ರಾಮನಗರ: ‘ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿಯುವವರಿಗೆ ಕಾವೇರಿ ವಿಷಯದಲ್ಲಿ ಬದ್ಧತೆ ಕೊರತೆ ಜೊತೆಗೆ, ವಿವಾದ ಬಗೆಹರಿಸುವ ಇಚ್ಛಾಶಕ್ತಿಯೂ ಇಲ್ಲ. ಇದೇ ಕಾರಣಕ್ಕಾಗಿ ಹಲವು ವರ್ಷಗಳಿಂದ ನೀರಿನ ವಿಷಯದಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಾ ಬಂದಿದೆ’ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಅಧ್ಯಕ್ಷ ಧರಣೀಶ್ ರಾಂಪುರ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಗುರುವಾರ ಪರಿಷತ್‌ನ ತಾಲ್ಲೂಕು ಘಟಕವು ಹಮ್ಮಿಕೊಂಡಿದ್ದ ‘ಕಾವೇರಿಗಾಗಿ ನಮ್ಮ ಕೂಗು: ಚಿಂತನಾ ಗೋಷ್ಠಿ’ ಉದ್ಘಾಟಿಸಿ ಅವರು ಮಾತನಾಡಿದರು.
‘ಮಳೆ ಕೊರತೆ ಎದುರಾದಾಗಲೆಲ್ಲಾ ಕಾವೇರಿ ನೀರು ಹಂಚಿಕೆಯ ವಿವಾದ ಉಲ್ಭಣಿಸುತ್ತದೆ. ಆಗ ಎರಡೂ ರಾಜ್ಯಗಳ ರೈತರು ಸಮಸ್ಯೆಗೆ ಅನುಭವಿಸುತ್ತಾರೆ. ಕರ್ನಾಟಕದಲ್ಲಿ ನೀರಿನ ಬಳಕೆ ಮತ್ತು ಅಚ್ಚುಕಟ್ಟು ಪ್ರದೇಶ ಕಡಿಮೆ ಇದ್ದರೆ, ತಮಿಳುನಾಡು ಎರಡೂ ವಿಷಯದಲ್ಲಿ ಮುಂದಿದೆ. ನೀರಿನ ವಿವಾದವನ್ನು ಕಾನೂನಿನ ಪರಿಧಿಯೊಳಗೆ ಹಾಗೂ ಅದರಾಚೆಗೂ ಗಂಭೀರವಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕಿದೆ’ ಎಂದು ಅಭಿಪ್ರಾಯಪಟ್ಟರು.
‘ಈ ವಿಷಯದಲ್ಲಿ ಎರಡು ರಾಜ್ಯಗಳ ನೀರಾವರಿ ತಜ್ಞರು ಚಿಂತನೆ ನಡೆಸಬೇಕು. ಆಯಾ ರಾಜ್ಯದ ಸರ್ಕಾರಕ್ಕೆ ವಸ್ತುಸ್ಥಿತಿ ಮನವರಿಕೆ ಮಾಡಿಕೊಡಬೇಕು. ರಾಜ್ಯದಲ್ಲಿ ಮೇಕೆದಾಟು ಅಣೆಕಟ್ಟೆ ನಿರ್ಮಾಣ ಯೋಜನೆಯನ್ನು ಆದಷ್ಟು ಬೇಗ ಕಾರ್ಯಗತಗೊಳಿಸಲು ಸರ್ಕಾರ ಮುಂದಾಗಬೇಕು. ನೀರಿಗೆ ಪರ್ಯಾಯ ಮಾರ್ಗ ಇಲ್ಲದಿದ್ದರೆ ಮುಂದೆ ನೀರಿಗಾಗಿ ಹಾಹಾಕಾರ ಉಂಟಾಗುತ್ತದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಸು.ಚಿ. ಗಂಗಾಧರಯ್ಯ ಮಾತನಾಡಿ, ‘ಸ್ವಾತಂತ್ರ್ಯ ಪೂರ್ವ ಮತ್ತು ನಂತರದಿಂದಲ್ಲೂ ಕಾವೇರಿ ವಿಷಯದಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಲೇ ಇದೆ. ಕೇಂದ್ರ ಸರ್ಕಾರವಾಗಲಿ, ರಾಜ್ಯ ಸರ್ಕಾರವಾಗಲಿ ಈ ಅನ್ಯಾಯವನ್ನು ಸರಿಪಡಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಡದಿರುವುದೇ ವಿವಾದ ಜೀವಂತಾಗಿರುವುದಕ್ಕೆ ಕಾರಣ’ ಎಂದರು.
ಪರಿಷತ್ ಜಿಲ್ಲಾಧ್ಯಕ್ಷ ಬಿ.ಟಿ. ನಾಗೇಶ್, ‘ಕಾವೇರಿ ಕೊಳ್ಳದಲ್ಲಿ ಸದ್ಯ ಇರುವ ಕೆರೆ–ಕಟ್ಟೆಗಳನ್ನು ಪ್ರತಿ ವರ್ಷ ತುಂಬಿಸಿಕೊಳ್ಳಬೇಕು. ಮತ್ತಷ್ಟು ನಿರ್ಮಾಣ ಮಾಡಬೇಕು. ಮಳೆ ಶುರುವಾಗುತ್ತಿದ್ದಂತೆ ನಮ್ಮ ಕೆರೆ–ಕಟ್ಟೆಗಳನ್ನು ತುಂಬಿಸಿಕೊಂಡರೆ, ರೈತರಿಗೆ ತೊಂದರೆಯಾಗುವುದಿಲ್ಲ. ಅಲ್ಲದೆ, ಜಲಾಶಯಗಳಲ್ಲಿರುವ ಹೂಳನ್ನು ಆದ್ಯತೆ ಮೇರೆಗೆ ತೆಗೆಸಬೇಕು. ಹೂಳಿನಿಂದಾಗಿ ನೀರು ಸಂಗ್ರಹ ಕಡಿಮೆಯಾಗುತ್ತಿದೆ’ ಎಂದು ಅಭಿಪ್ರಾಯಪಟ್ಟರು.
ಪರಿಷತ್‌ನ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಟಿ. ದಿನೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಪ್ರಾಧ್ಯಪಕ ಜಿ.ಎಚ್. ರಾಮಯ್ಯ, ಪ್ರೊ. ಕರೀಗೌಡ, ನಿವೃತ್ತ ಪ್ರಾಂಶುಪಾಲ ವನರಾಜು, ಜಾನಪದ ಕಲಾವಿದ ಚೌ.ಪು. ಸ್ವಾಮಿ, ಪರಿಷತ್ ಪದಾಧಿಕಾರಿಗಾದ ಬಿಳಗುಂಬ ರಾಜೇಂದ್ರ, ದೇವರಾಜು, ಸುರೇಶ್, ಕುಮಾರ್, ಸಂತೋಷ, ರವಿಕುಮಾರ್ ಹಾಗೂ ಇತರರು ಇದ್ದರು.
ಕಾನೂನು, ಕಾನೂನಿನಾಚೆಗೂ ಪರಿಹಾರ ಕಂಡುಕೊಳ್ಳಬೇಕು ನೀರಿಗೆ ಪರ್ಯಾಯ ಮಾರ್ಗ ಕಂಡುಕೊಳ್ಳದಿದ್ದರೆ ಹಾಹಾಕಾರ ಜಲಾಶಯ, ಕೆರೆ–ಕಟ್ಟೆಗಳ ಹೂಳು ತೆಗೆಸಿ, ನೀರು ತುಂಬಿಸಿ
ವಿಷಯ ತಜ್ಞರು ಏನಂದರು?
‘ನೀರು ವ್ಯರ್ಥವಾಗದಂತೆ ತಡೆಯಬೇಕು’ ಸದ್ಯದ ಸ್ಥಿತಿಯಲ್ಲಿ ಕಾವೇರಿ ನೀರು ತಮಿಳುನಾಡು ಮತ್ತು ಬೆಂಗಳೂರಿನ ಜನರಿಗೆ ಕೇವಲ ಕುಡಿಯುವುದಕ್ಕೆ ಸೀಮಿತವಾಗುತ್ತಿದೆ. ಮಳೆಗಾಲದಲ್ಲಿ ತುಂಬಿ ಹರಿಯುವ ನೀರು ವ್ಯರ್ಥವಾಗಿ ಸಮುದ್ರಕ್ಕೆ ಹರಿದು ಹೋಗದಂತೆ ತಡೆಯಬೇಕು. ಆ ನಿಟ್ಟಿನಲ್ಲಿ ಮೇಕೆದಾಟು ಯೋಜನೆ ಉತ್ತಮವಾದುದು. ಇದರ ಜೊತೆಗೆ ಅಲ್ಲಲ್ಲಿ ಚೆಕ್ ಡ್ಯಾಂ ನಿರ್ಮಾಣ ಮಾಡಬೇಕು. ಇದರಿಂದ ರೈತರ ಕೃಷಿ ಚಟುವಟಿಕೆಗಳ ಜೊತೆಗೆ ಮೀನುಗಾರಿಕೆಗೂ ಉತ್ತೇಜಿಸಬೇಕು. ಇದರಿಂದ ಅವರ ಆರ್ಥಿಕವಾಗಿ ಮತ್ತಷ್ಟು ಸ್ವಾವಲಂಬಿಗಳಾಗುತ್ತಾರೆ. – ಎಸ್. ಭರತ್ ಎಂಜಿನಿಯರ್ *** ‘ಸಂಕಷ್ಟ ಸೂತ್ರ ಪರಿಹಾರ ಬೇಕು’ ಜೀವನದಿ ಕಾವೇರಿ ವಿವಾದಕ್ಕೆ ಪರಿಹಾರ ಕಂಡುಕೊಳ್ಳಲು ಯಾವುದೇ ರಾಜಕೀಯ ಪಕ್ಷಗಳಿಗೆ ಬದ್ಧತೆ ಇಲ್ಲ. ವಿವಾದವನ್ನು ಜೀವಂತವಾಗಿಟ್ಟುಕೊಂಡು ಅದರ ಮೇಲೆ ರಾಜಕೀಯ ಮಾಡುವ ಪರಿಪಾಠ ಎರಡೂ ಕಡೆ ಇದೆ. ವಿವಾದ ಭುಗಿಲೆದ್ದಾಗಲೆಲ್ಲಾ ಕೇವಲ ಮಾತಿನ ಭರವಸೆ ನೀಡುತ್ತಾರೆ. ಕಾರ್ಯರೂಪಕ್ಕೆ ಯಾವೂ ಸರಿಯಾಗಿ ಬರುತ್ತಿಲ್ಲ. ಮಳೆ ಕೊರತೆಯಾದಾಗ ಏನು ಮಾಡಬೇಕೆಂಬುದಕ್ಕೆ ಸಂಕಷ್ಟ ಸೂತ್ರ ಪರಿಹಾರವನ್ನು ಮೊದಲು ಕಂಡುಕೊಳ್ಳಬೇಕು. ನದಿ ಜೋಡಣೆ ಅವಶ್ಯಕತೆಗೆ ತಕ್ಕಂತೆ ಏತ ನೀರಾವರಿ ಯೋಜನೆಗಳು ಜಾರಿಯಾಗಬೇಕು. ಇಸ್ರೇಲ್ ಮಾದರಿಯಂತೆ ಜನರಲ್ಲಿ ನೀರಿನ ಬಳಕೆಯ ಪ್ರಜ್ಞೆ ಸಮರ್ಪಕ ನಿರ್ವಹಣೆ ಹಾಗೂ ಮಿಶ್ರಬೆಳೆ ಬೇಸಾಯದ ಅರಿವು ಹೆಚ್ಚಬೇಕು.
– ಕೆ.ಎಂ. ಪುನೀತ್ ಕುಮಾರ್ ಎಂಜಿನಿಯರ್
‘ಸಮರ್ಥ ವಾದ ಮಂಡನೆಯಲ್ಲೇ ವಿಫಲ’ ಕಾವೇರಿ ವಿಷಯದಲ್ಲಿ ಶತಮಾನದಿಂದಲೂ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಎಲ್ಲರೂ ಹೇಳುತ್ತಾರೆ. ಆದರೆ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಈ ಕುರಿತು ದಾಖಲೆ ಅಂಕಿಅಂಶ ಹಾಗೂ ವಾಸ್ತವಾಂಶದ ವರದಿ ಸಮೇತ ವಾದ ಮಂಡಿಸುವಲ್ಲೇ ನಾವು ವಿಫಲರಾಗುತ್ತಿದ್ದೇವೆ. ನಾವೇನೇ ಅರಚಿಕೊಂಡರೂ ತಮಿಳುನಾಡಿನ ವಾದಕ್ಕೆ ಸಿಗುವ ಮಾನ್ಯತೆ ರಾಜ್ಯದ ವಾದಕ್ಕೆ ಸಿಗದಿರುವುದು ಸಹ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಉತ್ತರ ಭಾರತದ ನದಿಗಳಂತೆ ಕಾವೇರಿ ನಿರಂತರವಾಗಿ ಹರಿಯುತ್ತಿದಿದ್ದರೆ ಇಷ್ಟು ಸಮಸ್ಯೆಯಾಗುತ್ತಿರಲಿಲ್ಲ. ಆದರೂ ತಂತ್ರಜ್ಞಾನ ಬಳಸಿಕೊಂಡು ಕಾವೇರಿ ಕೊಳ್ಳದಲ್ಲಿರುವ ನದಿಗಳ ಜೋಡಣೆ ಮಾಡಿ ಕೆರೆಗಳನ್ನು ತುಂಬಿಸಿಕೊಂಡು ನಮ್ಮ ರೈತರ ಹಿತ ಕಾಪಾಡಬೇಕು.
– ಎ. ಅರುಣ್ ಕುಮಾರ್ ಎಂಜಿನಿಯರ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.