ಚನ್ನಪಟ್ಟಣ: ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಶುಕ್ರವಾರ ಬೆಳಿಗ್ಗೆ ನಗರದ ತಾಲ್ಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿ, ಅಲ್ಲಿನ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಮೈಸೂರಿಗೆ ತೆರಳುವ ಮಾರ್ಗಮಧ್ಯೆ ತಾಲ್ಲೂಕು ಕಚೇರಿಗೆ ಬಂದ ಸಚಿವರು, ಅಲ್ಲಿನ ಅವ್ಯವಸ್ಥೆ, ಕಸ ನೋಡಿ ಕುಪಿತಗೊಂಡರು. ತಾಲ್ಲೂಕು ಕಚೇರಿಯಲ್ಲಿ ಅದರಲ್ಲೂ ಕಂದಾಯ ವಿಭಾಗದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ, ಲಂಚಾವತಾರ ತಾಂಡವವಾಡುತ್ತಿದೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ದಿಢೀರ್ ಭೇಟಿ ಕೊಟ್ಟ ಸಚಿವರು, ಸಾರ್ವಜನಿಕರಿಂದ ದೂರುಗಳನ್ನು ಆಲಿಸಿದರು.
ಸ್ಥಳದಲ್ಲಿದ್ದ ಸಾರ್ವಜನಿಕರು ಇಲ್ಲಿ ಎಲ್ಲವೂ ಭ್ರಷ್ಟಾಚಾರದಿಂದ ಕೂಡಿದೆ. ಸಾರ್ವಜನಿಕರ ಕೆಲಸಕಾರ್ಯಗಳು ಸರಿಯಾಗಿ ಆಗುತ್ತಿಲ್ಲ. ವಿನಾಕಾರಣ ಅಲೆಸಲಾಗುತ್ತಿದೆ. ಜೊತೆಗೆ ಲಂಚ ನೀಡದಿದ್ದರೆ ಸಾರ್ವಜನಿಕರ ಕೆಲಸಕಾರ್ಯಗಳು ನಡೆಯುವುದಿಲ್ಲ ಎಂದು ಆರೋಪಿಸಿದರು. ಕೆಲವರು ಸಚಿವರ ಎದುರು ಕಣ್ಣೀರಿಟ್ಟರು.
ಇದರಿಂದ ಕೆಂಡಮಂಡಲವಾದ ಸಚಿವರು ಸ್ಥಳದಲ್ಲಿದ್ದ ರಾಮನಗರ ಉಪ ವಿಭಾಗಾಧಿಕಾರಿ ಬಿನೋಯ್, ತಹಶೀಲ್ದಾರ್ ನರಸಿಂಹಮೂರ್ತಿ ಹಾಗೂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸಾರ್ವಜನಿಕರ ಕೆಲಸಕಾರ್ಯಗಳಿಗೆ ತೊಂದರೆಯಾಗದಂತೆ ಎಚ್ಚರ ವಹಿಸಿ, ಇಲ್ಲವಾದರೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ನಂತರ ಕಚೇರಿಯಲ್ಲಿನ ಕಡತಗಳನ್ನು ಪರಿಶೀಲನೆ ನಡೆಸಿದರು. ಕಡತಗಳಲ್ಲಿಯ ವ್ಯತ್ಯಾಸ ಕಂಡು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಜೊತೆಗೆ ತಾಲ್ಲೂಕು ಕಚೇರಿ ಒಳಗೆ ಕೆಲವೆಡೆ ಕಸದ ರಾಶಿ ಇರುವುದನ್ನು ಕಂಡು ಸಿಟ್ಟಿಗೆದ್ದ ಸಚಿವರು, ಇದು ತಾಲ್ಲೂಕು ಕಚೇರಿನಾ ಅಥವಾ ಕಸದ ಕಚೇರಿನಾ ಎಂದು ಪ್ರಶ್ನಿಸಿದರು.
ಇದು ನಿಜಕ್ಕೂ ಬೇಸರ ತರಿಸಿದೆ. ನಮ್ಮ ಇಲಾಖೆಯಲ್ಲಿ ಈ ರೀತಿ ನಡೆಯುತ್ತಿರುವುದು ನೋವಿನ ವಿಚಾರ. ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಅವರು ಇದನ್ನು ಸರ್ಕಾರದ ಕೆಲಸ ಎಂದುಕೊಂಡಿಲ್ಲ. ಜನಪರ ಕಾಳಜಿ ಇಲ್ಲ. ಬೇಕಾಬಿಟ್ಟಿ ಕೆಲಸ ಮಾಡುತ್ತಿದ್ದಾರೆ. ಇದು ಸರಿಯಲ್ಲ. ಇದು ನನ್ನದೇ ತಪ್ಪು. ಈ ತಪ್ಪನ್ನು ಬೇರೆಯವರ ಮೇಲೆ ಹೊರಿಸುವುದಿಲ್ಲ. ಮುಂದಿನ ದಿನಗಳಲ್ಲಿ ಈ ಇದನ್ನು ಬಗೆಹರಿಸುತ್ತೇನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.