ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೆಂಪೇಗೌಡರು ಜಾತಿ, ಊರಿಗೆ ಸೀಮಿತವಲ್ಲ’

ರಾಜ್ಯ ರಸ್ತೆ ಸಾರಿಗೆ ನಿಗಮ ಒಕ್ಕಲಿಗರ ನೌಕರರ ಬಳಗದಿಂದ ಜಯಂತಿ ಆಚರಣೆ
Last Updated 22 ಜುಲೈ 2019, 13:17 IST
ಅಕ್ಷರ ಗಾತ್ರ

ರಾಮನಗರ: ನಾಡಪ್ರಭು ಕೆಂಪೇಗೌಡರು ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ 260 ಕೆರೆಗಳನ್ನು ನಿರ್ಮಿಸಿದ್ದರು ಎಂದು ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಎಚ್.ಎಂ. ಕೃಷ್ಣಮೂರ್ತಿ ಸ್ಮರಿಸಿದರು.

ಇಲ್ಲಿನ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮ ಒಕ್ಕಲಿಗರ ನೌಕರರ ಬಳಗ ಸೋಮವಾರ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 510ನೇ ಜಯಂತ್ಯುತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ಸುಮಾರು 560 ವರ್ಷಗಳ ಹಿಂದೆಯೇ ನಾಡಪ್ರಭು ಕೆಂಪೇಗೌಡರು ಬೆಂಗಳೂರನ್ನು ನಿರ್ಮಿಸುವುದರ ಮೂಲಕ ಎಲ್ಲಾ ಜನಾಂಗದವರಿಗೂ ಸಹ ಒಂದೊಂದು ಬೀದಿಗಳನ್ನು ನಿರ್ಮಿಸಿದ್ದಾರೆ. ದೈವಭಕ್ತರಾಗಿದ್ದ ಅವರು ಸುಮಾರು 130 ದೇವಾಲಯಗಳನ್ನು ನಿರ್ಮಿಸಿದ್ದಾರೆ. ಕೆಂಪೇಗೌಡರು ಒಂದು ಜಾತಿ, ಊರಿಗೆ ಸೀಮಿತವಾಗಿಲ್ಲ. ಅವರ ಆದರ್ಶವನ್ನು ನಾವೆಲ್ಲರೂ ಪಾಲಿಸಿಕೊಂಡು ಮುನ್ನಡೆಯಬೇಕು ಎಂದರು.

ಸಾಹಿತಿ ಡಾ.ಎಂ. ಬೈರೇಗೌಡ ಮಾತನಾಡಿ, ಇತಿಹಾಸದ ಪುಟಗಳಲ್ಲಿ ಹತ್ತಾರು ಮಂದಿ ಕೆಂಪೇಗೌಡರ ವಿವರಗಳು ತೆರೆದುಕೊಳ್ಳುವುದರಿಂದ ಯಾವ ಕೆಂಪೇಗೌಡ ಬೆಂಗಳೂರು ನಿರ್ಮಿಸಿದ, ಯಾವ ಕೆಂಪೇಗೌಡ ಮಾಗಡಿಯನ್ನಾಳಿದ. ಇಷ್ಟೆಲ್ಲಾ ಕಲ್ಯಾಣ ಕಾರ್ಯಗಳನ್ನು ಮಾಡಿದವರು ಯಾರೆಂಬ ಗೊಂದಲಗಳು ಉಳಿದು ಬಿಟ್ಟಿವೆ. ಕೆಂಪೇಗೌಡರ ವಂಶದಲ್ಲಿ ಎಂಟು ಜನ ಕೆಂಪೇಗೌಡ ಇದ್ದಾರೆ. ಹೀಗಾಗಿ ಒಬ್ಬರ ವಿಷಯ ಮತ್ತೊಬ್ಬರಲ್ಲಿ ಬೆರೆತು ಹೋಗಿದೆ. ಕಾಲ ಸಂಬಂಧ ವಿಚಾರಗಳು ಗೋಜಲಾಗಿವೆ ಎಂದು ತಿಳಿಸಿದರು.

ಇದನ್ನು ಸರಿಪಡಿಸಿ ಖಚಿತಗೊಳಿಸುವ ತುರ್ತಿದೆ. ಕೆಂಪೇಗೌಡ ಅಧ್ಯಯನದ ಹಿನ್ನಲೆಗೆ ಯಲಹಂಕ ನಾಡಪ್ರಭುಗಳು ಎಂಬ ಶೀರ್ಷಿಕೆಯೇ ಒಪ್ಪುತ್ತದೆ. ಮೊದಲನೇ ಕೆಂಪೇಗೌಡ ಮತ್ತು ಮಾಗಡಿಯ ಎರಡನೇ ಕೆಂಪೇಗೌಡನ ಕುರಿತು ದೊರೆತಿರುವ ಮಾಹಿತಿಗಳ ಮೂಲಕ ಗೌಡ ದೊರೆಗಳ ಇತಿಹಾಸ ಕಟ್ಟಿಕೊಡುವುದಾದರೆ ಅಲ್ಲಿ ಹಿರಿಯ ಕೆಂಪೇಗೌಡ ಬೆಂಗಳೂರು ನಗರದ ಬುನಾದಿ ಬೆಳವಣಿಗೆಗೆ ಕಾರಣರಾದರೆ, ಇಲ್ಲಿ ಇಮ್ಮಡಿ ಕೆಂಪೇಗೌಡ ಹುತ್ರಿದುರ್ಗ ರಾಮಗಿರಿ, ಮಾಗಡಿಗಳನ್ನು ಅಭಿವೃದ್ಧಿ ಪಡಿಸಿದನೆಂದು ಊಹಿಸಬಹುದು ಎಂದರು.

ಮಾಗಡಿ ಕೆಂಪೇಗೌಡನ ಕುರಿತಂತೆ ಇರುವಷ್ಟು ಜಾನಪದ ಮಾಹಿತಿಗಳು ಮತ್ತಾವ ಬಗೆಯಲ್ಲೂ ಇಲ್ಲ. ಬೆಂಗಳೂರು ಕೆಂಪೇಗೌಡ ಯಲಹಂಕ ನಾಡಪ್ರಭುಗಳಲ್ಲಿ ಅತ್ಯುನ್ನತ ಸ್ಥಾನ ಪಡೆದವನು. ಈತನ ಬಗ್ಗೆ ಐತಿಹಾಸಿಕ ದಾಖಲೆಗಳು ಸಾಕಷ್ಟಿವೆ. ಕೆಂಪೇಗೌಡರ ಬದುಕಿನ ಚರಿತ್ರೆಯನ್ನು ಹಸಿರಾಗಿಟ್ಟುಕೊಳ್ಳುವುದರಿಂದ ಯುವ ಪೀಳಿಗೆಗೆ ಧರ್ಮ ಶ್ರದ್ಧೆ, ದೈವ ಭಕ್ತಿ, ಜನಹಿತ ಆಡಳಿತ, ಮಾನವೀಯತೆ, ಪ್ರಾಮಾಣಿಕತೆ, ವಿಧೇಯತೆ ಹಾಗೂ ಆಡಳಿತ ನಿಪುಣ ತೆಯಂತಹ ಗುಣಗಳು ಮೈಗೂಡುತ್ತವೆ ತಿಳಿಸಿದರು.

ಜಯಂತ್ಯುತ್ಸವವನ್ನು ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿ ಅನ್ನದಾನೇಶ್ವರನಾಥ ಸ್ವಾಮೀಜಿ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಕನ್ನಡ ಶಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸಿಂ.ಲಿಂ. ನಾಗರಾಜ್, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಕೆ. ಬೈರಲಿಂಗಯ್ಯ, ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ.ಸಿ. ರಾಜಣ್ಣ, ನಾರಾಯಣ ಆಸ್ಪತ್ರೆ ವೈದ್ಯ ಡಾ.ಎಸ್.ಎನ್. ಮಧುಸೂದನ್, ಉಪನ್ಯಾಸಕ ಅರುಣ್ ಕವಣಾಪುರ ಅವರನ್ನು ಸನ್ಮಾನಿಸಲಾಯಿತು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಗಾಣಕಲ್ ನಟರಾಜ್, ಹಿರಿಯ ಮುಖಂಡ ಎಸ್.ಟಿ. ಕಾಂತರಾಜ್ ಪಟೇಲ್, ಶಿಕ್ಷಕ ಸಂಜೀವೇಗೌಡ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಬಿ. ಚೇತನ್ ಕುಮಾರ್, ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ರವಿ, ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣದ ಜಿಲ್ಲಾ ಘಟಕದ ಅಧ್ಯಕ್ಷ ಶಿವುಗೌಡ, ಮುಖಂಡ ಡೇರಿ ವೆಂಕಟೇಶ್, ಸಾರಿಗೆ ಸಂಸ್ಥೆಯ ಆನಂದ್, ಗಾಯಕ ಬೇವೂರು ರಾಮಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT