ಶುಕ್ರವಾರ, ಅಕ್ಟೋಬರ್ 30, 2020
27 °C
14 ಕಿ.ಮೀ. ಉದ್ದದ ಪಾದಯಾತ್ರೆ ಸಮಾರೋಪ: ಆಸಕ್ತರು ಭಾಗಿ

ಗೊಂಬೆ ಉದ್ಯಮ ಪ್ರೋತ್ಸಾಹಿಸಲು ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಚನ್ನಪಟ್ಟಣದ ಗೊಂಬೆ ಉದ್ಯಮದ ಉಳಿವು ಮತ್ತು ಸರ್ಕಾರದ ಪ್ರೋತ್ಸಾಹಕ್ಕೆ ಒತ್ತಾಯಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ನೇತೃತ್ವದಲ್ಲಿ ನಡೆದ ಎರಡು ದಿನಗಳ ಪಾದಯಾತ್ರೆಯು ಶುಕ್ರವಾರ ಇಲ್ಲಿನ ಜಿಲ್ಲಾ ಕಚೇರಿಗಳ ಸಂಕೀರ್ಣದ ಮುಂಭಾಗ ಸಮಾರೋಪಗೊಂಡಿತು.

ಪಾದಯಾತ್ರೆಯ ಎರಡನೇ ದಿನವಾದ ಶುಕ್ರವಾರ ಬೆಳಗ್ಗೆ ಕೆಂಗಲ್‌ನಿಂದ ಹೊರಟ ಪಾದಯಾತ್ರಿಗಳು ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಜಿಲ್ಲಾಧಿಕಾರಿ ಕಚೇರಿ ತಲುಪಿದರು. ಗೊಂಬೆ ತಯಾರಿಕೆ ಉದ್ಯಮಿಗಳು ಹಾಗೂ ಕರಕುಶಲ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರಿಗೆ ಮನವಿಪತ್ರ ಸಲ್ಲಿಸಿ ಸರ್ಕಾರದ ನೆರವಿಗೆ ಒತ್ತಾಯಿಸಲಾಯಿತು.

ಈ ಸಂದರ್ಭ ಕಕಜವೇ ರಾಜ್ಯ ಅಧ್ಯಕ್ಷ ರಮೇಶ್‌ ಗೌಡ ಮಾತನಾಡಿ "ಆಟಿಕೆ ತಯಾರಿಕಾ ಕ್ಲಸ್ಟರ್ ಸ್ಥಾಪನೆ ಚನ್ನಪಟ್ಟಣದಲ್ಲೂ ಆಗಬೇಕು. ಚೀನಾ ಆಟಿಕೆಗಳ ಮೇಲೆ ಅಧಿಕ ಸುಂಕ ವಿಧಿಸಬೇಕು. ನಮ್ಮೆಲ್ಲ ಬೇಡಿಕೆಗಳು ಈಡೇರದಿದ್ದರೆ ಬೆಂಗಳೂರು ವಿಧಾನಸೌಧ ಮತ್ತು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದರು ಎಚ್ಚರಿಸಿದರು.

'ಕೇಂದ್ರ ಸರ್ಕಾರ ತಕ್ಷಣ ಚೀನಾದ ಆಟಿಕೆಗಳಿಗೆ ನಿಷೇಧ ಹೇರಬೇಕು. ದೆಹಲಿ ಮತ್ತು ಮುಂಬೈಗೆ ಸೀಮಿತವಾಗಿರುವ ಅಂತರರಾಷ್ಟ್ರೀಯ ಕರಕುಶಲ ಪ್ರದರ್ಶನ ಮೈಸೂರು ಅಥವಾ ಬೆಂಗಳೂರಿನಲ್ಲಿ ನಡೆಯಬೇಕು. ಚನ್ನಪಟ್ಟಣದಲ್ಲಿ ಅಸ್ತಿತ್ವದಲ್ಲಿರುವ ಕ್ರಾಫ್ಟ್ ಪಾರ್ಕ್‍ನಲ್ಲಿ ಸ್ಥಳೀಯ ಕರಕುಶಲ ಕರ್ಮಿಗಳು ಉಪಯೋಗಿಸಿಕೊಳ್ಳಲು ಅವಕಾಶಗಳನ್ನು ಜಿಲ್ಲಾಡಳಿತ ಮತ್ತು ಸರ್ಕಾರ ಸೃಷ್ಟಿ ಮಾಡಬೇಕು’ ಎಂದು ಆಗ್ರಹಿಸಿದರು.

ಈ ಸಂದರ್ಭ ಗೊಂಬೆ ತಯಾರಕರು ಜಿಲ್ಲಾಧಿಕಾರಿ ಬಳಿ ತಮ್ಮ ಬೇಡಿಕೆಗಳನ್ನು ಇಟ್ಟರು. ಆಟಿಕೆಗಳ ಮಾರಾಟದ ಮೇಲೆ ವಿಧಿಸಿರುವ ಶೇ 12 ಜಿ.ಎಸ್.ಟಿಯನ್ನು ತೆಗೆದುಹಾಕಬೇಕು. ಆಟಿಕೆಗಳ ಮಾರಾಟಕ್ಕೆ ವಿಶ್ವ ದರ್ಜೆಯ ಮಾರಾಟ ಕೇಂದ್ರವನ್ನು ಸ್ಥಾಪಿಸಬೇಕು. ಕಾರ್ಮಿಕ ಇಲಾಖೆಯಿಂದ ವಿವಿಧ ಸವಲತ್ತು ಒದಗಿಸಬೇಕು. ಬಿಐಎಸ್ ನಿಯಮ ಅನ್ವಯಿಸುವಂತೆ ಕೇಂದ್ರ ತರಲು ಹೊರಟಿರುವ ತಿದ್ದುಪಡಿ ಕಾನೂನನ್ನು ಕೈಬಿಡಬೇಕು. ಆಲೆಮರ ಸಾಗಾಟಕ್ಕೆ ಮುಕ್ತ ಅವಕಾಶ ನೀಡಬೇಕು. ಕಾರ್ಖಾನೆಗಳ ವಿದ್ಯುತ್‌ ಬಿಲ್‌ ಕಟ್ಟಲು ಸಮಯ ಕೊಡಬೇಕು. ನಿರುದ್ಯೋಗಿ ಯುವಕರಿಗೆ ಗೊಂಬೆ ತಯಾರಿಕೆ ತರಬೇತಿ ನೀಡಬೇಕು ಎಂದು ಕೋರಿದರು.

ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಮಾತನಾಡಿ ಜಿಲ್ಲೆಯಲ್ಲಿ ಕಲಾ ಗ್ರಾಮ ನಿರ್ಮಿಸಲು ಸರ್ಕಾರ ಉದ್ದೇಶಿಸಿದ್ದು, ಜಾಗದ ಹುಡುಕಾಟದಲ್ಲಿದೆ. ಸದ್ಯದಲ್ಲೇ ಜಿಲ್ಲಾ ಉಸ್ತುವಾರಿ ಮಂತ್ರಿಗಳ ಸಮ್ಮುಖದಲ್ಲಿ ಸಭೆ ಕರೆದು ಈ ಬಗ್ಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.

ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಬೇವೂರು ಯೋಗೇಶ್‍ಗೌಡ, ಬೆಂಕಿ ಶ್ರೀಧರ್, ರಂಜಿತ್‍ಗೌಡ, ಎಂ.ಎಸ್.ನರಸಿಂಹ, ಮುಖಂಡರಾದ ಎನ್.ರಮೇಶ್, ಟಿ.ವೆಂಕಟೇಶ್, ಶ್ರೀನಿವಾಸ್, ಕುಮಾರ್‌, ದೇವರಮನಿ, ಎಲೆಕೇರಿ ಮಂಜುನಾಥ್, ವೆಂಕಟೇಶ್ ಶೇಟ್, ಬಾಬ್ ಜಾನ್, ವಿ.ಪ್ರಕಾಶ್ ನೀಲಸಂದ್ರ, ಸಯ್ಯದ್ ನಯಾಜ್ ಸೇರಿದಂತೆ ಹಲವರು ಪಾದಯಾತ್ರೆಯಲ್ಲಿ ಪಾಲ್ಗೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.