ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡದಿ: ಮೂಲ ಸೌಕರ್ಯ ವಂಚಿತ ಕೆಂಚನಕುಪ್ಪೆ

ಕೆಟ್ಟು ನಿಂತ ಶುದ್ಧ ನೀರು ಪೂರೈಕೆ ಘಟಕ l ಸ್ಮಶಾನ ಜಾಗದ ಕೊರತೆ l ಗ್ರಾಮಸ್ಥರ ಪರದಾಟ
Last Updated 27 ಜುಲೈ 2022, 3:58 IST
ಅಕ್ಷರ ಗಾತ್ರ

ಬಿಡದಿ: ಪಟ್ಟಣಕ್ಕೆ ಅನತಿ ದೂರದಲ್ಲಿ ಇರುವ ಕೆಂಚನಕುಪ್ಪೆ ಗ್ರಾಮವು ಮೂಲ ಸೌಕರ್ಯದಿಂದವಂಚಿತ ಆಗಿದ್ದು, ಜನಪ್ರತಿನಿಧಿಗಳು ಇತ್ತ ಗಮನ ಹರಿಸಬೇಕಿದೆ.

ಸದ್ಯ ಬಿಡದಿ ಪುರಸಭೆಯ ವ್ಯಾಪ್ತಿಗೆ ಸೇರಿರುವ ಕೆಂಚನಕುಪ್ಪೆ ಗ್ರಾಮದಲ್ಲಿ 400 ಮನೆಗಳಿದ್ದು, 1,650 ಜನಸಂಖ್ಯೆ ಇದೆ. ಇವರಲ್ಲಿ ಅರ್ಧದಷ್ಟು ಮಂದಿ ವ್ಯವಸಾಯವನ್ನು ಅವಲಂಬಿಸಿದ್ದರೆ, ಶೇ 50ರಷ್ಟು ಕೂಲಿ ಕಾರ್ಮಿಕರು ನೆಲೆಸಿದ್ದಾರೆ. ಉದ್ಯೋಗ ಅರಸಿ ಹೊರ ಊರುಗಳಿಗೆ ಹೋಗುತ್ತಿದ್ದಾರೆ.

ಈ ಗ್ರಾಮವು ಬೆಂಗಳೂರಿನಿಂದ 28 ಕಿ.ಮೀ ದೂರದಲ್ಲಿದ್ದರೂ ಇಲ್ಲಿ ಯಾವುದೇ ಸೌಕರ್ಯ ಅಭಿವೃದ್ಧಿ ಆಗಿಲ್ಲ. ಈ ಗ್ರಾಮಕ್ಕೆ ಯಾವುದೇ ಸಾರಿಗೆ ವ್ಯವಸ್ಥೆ ಇಲ್ಲ. ಬಿಡದಿ ಪಟ್ಟಣದಿಂದ ಸುಮಾರು 2 ಕಿ.ಮೀ ದೂರದಲ್ಲಿದ್ದು, ಜನರು ಕಾಲ್ನಡಿಗೆಯಲ್ಲೇ ಪಟ್ಟಣಕ್ಕೆ ತೆರಳಿ ದೈನಂದಿನ ವ್ಯವಹಾರ ನಡೆಸುತ್ತ ಬಂದಿದ್ದಾರೆ. ವೃದ್ದರು ಮಕ್ಕಳು, ಮಹಿಳೆಯರಿಗೆ ಓಡಾಟಕ್ಕೆ ತೊಂದರೆ ಆಗಿದೆ.

ಈ ಹಿಂದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದ್ದ ಈ ಗ್ರಾಮವನ್ನು ಈಗ ಪುರಸಭೆ ವ್ಯಾಪ್ತಿಗೆ ತರಲಾಗಿದೆಯಾದರೂ ಇಲ್ಲಿನ ರಸ್ತೆಗಳು ಇನ್ನೂ ಡಾಂಬರ್, ಕಾಂಕ್ರೀಟ್ ದರ್ಶನ ಕಂಡಿಲ್ಲ. ಜನರ ಅಗತ್ಯಕ್ಕೆ ತಕ್ಕಂತೆ ಸೌಕರ್ಯಗಳ ವಿಸ್ತರಣೆ ಆಗುತ್ತಿಲ್ಲ.

ಕೆಟ್ಟು ನಿಂತ ನೀರಿನ ಘಟಕ: ಸಾವಿರಕ್ಕೂ ಹೆಚ್ಚು ಮಂದಿ ವಾಸವಿರುವ ಈ ಗ್ರಾಮದಲ್ಲಿ ಈ ಹಿಂದೆ ಶುದ್ಧ ನೀರು ಪೂರೈಕೆ ಘಟಕವನ್ನು ನಿರ್ಮಿಸಲಾಗಿತ್ತು. ಆದರೆ, ಕೆಲವು ದಿನ ಕಾರ್ಯ ನಿರ್ವಹಿಸಿ ಕೆಟ್ಟು ನಿಂತಿದೆ. ಹೀಗಾಗಿ, ಗ್ರಾಮಕ್ಕೆ ವ್ಯವಸ್ಥಿತವಾದ ಶುದ್ಧ ಕುಡಿಯುವ ನೀರಿನ ಘಟಕ ಸಹ ಇಲ್ಲ. ಜನರು ದೈನಂದಿನ ಬಳಕೆಗೆ ಪೂರೈಕೆ ಆಗುವ ನೀರನ್ನೇ ಕುಡಿಯಲು ಬಳಸುವಂತಹ ಪರಿಸ್ಥಿತಿ ಇದೆ.

ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ 50ಕ್ಕೂ ಹೆಚ್ಚು ಕುಟುಂಬಗಳು ಇಲ್ಲಿ ವಾಸವಿವೆ. ಆದರೆ ಸಮುದಾಯದ ಜನರಿಗೆ ಮಸಣಕ್ಕೆ ಜಾಗ ಇಲ್ಲ.

ಹೆಚ್ಚಿನವರಿಗೆ ಸ್ವಂತ ಸೂರು ಎಂಬುದು ಇಲ್ಲ. ಗ್ರಾಮದಲ್ಲಿ ನೈರ್ಮಲ್ಯ ಎಂಬುದು ಮರೀಚಿಕೆ ಆಗಿದೆ. ಹಿಂದುಳಿದವರೇ ಹೆಚ್ಚಿರುವ ಗ್ರಾಮದಲ್ಲಿ ಮೂಲ ಸೌಕರ್ಯಗಳ ವಿಸ್ತರಣೆ ಹಾಗೂ ಶುಚಿತ್ವಕ್ಕೆ ಆದ್ಯತೆ ಸಿಗಬೇಕಿದೆ. ಇಲ್ಲಿಯೇ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿದರೆ ಇಲ್ಲಿನ ಶ್ರಮಿಕ ವರ್ಗ ವಲಸೆ ಹೋಗುವುದು ತಪ್ಪಲಿದೆ ಎನ್ನುವುದು ಜನರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT