ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಶಾನಕ್ಕೆ 20 ಗುಂಟೆ ಜಾಗ ನೀಡಿದ ಮಹಿಳೆ

Last Updated 27 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಚನ್ನಪಟ್ಟಣ: ಮಹಿಳೆಯೊಬ್ಬರು ಲಕ್ಷಾಂತರ ರೂಪಾಯಿ ಬೆಲೆಬಾಳುವ ತಮ್ಮ ಜಮೀನನ್ನು ಗ್ರಾಮದ ಸ್ಮಶಾನಕ್ಕೆ ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.

ತಾಲ್ಲೂಕಿನ ಮಸಿಗೌಡನದೊಡ್ಡಿ ಗ್ರಾಮದ ಲೇಟ್ ಬೈರಪ್ಪರವರ ಪತ್ನಿ ಗಿರಿಯಮ್ಮ ದಾನ ಮಾಡಿದವರು. ನೀಲಕಂಠನಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಂತಿರುವ ಸುಮಾರು ₹50 ಲಕ್ಷಕ್ಕೂ ಹೆಚ್ಚು ಮೌಲ್ಯದ ತಮ್ಮ 20 ಗುಂಟೆ ಭೂಮಿಯನ್ನು ಗ್ರಾಮದ ಸ್ಮಶಾನಕ್ಕೆ ದಾನ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ.
ಗ್ರಾಮದಲ್ಲಿ ಉಪ್ಪಾರ, ದಲಿತ ಸಮುದಾಯ ಸೇರಿದಂತೆ ಇತರ ಜನಾಂಗ ವಾಸಮಾಡುತ್ತಿದ್ದು, ಸುಮಾರು ನೂರು ಮನೆಗಳಿವೆ. ಸುಮಾರು 400ಕ್ಕೂ ಹೆಚ್ಚು ಮಂದಿ ವಾಸವಿದ್ದಾರೆ. ಗ್ರಾಮದಲ್ಲಿ ಅದರಲ್ಲೂ ಉಪ್ಪಾರ ಸಮುದಾಯದಲ್ಲಿ ಯಾರಾದರೂ ಮೃತಪಟ್ಟರೆ ಸಂಸ್ಕಾರ ಮಾಡಲು ಜಾಗವಿಲ್ಲದೆ ಪರದಾಡುವ ಪರಿಸ್ಥಿತಿ ಇತ್ತು. ಇದನ್ನು ಗಮನಿಸಿದ ಸ್ವತಃ ಉಪ್ಪಾರ ಜನಾಂಗದ ಗಿರಿಯಮ್ಮ ಅವರು ಭೂಮಿ ದಾನ ಮಾಡಿ ಗ್ರಾಮಕ್ಕೆ ಆಸರೆಯಾಗಿದ್ದಾರೆ.

ಗ್ರಾಮದಲ್ಲಿ ಯಾರಾದರೂ ಮೃತಪಟ್ಟರೆ ಗ್ರಾಮದ ತುಸು ದೂರದ ದಾಸಪ್ಪನಕಟ್ಟೆಯ ಬಳಿಯ ಖಾಸಗಿ ಜಮೀನೊಂದರಲ್ಲಿ ಮಾಲೀಕರ ಅಪ್ಪಣೆ ಪಡೆದು ಇರುವ ಸ್ವಲ್ಪ ಜಾಗದಲ್ಲಿಯೇ ಶವ ಸಂಸ್ಕಾರ ಮಾಡುತ್ತಿದ್ದರು. ಒಂದು ಶವಸಂಸ್ಕಾರ ಮಾಡಿದ ಜಾಗದಲ್ಲಿಯೇ ಮತ್ತೊಂದು ಶವವನ್ನು, ಮಗದೊಂದು ಶವವನ್ನು ಅದೊಂದೆ ಸ್ಥಳದಲ್ಲಿ ಸಂಸ್ಕಾರ ಮಾಡುವ ಪರಿಸ್ಥಿತಿ ಇತ್ತು. ಇದನ್ನು ಗಮನಿಸಿ ಗಿರಿಯಮ್ಮ ಈ ಭೂಮಿ ದಾನ ಮಾಡಿ ಗ್ರಾಮಸ್ಥರು ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.

ಕನಕಪುರದ ಹಾರೋಹಳ್ಳಿಯಲ್ಲಿ ತಮ್ಮ ಮಕ್ಕಳ ಜೊತೆ ವಾಸವಾಗಿರುವ ಇವರು ತನ್ನ ಮೈದುನ ಮಸಿಗೌಡನದೊಡ್ಡಿಯ ಸಿದ್ದಪ್ಪ ಅವರ ಮಾರ್ಗದರ್ಶದಲ್ಲಿ ತನ್ನ ಮಕ್ಕಳಾದ ಬಿ.ಈಶ್ವರಯ್ಯ, ಬಿ.ನಾಗೇಶ್, ಬಿ.ಶಿವಕುಮಾರ್ ಅವರ ಪೂರ್ಣ ಸಹಕಾರದಲ್ಲಿ ಪಟ್ಟಣದ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಸ್ಮಶಾನಕ್ಕೆ ತಮ್ಮ ಭೂಮಿಯನ್ನು ದಾನ ಮಾಡಿ, ಸಂಬಂಧಿಸಿದ ಪತ್ರಗಳನ್ನು ತಹಶೀಲ್ದಾರ್ ಸುದರ್ಶನ್ ಅವರಿಗೆ ಗುರುವಾರ ಹಸ್ತಾಂತರ ಮಾಡಿದರು.

ನೀಲಕಂಠನಹಳ್ಳಿ ಬಳಿ ಒಂದು ಗುಂಟೆ ಜಮೀನಿನ ಬೆಲೆ ₹ 3 ಲಕ್ಷ ಇದೆ. ಸ್ವಂತಕ್ಕಾಗಿ ಬೇರೆಯವರ ಭೂಮಿಯನ್ನು ಕಬಳಿಸಲು ಹುನ್ನಾರ ನಡೆಸುವ ಹಾಗೂ ಕೊಲೆ ಮಾಡಲು ಹಿಂಜರಿಯದ ಈ ದಿನಗಳಲ್ಲಿ ಈ ರೀತಿಯ ಪರೋಪಕಾರ ಗುಣವುಳ್ಳ ಗಿರಿಯಮ್ಮ ಅವರ ಈ ಕಾರ್ಯವನ್ನು ಗ್ರಾಮಸ್ಥರು ಶ್ಲಾಘಿಸಿದ್ದಾರೆ.

‘ಗ್ರಾಮಸ್ಥರ ಸ್ಮಶಾನದ ಸಮಸ್ಯೆಯನ್ನು ಹಲವಾರು ದಿಮಗಳಿಂದ ಗಮನಿಸಿದ್ದೆ. ಅವರಿಗೆ ಭೂಮಿ ದಾನ ಮಾಡುವ ಬಗ್ಗೆ ಯೋಚಿಸಿದ್ದೆ. ನಾವೇನು ಶ್ರೀಮಂತರಲ್ಲ. ಆದರೆ ಇರುವುದರಲ್ಲೆ ಸಂತಸ ಪಡುವ ಸ್ವಭಾವ ನಮ್ಮದು. ಗ್ರಾಮಸ್ಥರು ಮೃತದೇಹ ಹೊತ್ತುಕೊಂಡು ಬೇರೆಯವರ ಭೂಮಿಯಲ್ಲಿ ಜಾಗ ಕೇಳಿ ಪರದಾಡುವುದನ್ನು ನೋಡಿ ಭೂಮಿ ನೀಡಿದ್ದೇನೆ. ನನ್ನನ್ನು ದಾನಿ ಎಂದು ಕರೆಯಬೇಡಿ’ ಎನ್ನುತ್ತಾರೆ ಗಿರಿಯಮ್ಮ.

‘ಈ ಜಾಗವನ್ನು ಗ್ರಾಮದಲ್ಲಿ ವಾಸಿಸುವ ಎಲ್ಲ ಜನಾಂಗದವರು ಬಳಸಿಕೊಳ್ಳಬಹುದು. ಅಕ್ಕಪಕ್ಕದ ಗ್ರಾಮದವರು ಬಳಸಿಕೊಳ್ಳಬಹುದು. ಯಾವುದೇ ಜಾತಿ ಭೇದ ಇಲ್ಲದೆ ಜಾಗ ಸದ್ಬಳಕೆಯಾದರೆ ನಮಗೆ ಅಷ್ಟೆ ತೃಪ್ತಿ’ ಎಂದು ಅವರು ತಿಳಿಸುತ್ತಾರೆ.

ಗಿರಿಯಮ್ಮ ಅವರು ಗ್ರಾಮದ ಜನರ ಪರಿಸ್ಥಿತಿಯನ್ನು ಅರಿತು ಸ್ಮಶಾನಕ್ಕೆ ಭೂಮಿ ನೀಡಿ ಔದಾರ್ಯ ಮೆರೆದಿದ್ದಾರೆ. ಅವರ ಕುಟುಂಬಕ್ಕೆ ಗ್ರಾಮಸ್ಥರ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಮಸೀಗೌಡನದೊಡ್ಡಿ ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಿವಾಸ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT