ಮಂಗಳವಾರ, ಜೂನ್ 22, 2021
22 °C
ಸೋಮೇಶ್ವರ ಸ್ವಾಮಿ ಬೆಟ್ಟದ ಸರ್ವೆಗೆ ಒತ್ತಾಯ

ಮಾಗಡಿ| ಕೆಂಪೇಗೌಡರ ಗೋಪುರ ದುರಸ್ತಿಗೆ ನಿರಾಸಕ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಗಡಿ: ಪಟ್ಟಣದ ಸೋಮೇಶ್ವರ ಸ್ವಾಮಿ ದೇಗುಲದ ಹಿಂದಿನ ಗುಡ್ಡದ ಮೇಲಿರುವ ಕೆಂಪೇಗೌಡರ ಕಾಲದ ಕಲಾತ್ಮಕ ಗೋಪುರ ಸೂಕ್ತ ನಿರ್ವಹಣೆಯಿಲ್ಲದೆ ಶಿಥಿಲಗೊಂಡಿದ್ದು, ಶಿಖರದಲ್ಲಿ ಬಿರುಕು ಮೂಡಿ ಅಪಾಯಕಾರಿ ಸ್ಥಿತಿಗೆ ತಲುಪಿದೆ.

ಇಟ್ಟಿಗೆ ಗಾರೆಗಚ್ಚು ಬಳಸಿ ನಿರ್ಮಿಸಿರುವ ದ್ರಾವಿಡ ಶೈಲಿಯ ಗೋಪುರದ ಶಿಖರದಲ್ಲಿ ವಿವಿಧ ಬಗೆಯ ದೇವಾನುದೇವತೆಗಳ ವಿಗ್ರಹಗಳಿವೆ. ಮಳೆ, ಗಾಳಿಯ ಹೊಡೆತಕ್ಕೆ ಸಿಲುಕಿ ಇದಕ್ಕೆ ರಕ್ಷಣೆ ಇಲ್ಲದಂತಾಗಿದೆ. ಮುಮ್ಮಡಿ ಕೆಂಪೇಗೌಡರ ಕಾಲದಲ್ಲಿ ಶಿಲ್ಪಿ ಹನುಮಾಪುರದ ಮುನಿಯಾಭೋವಿ ತಂಡ ಗುಡ್ಡದ ಮೇಲೆ ಕಲಾತ್ಮಕ ಗೋಪುರ ನಿರ್ಮಿಸಿದ್ದು. ಕಲಾ ಕೌಶಲ ಮೆರೆದಿದ್ದಾರೆ. ಗುಡ್ಡದ ಮೇಲಿನ ಗೋಪುರದ ಬಂಡೆ ಹತ್ತಲು ಹರಸಾಹಸಪಡಬೇಕಿದೆ.

ಅಂದಿನ ಕಾಲದಲ್ಲಿ ಬೃಹತ್ ಶಿಲಾಕಂಬಗಳಿಂದ ಕೂಡಿದ ಕಲ್ಲಿನ ಮಂಟಪ ಕಟ್ಟಿ, ಅದರಲ್ಲಿ ನಯನ ಮನೋಹರವಾದ ಉತ್ತರಾಭಿಮುಖವಾಗಿರುವ ಕಪ್ಪುಶಿಲೆಯ ನಂದಿ ವಿಗ್ರಹ ಸ್ಥಾಪಿಸಿ ಭಕ್ತಿಯ ಪಾರಮ್ಯ ಮೆರೆದಿದ್ದಾರೆ. ಗೋಪುರ ಇರುವ ಬಂಡೆಯ ಮೇಲೆ ಗಣಪತಿ, ಶಿವಲಿಂಗ ಸಹ ಕೆತ್ತಿದ್ದಾರೆ. ಶಿಖರದಲ್ಲಿ ಭಾರಿ ಬಿರುಕು ಮೂಡಿದ್ದು, ಮಳೆಗಾಲದಲ್ಲಿ ಯಾವುದೇ ಸಮಯದಲ್ಲಿ ಶಿಖರ ಕುಸಿಯುವ ಭೀತಿ ಎದುರಾಗಿದೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೂ ಪ್ರಾಣಾಪಾಯವಿದೆ ಎಂಬುದು ಸ್ಥಳೀಯರ ಹೇಳಿಕೆ.

‘ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿ ಹಲವು ವರ್ಷಗಳು ಉರುಳಿದ್ದರೂ ತಾಲ್ಲೂಕಿನ ಒಂದೇ ಒಂದು ಸ್ಮಾರಕ ಸಂರಕ್ಷಣೆಗೆ ಮುಂದಾಗಿಲ್ಲ. ಪ್ರಾಧಿಕಾರದವರಿಗೆ ಶಿಥಿಲ ಗೋಪುರ ಎಲ್ಲಿದೆ ಎಂಬುದು ತಿಳಿದಿಲ್ಲ. ಪ್ರಾಚ್ಯವಸ್ತು ಇಲಾಖೆಯು ಗೋಪುರ ರಕ್ಷಣೆಗೆ ಮುಂದಾಗಬೇಕಿದೆ. ಪುರಸಭೆ ಗೋಪುರಕ್ಕೆ ಹೋಗಿಬರಲು ರಸ್ತೆ ನಿರ್ಮಿಸಬೇಕಿದೆ’ ಎಂದು ತಾಲ್ಲೂಕು ಸ್ಮಾರಕ ಗುಡುಗೋಪುರ ರಕ್ಷಣೆ ಸಮಿತಿ ಸಂಚಾಲಕ ಕೆ.ಆರ್. ರವಿಕುಮಾರ್ ಮನವಿ ಮಾಡಿದ್ದಾರೆ.

ಕೆಂಪೇಗೌಡರ ಕಾಲದ ಗೋಪುರ ಶಿಥಿಲವಾಗಿರುವುದರಿಂದ ಗೋಪುರದ ಒಳಗಿನ ನಂದಿಯನ್ನು ನೋಡಲು ಬರುವ ಪ್ರವಾಸಿಗಳಿಗೆ ಎಚ್ಚರಿಕೆಯ ನಾಮಫಲಕ ಹಾಕಿಸಬೇಕು ಎಂದು ಮುಖಂಡರಾದ ಶಶಿಧರ್, ಮಾರಯ್ಯ ದೊಂಬಿದಾಸ, ಧರ್ಮದೊರೈ ಮನವಿ ಮಾಡಿದ್ದಾರೆ.

ದುರಸ್ತಿ: ಶಿಥಿಲವಾಗಿರುವ ಕೆಂಪೇಗೌಡರ ಗೋಪುರವಿರುವ ಬೆಟ್ಟದ ಸರ್ವೇ ಮಾಡಿ, ರಸ್ತೆ ನಿರ್ಮಿಸಿಸಿಕೊಟ್ಟರೆ ಸ್ವಂತ ಹಣದಲ್ಲಿ ಗೋಪುರ ದುರಸ್ತಿಪಡಿಸಿ, ಬೆಟ್ಟದ ಮೆಟ್ಟಿಲುಗಳನ್ನು ಹಾಕಿಸಿ ಅಭಿವೃದ್ಧಿ ಪಡಿಸಿಕೊಡುತ್ತೇನೆ’ ಎನ್ನುತ್ತಾರೆ ಮುಖಂಡ ಕೆ. ಬಾಗೇಗೌಡ.

ಮನವಿ: ಗೋಪುರ ಇರುವ ಬೆಟ್ಟದ ಸರ್ವೇ ಮಾಡಿಸಿಕೊಡುವಂತೆ ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಿ 8 ತಿಂಗಳು ಕಳೆದಿವೆ ಎಂದು ಕನ್ನಡ ಸಹೃದಯ ಬಳಗದ ಅಧ್ಯಕ್ಷ ಡಾ.ಮುನಿರಾಜಪ್ಪ ತಿಳಿಸಿದರು.

‘ಸೋಮೇಶ್ವರ ದೇಗುಲದ ಬಳಿ ಇರುವ ಕೆಂಪೇಗೌಡ ಗೋಪುರ ಇರುವ ಬೆಟ್ಟವನ್ನು ಸರ್ವೇ ಮಾಡಿ ಕೊಡುವಂತೆ ಭೂಮಾಪನಾ ಇಲಾಖೆಗೆ ಪತ್ರ ಬರೆದಿದ್ದೇನೆ. ರಸ್ತೆ ನಿರ್ಮಿಸಲು ಭೂಮಿ ಬಿಟ್ಟುಕೊಡುವಂತೆ ರೈತರಿಗೆ ಸೂಚಿಸಿದ್ದೇವೆ’ ಎಂದು ತಹಶೀಲ್ದಾರ್‌ ಬಿ.ಜಿ. ಶ್ರೀನಿವಾಸ್‌ ಪ್ರಸಾದ್‌ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು