ಶುಕ್ರವಾರ, ಡಿಸೆಂಬರ್ 6, 2019
24 °C

ತೊಗರಿ ಬೆಳೆ ಕ್ಷೇತ್ರೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲ್ಯ (ಮಾಗಡಿ): ಕೀಟ ನಿರ್ವಹಣೆಗಾಗಿ ಮೋಹಕ ಬಲೆ ಇತ್ಯಾದಿ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲು ರೈತರು ಕೃಷಿ ವಿಜ್ಞಾನಿಗಳನ್ನ ಸಂಪರ್ಕಿಸಬೇಕು ಎಂದು ಬೇಸಾಯ ಶಾಸ್ತ್ರದ ವಿಜ್ಞಾನಿ ಡಾ.ದಿನೇಶ್‌ತಿಪಟೂರು ತಿಳಿಸಿದರು.

ತಾಲ್ಲೂಕಿನ ಕಾಳಾರಿ ಗ್ರಾಮದ ಮಂಜಮ್ಮ ಅವರ ತಾಕಿನಲ್ಲಿ ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಮಂಗಳವಾರ ನಡೆದ ತೊಗರಿ ಬೆಳೆಯ ನೂತನ ತಳಿ ಬಿ.ಆರ್.ಜಿ.-3ರ ಕ್ಷೇತ್ರೋತ್ಸವದಲ್ಲಿ ಅವರು ಮಾತನಾಡಿದರು.

ರೈತರು ಅಧಿಕ ಆದಾಯಕ್ಕಾಗಿ ತೊಗರಿ ಬೆಳೆಯಲ್ಲಿ ಅಂತರ ಬೆಳೆಯಾಗಿ ಅಲಸಂದೆ ಬೆಳೆಯುವ ತಂತ್ರಜ್ಞಾನವನ್ನು 2019–20ರ ಮುಂಗಾರು ಹಂಗಾಮಿನಲ್ಲಿ ಕಾಳಾರಿ ಗ್ರಾಮದ ಆಯ್ದ 10 ರೈತರ ತಾಕುಗಳಲ್ಲಿ ಕೈಗೊಳ್ಳಲಾಗಿತ್ತು. ಪ್ರಾತ್ಯಕ್ಷಿಕೆಯ ಅಂಗವಾಗಿ ತೊಗರಿ ಬೆಳೆಯ ನೂತನ ತಳಿ ಬಿ.ಆರ್.ಜಿ.-3 ರಲ್ಲಿ ಅಲಸಂದೆ ಬೆಳೆಯ ನೂತನ ತಳಿ ಕೆ.ಬಿ.ಸಿ.-9 ಅನ್ನು ಅಂತರ ಬೆಳೆಯಾಗಿ ಬೆಳೆದು ತೋರಿಸಲಾಯಿತು. ಬಿತ್ತನೆ ‘ಸಮಯದಲ್ಲಿ ಜೈವಿಕ ಗೊಬ್ಬರ ರೈಜೋಬಿಯಂನಿಂದ ಬೀಜೋಪಚಾರ, ಸಮಗ್ರ ಪೋಷಕಾಂಶ ನಿರ್ವಹಣೆ, ಲಘು ಪೋಷಕಾಂಶದ ಮಿಶ್ರಣ (ಪಲ್ಸ್ ಮ್ಯಾಜಿಕ್), ಬೆಳೆ ಚೆನ್ನಾಗಿ ಒಂದು ಕಟಾವಿಗೆ ಬಂದಿರುವ ಈ ಸಮಯದಲ್ಲಿ ಈ ತಂತ್ರಜ್ಞಾನ ಮತ್ತು ತಳಿಗಳನ್ನು ಇತರ ರೈತರಿಗೆ ಪರಿಚಯಿಸುವ ನಿಟ್ಟಿನಲ್ಲಿ ತಮ್ಮ ಜಮೀನಿನಲ್ಲಿ ತೊಗರಿ ಮತ್ತು  ಅಲಸಂದೆ ಅಂತರ ಬೆಳೆಯಾಗಿ ಬೆಳೆದು ಯಶಸ್ವಿಯಾಗಬಹುದು. ಬಿ.ಆರ್.ಜಿ.-3 ತಳಿಯು ಸೊರಗು ರೋಗ ಹಾಗೂ ಬಂಜೆ ರೋಗ ನಿರೋಧಕ ತಳಿಯಾಗಿದ್ದು, ಅಧಿಕ ಇಳುವರಿ ನೀಡುವ ಸಾಮರ್ಥ್ಯ ಹೊಂದಿದೆ’ ಎಂದರು.

ತೊಗರಿಯು ಆರಂಭಿಕ ಹಂತದಲ್ಲಿ ನಿಧಾನ ಬೆಳವಣಿಗೆ ಹೊಂದಿರುವುದರಿಂದ ಹೆಚ್ಚು ಕಳೆಗಳು ಬೆಳೆಯುವುದಕ್ಕೆ ಅವಕಾಶವಿದೆ. ಇದನ್ನು ತಡೆಯಲು 1 ಅಥವಾ 2 ಸಾಲು ಅಲಸಂದೆ ಬೆಳೆಯುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಿಸಿ ಅಧಿಕ ಆದಾಯ ಪಡೆಯಬಹುದು ಎಂದರು.

ವಿಜ್ಞಾನಿ ಡಾ.ರಾಜೇಂದ್ರ ಪ್ರಸಾದ್, ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥೆ ಡಾ.ಸವಿತಾ ಮಂಗಾನವರ, ಕೃಷಿ ಅಧಿಕಾರಿ ಅಶೋಕ್ ಕುಮಾರ್‌ ಇದ್ದರು.

 

ಪ್ರತಿಕ್ರಿಯಿಸಿ (+)