ರಾಮನಗರ: ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ ಕಾವೇರಿ ನೀರು ಹರಿಸಬೇಕೆಂಬ ಸುಪ್ರೀಂ ಕೋರ್ಟ್ ಆದೇಶ ಖಂಡಿಸಿ ಹಾಗೂ ಬರದ ನಡುವೆಯೂ ನೀರು ಬಿಡುಗಡೆ ಮಾಡಿರುವ ರಾಜ್ಯ ಸರ್ಕಾರದ ವಿರುದ್ಧ, ರೈತಪರ ಹಾಗೂ ಕನ್ನಡಪರ ಸಂಘಟನೆಗಳು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದವು.
‘ಕಾವೇರಿ ನಮ್ಮದು... ನಮ್ಮ ನೀರು ನಮ್ಮ ಹಕ್ಕು’ ಎಂದು ಘೋಷಣೆ ಕೂಗಿದ ಸಂಘ–ಸಂಘಟನೆಗಳ ಕಾರ್ಯಕರ್ತರು, ನೀರಿಗಾಗಿ ಖ್ಯಾತೆ ತೆಗೆಯುತ್ತಿರುವ ತಮಿಳುನಾಡು ಸರ್ಕಾರದ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶವನ್ನು ಹೊರ ಹಾಕಿದರು.
ರಸ್ತೆ ತಡೆ: ಬೆಂಗಳೂರು– ಮೈಸೂರು ರಸ್ತೆಯಲ್ಲಿರುವ ಜಿಲ್ಲಾಧಿಕಾರಿ ನಿವಾಸದ ಬಳಿ ರಸ್ತೆಯಲ್ಲಿ ಜಮಾಯಿಸಿದ ವಿವಿಧ ರೈತ ಸಂಘ ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರು, ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ವಾಹನಗಳಿಗೆ ಅಡ್ಡವಾಗಿ ಕೆಲ ಹೊತ್ತು ಕುಳಿತ ಕಾರ್ಯಕರ್ತರು, ನೀರು ಹರಿಸಲು ಶಿಫಾರಸು ಮಾಡಿದ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದ ವಿರುದ್ಧ ಘೋಷಣೆ ಕೂಗಿದರು.
ಬರದ ಪರಿಸ್ಥಿತಿ ಎದುರಿಸುತ್ತಿರುವ ರಾಜ್ಯದ ಹಿತ ಕಡೆಗಣಿಸಿ ಕಾವೇರಿ ನೀರು ಹರಿಸಿದ ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೋರ್ಟ್ ಆದೇಶಕ್ಕೆ ಮಣಿದು ಮತ್ತೆ ನೀರು ಹರಿಸಬಾರದು. ಒಂದು ವೇಳೆ ನೀರು ಹರಿಸಿದರೆ ರಾಜ್ಯದಾದ್ಯಂತ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ರಸ್ತೆ ತಡೆಯಿಂದಾಗಿ ವಾಹನಗಳು ಸಾಲುಗಟ್ಟಿ ನಿಂತವು. ಸವಾರರು ಹಾಗೂ ಪ್ರಯಾಣಿಕರು ಪರದಾಡಿದರು. ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಮೇಶ್‌ಗೌಡ, ರೈತ ಸಂಘದ ಬೈರೇಗೌಡ, ಜಯ ಕರ್ನಾಟಕ ಸಂಘಟನೆಯ ರವಿ, ರೈತ ಮುಖಂಡರಾದ ಸಿ. ಪುಟ್ಟಸ್ವಾಮಿ, ಧರಣೇಶ್, ಹೋರಾಟಗಾರ ಕುಮಾರಸ್ವಾಮಿ, ಮುನಿರಾಜುಗೌಡ, ಶಿವಕುಮಾರ್ ಹಾಗೂ ಇತರರು ಇದ್ದರು.
ಪ್ರತಿಕೃತಿ ದಹನ ಯತ್ನ: ನಗರದ ಐಜೂರು ವೃತ್ತದ ಬಳಿ ಪ್ರತಿಭಟನೆ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ. ನಾರಾಯಣಗೌಡ ಬಣ) ಕಾರ್ಯಕರ್ತರು, ನೀರು ಹರಿಸಲು ಶಿಫಾರಸು ಮಾಡಿದ ಕಾವೇರಿ ನೀರು ನಿರ್ವಹಣಾ ಸಮಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ, ಕಾರ್ಯಕರ್ತರು ಸರ್ಕಾರದ ಪ್ರತಿಕೃತಿ ದಹಿಸಲು ಮುಂದಾದರು.
ಅದಕ್ಕೆ ತಡೆಯೊಡ್ಡಿದ ಪೊಲೀಸರು ಶಾಂತಿಯುತವಾಗಿ ಪ್ರತಿಭಟನೆ ನಡೆಸುವಂತೆ ಮನವಿ ಮಾಡಿದರು. ಆಗ ಪೊಲೀಸರ ಜೊತೆ ವಾಗ್ವಾದ ನಡೆಯಿತು. ಇದರಿಂದ ಸಿಟ್ಟಿಗೆದ್ದ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು. ಯಾವುದೇ ಕಾರಣಕ್ಕೂ ಸರ್ಕಾರ ತಮಿಳುನಾಡಿಗೆ ನೀರು ಹರಿಸಬಾರದು. ನೀರು ಬಿಟ್ಟು ರಾಜ್ಯದ ಹಿತಾಸಕ್ತಿಯನ್ನು ಬಲಿಕೊಟ್ಟರೆ, ಮುಂದೆ ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದರು.
ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಎನ್. ಸತ್ಯನಾರಾಯಣ , ರಾಮನಗರ ತಾಲೂಕು ಅಧ್ಯಕ್ಷ ಟಿ.ಆರ್. ದೇವರಾಜ್, ಚನ್ನಪಟ್ಟಣ, ಅಧ್ಯಕ್ಷ ಸಾಗರ್, ಹಾರೋಹಳ್ಳಿ ಅಧ್ಯಕ್ಷ ಶ್ರೀನಿವಾಸ, ಪ್ರಧಾನ ಕಾರ್ಯದರ್ಶಿ ಭೀಮಲಿಂಗೇಗೌಡ , ಸಂಘಟನಾ ಕಾರ್ಯದರ್ಶಿ ಸಂತೋಷ್, ರೈತ ಘಟಕದ ಅಧ್ಯಕ್ಷ ಶಂಭುಗೌಡ, ಉಪಾಧ್ಯಕ್ಷ ಜಯಕೃಷ್ಣಪ್ಪ, ಅರುಣ್ ಕುಮಾರ್, ಜಿಲ್ಲಾ ವಿದ್ಯಾರ್ಥಿ ಘಟಕದ ಅಧ್ಯಕ್ಷ ರಘುರಾಮ್, ರಾಮನಗರ ಪ್ರಧಾನ ಕಾರ್ಯದರ್ಶಿ ಚನ್ನಕೇಶವ, ಆನಂದ ಕಗ್ಗಲಹಳ್ಳಿ, ನರಸಿಂಹಯ್ಯ , ಪ್ರಕಾಶ್ ಮತ್ತಿತರರು ಇದ್ದರು.
ಡಿ.ಸಿ ಕಚೇರಿ ಎದುರು ಪ್ರತಿಭಟನೆ: ಬರದ ನಡುವೆಯೂ ತಮಿಳುನಾಡಿಗೆ ರಾಜ್ಯ ಸರ್ಕಾರ ನೀರು ಹರಿಸಿರುವುದನ್ನು ಖಂಡಿಸಿ, ಕಸ್ತೂರಿ ಕರ್ನಾಟಕ ರಕ್ಷಣಾ ಸೇನೆಯ ಪದಾಧಿಕಾರಿಗಳು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಸರ್ಕಾರ ಕೂಡಲೇ ನೀರು ಹರಿಸುವುದನ್ನು ನಿಲ್ಲಿಸಿ ರಾಜ್ಯದ ರೈತರ ಹಿತ ಕಾಯಬೇಕು ಎಂದು ಆಗ್ರಹಿಸಿದರು.
ಜನರಿಗೆ ಕುಡಿಯಲು, ರೈತರಿಗೆ ಬೆಳೆಗಳಿಗೆ ಹಾಗೂ ಕೈಗಾರಿಕೆಗಳ ಬಳಕೆಗೆ ಕಾವೇರಿ ನೀರು ನೀಡಬೇಕಿದೆ. ಆದರೆ, ನಮ್ಮಲ್ಲಿ ಈಗ ಕಡಿಮೆ ನೀರಿದೆ. ಪರಿಸ್ಥಿತಿ ಹೀಗಿರುವಾಗ ನಿತ್ಯ ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ ನೀರು ಬಿಟ್ಟರೆ, ಇದೇ ನೀರು ನೆಚ್ಚಿಕೊಂಡಿರುವ ಪ್ರದೇಶಗಳ ಸ್ಥಿತಿ ಭೀಕರವಾಗಲಿದೆ ಎಂದು ಪ್ರತಿಭಟನಾಕಾರರು ಹೇಳಿದರು. ಬಳಿಕ, ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಸೇನೆಯ ಮುಖಂಡರಾದ ವೆಂಕಟಪ್ಪ, ರವಿ ಟಿ.ಜೆ, ಸಂತೋಷ್, ಶಿವಕುಮಾರ್, ದೀಪು, ರವಿ ಗಬ್ಬಾಡಿ, ರಾಮು ಹಾಗೂ ನಾಗೇಶ್ ಇದ್ದರು.
Cut-off box - ‘ರಾಜ್ಯದ ಹಿತಾಸಕ್ತಿ ಬಲಿ ಕೊಡಬೇಡಿ’ ‘ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದು. ಕೋರ್ಟ್ ಆದೇಶ ಕೊಟ್ಟಿದೆ ಎಂದು ನಮ್ಮ ಜನರ ಹಿತಾಸಕ್ತಿಯನ್ನು ಬಲಿ ಕೊಡಬಾರದು. ಈ ವಿಷಯದಲ್ಲಿ ಸರ್ಕಾರ ಕಠಿಣ ನಿಲುವು ತಳೆಯಬೇಕು. ಈ ವಿಷಯದಲ್ಲಿ ರಾಜ್ಯದ ಎಲ್ಲಾ ಪಕ್ಷಗಳು ಒಂದಾಗಬೇಕು. ಸಂಸದರು ಕೇಂದ್ರ ಸರ್ಕಾರದಲ್ಲಿ ದನಿ ಎತ್ತಬೇಕು. ವಾಸ್ತವಾಂಶ ಗಮನಿಸದೆ ನೀರು ಬಿಡುಗಡೆಗೆ ಆದೇಶ ನೀಡಿರುವ ಕೋರ್ಟ್ ಮತ್ತು ನೀರು ನಿರ್ವಹಣಾ ಸಮಿತಿಯವರು ರಾಜ್ಯಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ಪರಿಶೀಲಿಸಬೇಕು. ಕಾವೇರಿ ಕೊಳ್ಳದ ಪ್ರದೇಶಗಳಿಗೆ ಭೇಟಿ ನೀಡಬೇಕು. ಇಲ್ಲದಿದ್ದರೆ ಕರ್ನಾಟಕಕ್ಕೆ ಭಾರೀ ಅನ್ಯಾಯವಾಗುತ್ತದೆ. ಇದುವರೆಗಿನ ಅನ್ಯಾಯ ಸಹಿಸಿಕೊಂಡು ಸಾಕಾಗಿದೆ. ನಮಗಿರುವುದು ಹೋರಾಟ ಮಾರ್ಗವೊಂದೇ’ ಎಂದು ರೈತ ಮುಖಂಡ ಸಿ. ಪುಟ್ಟಸ್ವಾಮಿ ಹೇಳಿದರು. ‘ಮೇಕೆದಾಟು ಯೋಜನೆಯೇ ಪರಿಹಾರ’ ‘ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಅಣೆಕಟ್ಟೆ ನಿರ್ಮಾಣ ಮಾಡಿದ್ದರೆ ರಾಜ್ಯಕ್ಕೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ನಮಗೆ ಅಗತ್ಯವಿರುವಷ್ಟು ನೀರು ಸಂಗ್ರಹಿಸಿಟ್ಟುಕೊಳ್ಳಬಹುದಿತ್ತು. ಆದರೆ ಯೋಜನೆಗೆ ಇನ್ನೂ ಚಾಲನೆ ಸಿಕ್ಕಿಲ್ಲ. ಒಂದೊಮ್ಮೆ ಅಣೆಕಟ್ಟೆ ನಿರ್ಮಾಣವಾದರೆ 60 ಟಿಎಂಸಿ ಅಡಿ ನೀರು ಬಳಕೆಗೆ ಲಭ್ಯವಾಗಲಿದೆ. ಇದರಿಂದ ಐದು ಜಿಲ್ಲೆಗಳಿಗೆ ನೀರು ಸಿಗಲಿದೆ. ರಾಜ್ಯದಲ್ಲಿ ಮುಂಗಾರು ಕೈಕೊಟ್ಟ ಕಾರಣ ಬರ ಆವರಿಸಿದ್ದು ರಾಜ್ಯವು ಸಂಕಷ್ಟದಲ್ಲಿದೆ. ಸರ್ಕಾರ ಈಗಿರುವ ನೀರನ್ನು ಬಿಟ್ಟು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಬಾರದು. ಆದಷ್ಟು ಬೇಗ ವಿವಾದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಜೊತೆಗೆ ಮೇಕೆದಾಟು ಯೋಜನೆಗೆ ಆದಷ್ಟು ಬೇಗ ಚಾಲನೆ ನೀಡಬೇಕು’ ಎಂದು ಕಸ್ತೂರಿ ಕರ್ನಾಟಕ ರಕ್ಷಣಾ ಸೇನೆ ರಾಜ್ಯಾಧ್ಯಕ್ಷ ಅಂಜಿನಪ್ಪ ಒತ್ತಾಯಿಸಿದರು. ‘ಗಾಯದ ಮೇಲೆ ಬರೆ ಎಳೆದಂತಾಗಿದೆ’ ‘ರಾಜ್ಯದಲ್ಲಿ ಎಂದೂ ಕಾಣದಷ್ಟು ಬರಗಾಲದ ಸ್ಥಿತಿ ನಿರ್ಮಾಣವಾಗಿದೆ. 192 ತಾಲ್ಲೂಕುಗಳನ್ನು ಬರಪೀಡಿತವೆಂದು ಸರ್ಕಾರ ಘೋಷಿಸಿದೆ. ಕಾವೇರಿ ಕಣಿವೆ ಭಾಗದಲ್ಲಿ ತೀವ್ರ ಸ್ವರೂಪದ ಬರವಿದೆ. ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆ ಇದೆ. ಹೀಗಿರುವಾಗ ತಮಿಳುನಾಡಿಗೆ ನೀರು ಹರಿಸಲು ಆದೇಶಿಸಿರುವುದು ಆಘಾತಕಾರಿ. ಬರದ ಸಂಕಷ್ಟದಲ್ಲಿರುವ ರಾಜ್ಯದ ಗಾಯದ ಮೇಲೆ ಈ ಆದೇಶ ಬರೆ ಎಳೆದಿದೆ. ಅವರಿಗೆ ನೀರು ಬಿಟ್ಟು ರಾಜ್ಯದ ಜನರು ಏನು ಮಾಡಬೇಕು? ಕಾವೇರಿ ನೀರು ನಿರ್ವಹಣಾ ಸಮಿತಿ ಸುಪ್ರೀಂ ಕೋರ್ಟ್ ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಅರಿತುಕೊಂಡು ಆದೇಶ ನೀಡಬೇಕಿದೆ. ರಾಜ್ಯದ ಪರವಾಗಿ ಸರ್ಕಾರ ಮತ್ತು ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಕಬ್ಬಾಳೇಗೌಡ ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.