ಬುಧವಾರ, ಆಗಸ್ಟ್ 21, 2019
25 °C
ಜಿಲ್ಲೆಯ ರೈತರಿಗೆ ಎರಡು ಹಂತದಲ್ಲಿ ಹಣ ಬಿಡುಗಡೆ; ಈಗಲೂ ನೋಂದಣಿಗೆ ಅವಕಾಶ

ಕಿಸಾನ್ ಸಮ್ಮಾನ್‌: ₹3.19 ಕೋಟಿ ಪಾವತಿ

Published:
Updated:

ರಾಮನಗರ: ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯ ಅಡಿ ಜಿಲ್ಲೆಯ ರೈತರಿಗೆ ಮೊದಲ ಕಂತಿನಲ್ಲಿ ₹ 3.19 ಕೋಟಿ ಸಹಾಯಧನ ಪಾವತಿಯಾಗಿದೆ.

ಕಳೆದ ಲೋಕಸಭಾ ಚುನಾವಣೆಯೂ ಮುನ್ನ ಬಜೆಟ್‌ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಯೋಜನೆಯನ್ನು ಘೋಷಣೆ ಮಾಡಿದ್ದರು. ಕೃಷಿ ಭೂಮಿ ಹೊಂದಿರುವ ರೈತರ ಖಾತೆಗೆ ವರ್ಷಕ್ಕೆ ₹ 6 ಸಾವಿರ ಸಹಾಯಧನ ನೀಡುವುದಾಗಿ ಅವರು ಹೇಳಿದ್ದರು. ನಾಲ್ಕು ತಿಂಗಳಿಗೆ ಒಮ್ಮೆ ತಲಾ ₹ 2 ಸಾವಿರದಂತೆ ಮೂರು ಕಂತುಗಳಲ್ಲಿ ಈ ಸಹಾಯಧನ ಪಾವತಿ ಆಗಲಿದೆ.

ಲೋಕಸಭೆ ಚುನಾವಣೆಗೂ ಮುನ್ನ ಹಾಗೂ ನಂತರದಲ್ಲಿ ಕಿಸಾನ್‌ ಸಮ್ಮಾನ್‌ ಯೋಜನೆಗೆ ರೈತರ ನೋಂದಣಿ ನಡೆದಿತ್ತು. ಜಿಲ್ಲಾಡಳಿತವು ಕೃಷಿ ಸೇರಿದಂತೆ ವಿವಿಧ ಇಲಾಖೆಯ ಮೂಲಕ ಹೆಚ್ಚಿನ ಪ್ರಚಾರ ಕೈಗೊಂಡಿತ್ತು. ಪರಿಣಾಮವಾಗಿ ಸಾಕಷ್ಟು ಸಂಖ್ಯೆಯಲ್ಲಿ ರೈತರು ಈ ಯೋಜನೆಗೆ ನೋಂದಾಯಿಸಿಕೊಂಡಿದ್ದರು.

ಯೋಜನೆಯ ಆರಂಭದಲ್ಲಿ ನೋಂದಾಯಿಸಿಕೊಂಡ ರೈತರಿಗೆ ಕೇಂದ್ರ ಸರ್ಕಾರವು ಜುಲೈ 12ರ ಒಳಗೆ ಹಣ ವರ್ಗಾವಣೆ ಮಾಡಿದೆ. ಮೊದಲ ಹಂತದಲ್ಲಿ 9568 ರೈತರಿಗೆ ₹ 1,91,36,000 ಹಾಗೂ ಎರಡನೇ ಹಂತದಲ್ಲಿ 6381 ರೈತರಿಗೆ ₹ 1,27,62,000 ಸೇರಿ ಒಟ್ಟು ₹ 318.98 ಕೋಟಿ ಹಣ ಜಿಲ್ಲೆಯ ರೈತರ ಖಾತೆಗೆ ಸೇರಿರುವುದಾಗಿ ಕೇಂದ್ರ ಸರ್ಕಾರ ಕೃಷಿ ಇಲಾಖೆಗೆ ಮಾಹಿತಿ ನೀಡಿದೆ.

ಆರಂಭದಲ್ಲಿ ಸಣ್ಣ ಹಿಡುವಳಿದಾರರಿಗೆ ಸೀಮಿತವಾಗಿದ್ದ ಈ ಯೋಜನೆಯನ್ನು ನಂತರದಲ್ಲಿ ಸರ್ಕಾರ ಎಲ್ಲ ವರ್ಗಗಳ ಹಿಡುವಳಿದಾರರಿಗೂ ವಿಸ್ತರಿಸಿದೆ. ಈಗಲೂ ರೈತರು ಅರ್ಜಿ ಸಲ್ಲಿಸಬಹುದು. ಅರ್ಜಿ ಸ್ವೀಕೃತಗೊಂಡವರಿಗೆ ಉಳಿದ ಎರಡು ಕಂತಿನ ಹಣ ಸಿಗಲಿದೆ ಎನ್ನುತ್ತಾರೆ ಕೃಷಿ ಇಲಾಖೆಯ ಅಧಿಕಾರಿಗಳು.

ನೌಕರರು, ತೆರಿಗೆದಾರರು ಹೊರಕ್ಕೆ: ಸರ್ಕಾರಕ್ಕೆ ಆದಾಯ ತೆರಿಗೆ ಪಾವತಿಸುವ ಹಾಗೂ ಭೂ ಮಾಲೀಕತ್ವ ಹೊಂದಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನೌಕರರನ್ನು ಈ ಯೋಜನೆಯಿಂದ ಹೊರಗೆ ಇಡಲಾಗಿದೆ. ಹೀಗಾಗಿ ಸಾಕಷ್ಟು ಮಂದಿಗೆ ಇದರ ಪ್ರಯೋಜನ ಸಿಕ್ಕಿಲ್ಲ.

ಇನ್ನೂ ಸಾವಿರಾರು ಸಂಖ್ಯೆಯ ಖಾತೆದಾರರು ಅರ್ಜಿ ಸಲ್ಲಿಕೆಗೆ ಉತ್ಸಾಹ ತೋರಿಲ್ಲ. ಕೃಷಿ ಇಲಾಖೆಯಲ್ಲಿನ ಲಭ್ಯ ಮಾಹಿತಿಯ ಪ್ರಕಾರ 56 ಸಾವಿರಕ್ಕೂ ಹೆಚ್ಚು ಭೂ ಮಾಲೀಕರು ಇಂತಹ ಚಟುವಟಿಕೆಗಳಿಂದ ಹೊರಗೆ ಉಳಿದಿದ್ದಾರೆ. ಇವರಲ್ಲಿ ಕೆಲವರು ನಗರ ಪ್ರದೇಶಗಳಿಗೆ ವಲಸೆ ಹೋಗಿದ್ದು, ಸಂಪರ್ಕಕ್ಕೆ ಸಿಕ್ಕಿಲ್ಲ.

ಹೆಚ್ಚುವರಿಯಾಗಿ ಸಿಗುತ್ತಾ ₹ 4ಸಾವಿರ?

ಈಚೆಗಷ್ಟೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಿ.ಎಸ್. ಯಡಿಯೂರಪ್ಪ ಕೃಷಿ ಸಮ್ಮಾನ್‌ ಫಲಾನುಭವಿಗಳಿಗೆ ಕೇಂದ್ರದ ನೆರವಿನ ಜೊತೆಗೆ ರಾಜ್ಯ ಸರ್ಕಾರದಿಂದಲೂ ವರ್ಷಕ್ಕೆ ₹ 4ಸಾವಿರ ನೀಡುವುದಾಗಿ ಘೋಷಣೆ ಮಾಡಿದ್ದರು. ಸರ್ಕಾರ ಪೂರ್ಣ ಪ್ರಮಾಣದಲ್ಲಿ ಅಸ್ತಿತ್ವಕ್ಕೆ ಬಂದ ಬಳಿಕ ಈ ನಿರ್ಧಾರ ಕಾರ್ಯಗತಗೊಳ್ಳುವ ಸಾಧ್ಯತೆ ಇದೆ. ಹಾಗಾದಲ್ಲಿ ಈಗ ಇರುವ ಫಲಾನುಭವಿಗಳ ಖಾತೆಗೆ ಹೆಚ್ಚುವರಿ ಹಣ ಸಂದಾಯ ಆಗಲಿದೆ.

ಸ್ವ ನೋಂದಣಿಗೆ ಅವಕಾಶ

ಕಿಸಾನ್‌ ಸಮ್ಮಾನ್ ಯೋಜನೆಗೆ ಈವರೆಗೂ ನೋಂದಾಯಿಸಿಕೊಳ್ಳದ ರೈತರು ಆನ್‌ಲೈನ್‌ ಮೂಲಕ ತಾವೇ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಪಟ್ಟಣ ಪ್ರದೇಶಗಳಲ್ಲಿ ವಾಸವಿರುವ, ಕೃಷಿ ಜಮೀನು ಹೊಂದಿರುವವರೂ ಅರ್ಜಿ ಸಲ್ಲಿಸಬಹುದಾಗಿದೆ.
fruitspmk.karnataka.gov.in ವೆಬ್‌ಸೈಟ್‌ನಲ್ಲಿ ಸಾರ್ವಜನಿಕ ನೋಂದಣಿ ಆಯ್ಕೆ ಉಪಯೋಗಿಸಿಕೊಂಡು ರೈತರು ತಾವೇ ನೋಂದಣಿ ಮಾಡಿಕೊಳ್ಳಬಹುದು ಎನ್ನುತ್ತಾರೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಚ್‌.ರವಿ.

ಅಂಕಿ–ಅಂಶ
2.69 ಲಕ್ಷ–ಜಿಲ್ಲೆಯಲ್ಲಿನ ರೈತ ಕುಟುಂಬಗಳು
1,19,600–ಈವರೆಗೆ ಕಿಸಾನ್‌ ಸಮ್ಮಾನ್‌ ಯೋಜನೆಗೆ ನೋಂದಾಯಿಸಿಕೊಂಡವರು
56,583–ಪಟ್ಟಣಗಳಲ್ಲಿ ವಾಸವಿರುವ, ನೋಂದಾಯಿಸಿಕೊಳ್ಳದ ಖಾತೆದಾರರು
7657–ಜಮೀನು ಹೊಂದಿರುವ ಸರ್ಕಾರಿ ನೌಕರರು
3934–ಆದಾಯ ತೆರಿಗೆ ಪಾವತಿಸುವ ಭೂ ಮಾಲೀಕರು

* ಜಿಲ್ಲೆಯ ರೈತರಿಗೆ ಈವರೆಗೆ ₹ 3.19 ಕೋಟಿ ಹಣ ಬಿಡುಗಡೆ ಮಾಡಿರುವುದಾಗಿ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಆನ್‌ಲೈನ್‌ ಮೂಲಕ ಈಗಲೂ ನೋಂದಣಿಗೆ ಅವಕಾಶ ಇದೆ
ಕೆ.ಎಚ್‌. ರವಿ, ಜಂಟಿ ನಿರ್ದೇಶಕ, ಕೃಷಿ ಇಲಾಖೆ

Post Comments (+)