೆ. ಈ ವೇಳೆಯಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಕನ್ನಡ ಭವನ ನಿರ್ಮಾಣವಾಗಬೇಕು. ಇದಕ್ಕೆ ಜನಪ್ರತಿನಿಧಿಗಳು, ಸರ್ಕಾರ ಸಹಕಾರ ನೀಡಬೇಕು ಎಂದರು.

ಅಧ್ಯಕ್ಷತೆವಹಿಸಿದ್ದ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಟಿ. ನಾಗೇಶ್ ಮಾತನಾಡಿ, ಜಿಲ್ಲಾ ಕಸಾಪದಿಂದ ಮುಂದಿನ ದಿನಗಳಲ್ಲಿ ಕ್ರಿಯಾಶೀಲ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾಹಿತ್ಯವನ್ನು ಜನರ ಬಳಿಗೆ ಕರೆದೊಯ್ಯುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ ರಾಂಪುರ ಪ್ರಾಸ್ತಾವಿಕ ಮಾತನಾಡಿದರು. ತಾಲ್ಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ಬಿ. ಚಲುವರಾಜು, ಜಿಲ್ಲಾ ಕಸಾಪ ಕಾರ್ಯದರ್ಶಿ ಸಿ. ರಾಜಶೇಖರ್, ಉದ್ಯಮಿ ಸಿ.ಎನ್. ರಘುನಂದನ್, ಕನಕಪುರ ತಾಲ್ಲೂಕು ಕಸಾಪ ಅಧ್ಯಕ್ಷ ಶಿವನಹಳ್ಳಿ ಶಿವಲಿಂಗಯ್ಯ, ಜಿಲ್ಲಾ ಕಸಾಪ ಸಂಚಾಲಕರಾದ ಲಕ್ಷ್ಮಿನಾರಾಯಣ, ಮಂಜೇಶ್ ಬಾಬು ಇದ್ದರು.

ಗಾಯಕರಾದ ಬೇವೂರು ರಾಮಯ್ಯ, ಚೌ.ಪು. ಸ್ವಾಮಿ, ಗೋವಿಂದಹಳ್ಳಿ ಶಿವಣ್ಣ ಗೀತಗಾಯನ ನಡೆಸಿಕೊಟ್ಟರು. ಕಾರ್ಯಕ್ರಮಕ್ಕೂ ಮೊದಲು ಈಚೆಗೆ ನಿಧನರಾದ ಕಸಾಪ ಸದಸ್ಯರಾದ ಧರ್ಮನಂದನ, ಕೆ. ಜಯರಾಂ, ಸಿ.ಎಸ್. ಸಿದ್ದಲಿಂಗಯ್ಯ ಅವರಿಗೆ ಶ್ರದ್ಧಾಂಜಲಿ
ಸಲ್ಲಿಸಲಾಯಿತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.