ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ಕಟ್ಟಡ ದುರಸ್ತಿಗೆ ₹ 6 ಕೋಟಿ ಮಂಜೂರು

ಗುಂಪುಗಾರಿಕೆ ಒಳ್ಳೆಯದಲ್ಲ: ಶಿಕ್ಷಕರಿಗೆ ಶಾಸಕ ಎ. ಮಂಜುನಾಥ್‌ ಕಿವಿಮಾತು
Last Updated 14 ಜನವರಿ 2022, 7:35 IST
ಅಕ್ಷರ ಗಾತ್ರ

ಮಾಗಡಿ: ತಾಲ್ಲೂಕಿನಲ್ಲಿ ಶಿಥಿಲವಾಗಿರುವ ಸರ್ಕಾರಿ ಶಾಲಾ ಕಟ್ಟಡಗಳ ದುರಸ್ತಿಗೆ ಸರ್ಕಾರ ₹ 6 ಕೋಟಿ ಮಂಜೂರು ಮಾಡಿದೆ ಎಂದು ಎ. ಮಂಜುನಾಥ್‌ ತಿಳಿಸಿದರು.

ಪಟ್ಟಣದ ಅಂಬೇಡ್ಕರ್‌ ಭವನದಲ್ಲಿ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮತ್ತು ಒಕ್ಕಲಿಗರ ನೌಕರರ ಕ್ಷೇಮಾಭಿವೃದ್ಧಿ ವೇದಿಕೆಯಿಂದ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಮತ್ತು ಶಿಕ್ಷಕ ರತ್ನ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಗುರುಭವನ ನಿರ್ಮಾಣಕ್ಕೆ ಸರ್ಕಾರ ಕಡಿಮೆ ಅನುದಾನ ನೀಡುತ್ತಿದೆ. ₹ 25 ಲಕ್ಷ ಅನುದಾನ ನೀಡಬೇಕು ಎಂದು ಕೆಲವು ವಿಧಾನ ಪರಿಷತ್ ಸದಸ್ಯರಿಗೆ ಪತ್ರ ಬರೆದು ಮನವಿ ಮಾಡಿದ್ದೇನೆ. ನೂತನ ಬಿಇಒ ಕಚೇರಿ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದರು.

‘ಕೊರತೆಯಿರುವ ಶಿಕ್ಷಕರ ಹುದ್ದೆಗಳನ್ನು ತುಂಬಲು ಸರ್ಕಾರದ ಮೇಲೆ ಒತ್ತಡ ಹಾಕಿದ್ದು ಶಿಕ್ಷಕರ ಹುದ್ದೆ ತುಂಬುವ ಭರವಸೆಯನ್ನು ಶಿಕ್ಷಣ ಸಚಿವರು ನೀಡಿದ್ದಾರೆ. ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಉತ್ತಮ ಶಿಕ್ಷಣ ನೀಡಬೇಕು ಎಂಬುದು ನನ್ನ ಉದ್ದೇಶ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಕೊರತೆಯಿರುವ ಶಿಕ್ಷಕರ ಹುದ್ದೆಗಳಿಗೆ ಬಿ.ಇಡಿ ಮಾಡಿರುವವರನ್ನು ನೇಮಕ ಮಾಡಿಕೊಂಡು ಅವರಿಗೆ ಸಿಎಸ್‌ಆರ್‌ನಲ್ಲಿ ವೇತನ ನೀಡುವ ಬಗ್ಗೆ ಜಿ.ಪಂ ಸಿಇಒ ಅವರ ಜೊತೆ ಮಾತನಾಡಿದ್ದೇನೆ’ ಎಂದು ತಿಳಿಸಿದರು.

‘ಶಿಕ್ಷಕರು ಮಕ್ಕಳಿಗೆ ಕಲಿಸುವ ಕಾಯಕವನ್ನು ನಿಷ್ಠೆಯಿಂದ ಮಾಡಬೇಕು. ಶಿಕ್ಷಕರಲ್ಲಿ ಗುಂಪುಗಾರಿಕೆ ಸರಿಯಲ್ಲ. ನಾನು ಯಾವ ಗುಂಪಿಗೂ ಸೇರಿದವನಲ್ಲ. ಎಲ್ಲಾ ಶಿಕ್ಷಕರು ಒಂದೇ ಎನ್ನುವ ಭಾವನೆ ನನ್ನಲ್ಲಿದೆ’ ಎಂದು ಹೇಳಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀಲ್ ಮಾತನಾಡಿ, ಗುರುಭವನ ನಿರ್ಮಾಣಕ್ಕೆ ಶಿಕ್ಷಕರ ಕಲ್ಯಾಣ ನಿಧಿಯಿಂದ ₹ 50 ಲಕ್ಷ ನೀಡಲಾಗುವುದು. ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ಉತ್ತಮ ಕೆಲಸ ಎಂದು ಹೇಳಿದರು.

ಮುಖ್ಯಶಿಕ್ಷಕರು, ಹಿಂದಿ ಶಿಕ್ಷಕರು ಮತ್ತು ಪದವೀಧರ ಶಿಕ್ಷಕರ ಸಮಸ್ಯೆ ಬಗೆಹರಿಸಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಸಂಘದಿಂದ ಹೋರಾಟ ನಡೆಸಲಾಗುವುದು ಎಂದರು.

ಪುರಸಭೆ ಅಧ್ಯಕ್ಷೆ ವಿಜಯಲಕ್ಷ್ಮೀ ಜಿ. ರೂಪೇಶ್‌, ಸ್ಥಾಯಿಸಮಿತಿ ಅಧ್ಯಕ್ಷ ಕೆ.ಕೆ. ಕಾಂತರಾಜು, ಸದಸ್ಯರಾದ ಭಾಗ್ಯಮ್ಮ, ಅಶ್ವತ್ಥ್, ಅನಿಲ್‌ ಕುಮಾರ್‌, ನೇತೇನಹಳ್ಳಿ ಗ್ರಾ.ಪಂ. ಅಧ್ಯಕ್ಷ ಪುರುಷೋತ್ತಮ್, ತಾಲ್ಲೂಕು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಶೋಕ್, ಬಿಇಒ ಯತಿಕುಮಾರ್, ಸಂಘದ ಜಿಲ್ಲಾ ಅಧ್ಯಕ್ಷ ರಮೇಶ್, ತಾಲ್ಲೂಕು ದೈಹಿಕ ಶಿಕ್ಷಣ ಅಧಿಕಾರಿ ಸಿ.ಬಿ ಅಶೋಕ್, ಶಿಕ್ಷಕರಾದ ಕೆಂಪೇಗೌಡ, ಕೆ.ಎಚ್. ಲೋಕೇಶ್, ನರಸಿಂಹಯ್ಯ, ಹೂಜಗಲ್ ನಾಗರಾಜು, ಪತ್ತೀಗೌಡ, ಬಿ.ಎನ್. ಜಯರಾಮ್, ಮಲ್ಲಿಕಾರ್ಜುನಸ್ವಾಮಿ, ಡಿ.ಜಿ. ಗಂಗಾಧರ್, ಗುಣಶೇಖರ್, ಕೆ.ಪಿ. ರಂಗಸ್ವಾಮಿ, ಮುದುಗಿರಿ ಗೌಡ, ಮಲ್ಲೂರು ಲೋಕೇಶ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT