ರಾಮನಗರ: ‘ಕುಮಾರಸ್ವಾಮಿ ಅವರನ್ನು ಗೆಲ್ಲಿಸಿದರೂ, ಸೋಲಿಸಿದರೂ ಜನರನ್ನು ಅಯೋಗ್ಯರು ಎನ್ನುವುದು ಅವರ ಜಾಯಮಾನ. ಗೆದ್ದಾಗ ಜನ ಅವರ ಪಾಲಿಗೆ ದೇವರಾಗಿದ್ದರು. ಸೋತಾಗ ಗಿಫ್ಟ್ ಕಾರ್ಡ್ ಪಡೆದು ಮತ ಹಾಕಿದರು ಎಂದು ಹೇಳುತ್ತಿದ್ದಾರೆ. ಇದು ಮತದಾರರಿಗೆ ಮಾಡುವ ಅವಮಾನ’ ಎಂದು ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಕೆ. ಶೇಷಾದ್ರಿ ಶಶಿ ಆಕ್ರೋಶ ವ್ಯಕ್ತಪಡಿಸಿದರು.
‘ಕುಮಾರಸ್ವಾಮಿ ಅವರು ಹೇಳುವಂತೆ ಗಿಫ್ಟ್ ಕಾರ್ಡ್‌ಗಾಗಿ ಮತ ಹಾಕುವ ಮುಟ್ಟಾಳರು ಯಾರೂ ಇಲ್ಲ. ಅಧಿಕಾರದಲ್ಲಿದ್ದಾಗ ತೋರಿದ ದರ್ಪ ಮತ್ತು ಕುಟುಂಬ ರಾಜಕಾರಣವೇ ಅವರ ಇಂದಿನ ಪರಿಸ್ಥಿತಿಗೆ ಕಾರಣ’ ಎಂದು ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
‘ಸೋಲಿನಿಂದ ಹತಾಶರಾಗಿರುವ ಅವರು, ಗೆದ್ದವರ ವಿರುದ್ಧ ಪುಂಖಾನುಪುಂಖವಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ತಾವು ಸತ್ಯ ಹರಿಶ್ಚಂದ್ರ ಅಂದುಕೊಂಡಿದ್ದಾರೆ. ಅವರು ಮುಖ್ಯಮಂತ್ರಿಯಾಗಿದ್ದಾಗ ನಡೆಯುತ್ತಿದ್ದ ವರ್ಗಾವಣೆ ದಂಧೆ ಬಗ್ಗೆ ಎಲ್ಲರಿಗೂ ಗೊತ್ತಿದೆ. ಹೊಸ ಸರ್ಕಾರ ಅಧಿಕಾರಕ್ಕೆ ಬಂದಾಗ ವರ್ಗಾವಣೆ ಸಹಜ ಪ್ರಕ್ರಿಯೆ ಎಂಬ ಸಾಮಾನ್ಯ ಜ್ಞಾನವೂ ಇವರಿಗಿಲ್ಲ. ಆದರೂ, ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.
‘ಡಿ.ಕೆ ಸಹೋದರರು ಅಕ್ರಮವಾಗಿ ಆಸ್ತಿ ಮಾಡಿದ್ದಾರೆ ಎಂದು ಆರೋಪಿಸುವ ಅವರು, ಅದಕ್ಕೆ ದಾಖಲೆ ಕೊಡಲಿ. ಇವರ ಮೇಲೂ ಅಕ್ರಮ ಆಸ್ತಿ ಆರೋಪವಿದೆ. ಆ ಕುರಿತು ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್. ಹಿರೇಮಠ ಸುದ್ದಿಗೋಷ್ಠಿ ನಡೆಸಿದ್ದರು’ ಎಂದರು.
ಮತ ತರುವ ಮುಖಗಳಿಲ್ಲ: ‘ಜೆಡಿಎಸ್‌ನ ಪೋಸ್ಟರ್‌ಗಳಲ್ಲಿ ಮತ ತರುವ ಒಂದೇ ಒಂದು ಮುಖಗಳಿಲ್ಲ. ಕುಟುಂಬದ ಎಚ್.ಡಿ. ರೇವಣ್ಣ, ಅನಿತಾ ಕುಮಾರಸ್ವಾಮಿ, ಭವಾನಿ ರೇವಣ್ಣ, ಪ್ರಜ್ಞಲ್, ನಿಖಿಲ್ ಹಾಗೂ ಹೆಸರಿಲ್ಲದ ಒಂದೆರಡು ಮುಖಗಳನ್ನು ಬಿಟ್ಟರೆ ಬೇರಾರು ಇಲ್ಲ. ಅಧಿಕಾರದ ದರ್ಪ ಮತ್ತು ಕುಟುಂಬ ರಾಜಕಾರಣವೇ ಜೆಡಿಎಸ್ ಹೀನಾಯ ಸ್ಥಿತಿಗೆ ಕಾರಣ’ ಎಂದು ಹೇಳಿದರು.
ಕೆಎಂಎಫ್ ಮಾಜಿ ಅಧ್ಯಕ್ಷ ಪಿ. ನಾಗರಾಜು, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ, ಮುಖಂಡರಾದ ಜಗದೀಶ್, ಆಯಿಷಾ ಬಾನು, ಮುತ್ತರಾಜು, ಸಮದ್, ಪ್ರಸನ್ನ ಮುಂತಾದವರಿದ್ದರು.
ದಲಿತರು ಹಿಂದುಳಿದ ವರ್ಗದವರು ಹಾಗೂ ಅಲ್ಪಸಂಖ್ಯಾತರನ್ನು ಕುಮಾರಸ್ವಾಮಿ ಮರೆತಿದ್ದಾರೆ. ಸಿ.ಎಂ ಆಗಿದ್ದಾಗ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ. ಇನ್ನಾದರೂ ಸೋಲಿನ ಅವಲೋಕನ ಮಾಡಿಕೊಳ್ಳಲಿ.– ಕೆ. ಶೇಷಾದ್ರಿ ಶಶಿ ನಗರಸಭೆ ಸದಸ್ಯ
‘ಆಲೂಗಡ್ಡೆ ಬೆಳೆದು ಸಂಪಾದಿಸಿದ್ದಾರೆಯೇ?’ ‘ಬಂಡೆ ಹೊಡೆಯುತ್ತಿದ್ದವರು ಎಂದು ಡಿ.ಕೆ ಸಹೋದರರ ಬಗ್ಗೆ ಟೀಕಿಸುವ ಕುಮಾರಸ್ವಾಮಿ ಅವರು ಮಹಾರಾಜರ ಹೊಟ್ಟೆಯಲ್ಲಿ ಹುಟ್ಟಿದ್ದಾರಾ? ಅವರು ವ್ಯಾಪಾರ- ವಹಿವಾಟು ಮಾಡಿ ಆಸ್ತಿ ಸಂಪಾದಿಸಿರುವುದಾಗಿ ಹೇಳಿಕೊಂಡಿದ್ದಾರೆ. ಎಚ್‌ಡಿಕೆ ಕುಟುಂಬಕ್ಕೆ ನೂರಾರು ಕೋಟಿ ಆಸ್ತಿ ಎಲ್ಲಿಂದ ಬತ್ತು. ಅವರೇನು ಆಲೂಗಡ್ಡೆ ಮತ್ತು ಬದನೆಯಕಾಯಿ ಬೆಳೆದು ಸಂಪಾದಿಸಿದ್ದಾರೆಯೇ? ಕುಮಾರಸ್ವಾಮಿ ಅವರಷ್ಟು ಹೊಲಸು ರಾಜಕೀಯ ಮತ್ತು ಸ್ವಜನ ಪಕ್ಷಪಾತ ಮಾಡಿದವರು ಯಾರೂ ಇಲ್ಲ. ಅವರ ದರ್ಪ ಸಹಿಸದೆ ಹಲವರು ಪಕ್ಷ ತೊರೆದರು. ಕಾಂಗ್ರೆಸ್‌ನಿಂದಾಗಿ ದೇವೇಗೌಡರು ಪ್ರಧಾನಮಂತ್ರಿಯಾದರು. ಇವರು ಮುಖ್ಯಮಂತ್ರಿಯಾದರು. ಈಗ ನಮ್ಮ ಪಕ್ಷ ಸರಿ ಕಾಣದಿರುವುದರಿಂದ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅದಕ್ಕಾಗಿಯೇ ಜನ ನಿಮ್ಮ ನಾಟಕವನ್ನು ಬಂದ್ ಮಾಡಿದ್ದಾರೆ’ ಎಂದು ಮಾಜಿ ಶಾಸಕ ಕೆ. ರಾಜು ವ್ಯಂಗ್ಯವಾಡಿದರು. ‘ಸಂಸದರನ್ನು ಹೊಗಳಿದ್ದನ್ನು ಮರೆತಿದ್ದಾರೆ’ ‘ಹಿಂದಿನ ಚುನಾವಣೆಯಲ್ಲಿ ಸುರೇಶ್ ಅವರಂತಹ ಸಂಸದ ದೇಶದಲ್ಲೇ ಇಲ್ಲ ಎಂದು ತಾವು ಹೊಗಳಿದ್ದನ್ನು ಕುಮಾರಸ್ವಾಮಿ ಅವರು ಮರೆತಿದ್ದಾರೆ. ದೇಶದಲ್ಲಿ ಮೊದಲ ಬಾರಿಗೆ ಶುದ್ಧ ಕುಡಿಯುವ ನೀರಿನ ಘಟಕದ ಪ್ರಯೋಗ ಮಾಡಿ ಯಶಸ್ವಿಯಾಗಿದ್ದು ಡಿ.ಕೆ. ಸುರೇಶ್ ಇಲ್ಲಿನ ನೀರಿನ ಬವಣೆ ನೀಗಿಸಿದರು. ಕುಮಾರಸ್ವಾಮಿ ಸಂಸದರಾಗಿದ್ದಾಗ ಒಂದೇ ಒಂದು ಕೆಡಿಪಿ ಸಭೆ ದಿಶಾ ಸಭೆ ತೆಗೆದುಕೊಳ್ಳಲಿಲ್ಲ. ಸುರೇಶ್ ಅವರು ಒಂದು ಸಭೆಗೂ ತಪ್ಪದೆ ಹಾಜರಾಗಿ ಜಿಲ್ಲೆಯ ಪ್ರಗತಿ ಪರಿಶೀಲನೆ ನಡೆಸುತ್ತಿದ್ದಾರೆ’ ಎಂದು ಕೆ. ಶೇಷಾದ್ರಿ ಶಶಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.