ಸೋಮವಾರ, ಅಕ್ಟೋಬರ್ 21, 2019
23 °C

ಕಾನೂನು ಅರಿವು ಕಾರ್ಯಾಗಾರ

Published:
Updated:
Prajavani

ಉಯ್ಯಂಬಳ್ಳಿ (ಕನಕಪುರ): ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿ ವ್ಯಾಪ್ತಿಯ ಉಯ್ಯಂಬಳ್ಳಿ, ನಲ್ಲಹಳ್ಳಿ, ದೊಡ್ಡ ಆಲಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಶಾಲಾ ಮಕ್ಕಳು, ಸಾರ್ವಜನಿಕರು, ಸರ್ಕಾರಿ ಇಲಾಖೆಗಳ ಸಹಭಾಗಿತ್ವದಲ್ಲಿ ತಾಲ್ಲೂಕು ಕಾನೂನು ಸೇವಾ ಪ್ರಾಧಿಕಾರದ ನೇತೃತ್ವದಲ್ಲಿ ಕಾನೂನು ಅರಿವು ಕಾರ್ಯಾಗಾರ ಶುಕ್ರವಾರ ನಡೆಯಿತು.

ನ್ಯಾಯಾಧೀಶರಾದ ನರಹರಿ, ಸಂತೋಷಕುಮಾರ್‌ ಕಾರ್ಯಕ್ರಮದಲ್ಲಿ ಮಾತನಾಡಿ, ‘ಜನಸಾಮಾನ್ಯರಿಗೆ ಕಾನೂನಿನ ಅರಿವು ಬಹಳ ಮುಖ್ಯ. ಕಾನೂನಿನ ಬಗ್ಗೆ ತಿಳಿದುಕೊಂಡಾಗ ಕಾನೂನಿನ ಪಾಲನೆ ಸುಲಭವಾಗುತ್ತದೆ. ಕಾನೂನು ಉಲ್ಲಂಘನೆಯನ್ನು ಮತ್ತು ತಪ್ಪುಗಳನ್ನು ಪ್ರಾರಂಭದಲ್ಲಿ ತಪ್ಪಿಸಬಹುದಾಗಿದೆ ಎಂದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಟಿ.ಎಸ್.ಶಿವರಾಮ್‌ ಮಾತನಾಡಿ, ‘ಯಾರೇ ಎಷ್ಟೇ ಪ್ರಭಾವಶಾಲಿಗಳಾದರೂ ಕಾನೂನು ಬಿಟ್ಟು ಬದುಕಲು ಆಗುವುದಿಲ್ಲ. ತಪ್ಪು ಮಾಡಿದವರಿಗೆ ಕಾನೂನಿನಡಿ ಶಿಕ್ಷೆ ಆಗಲಿದೆ. ಆ ಕಾರಣದಿಂದ ನಮ್ಮ ದೇಶದಲ್ಲಿ 130 ಕೋಟಿ ಜನಸಂಖ್ಯೆಯಿದ್ದರೂ ನಮ್ಮ ದೇಶದ ಕಾನೂನು ಬಲಿಷ್ಠವಾಗಿರುವುದರಿಂದ ಎಲ್ಲಾ ಜನರು ನೆಮ್ಮದಿಯಾಗಿ ಸುಖ ಶಾಂತಿ ಜೀವನ ನಡೆಸಲು ಸಾಧ್ಯವಾಗಿದೆ’ ಎಂದರು.

ಕಾನೂನು ಇರುವುದು ನಮ್ಮ ರಕ್ಷಣೆಗೆ ಎಂಬುದನ್ನು ಯಾರು ಮರೆಯಬಾರದು. ಅದಕ್ಕಾಗಿ ಕಾನೂನಿನ ಬಗ್ಗೆ ತಿಳಿಸಿಕೊಡಲು ನ್ಯಾಯಾಧೀಶರು, ವಕೀಲರು ಇಲ್ಲಿಗೆ ಬಂದು ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ನೀವೆಲ್ಲಾ ಕಾನೂನು ಬಗ್ಗೆ ತಿಳಿದುಕೊಂಡು ತಪ್ಪು ಮಾಡದೆ ಉತ್ತಮ ಜೀವನ ನಡೆಸಬೇಕೆಂದು ಹೇಳಿದರು.

ವಕೀಲರಾದ ಕಾಮೇಶ್‌ ಮತ್ತು ಸುರೇಶ್‌ ಆಸ್ತಿ ಹಕ್ಕುಗಳ ಬಗ್ಗೆ ತಿಳಿಸಿಕೊಟ್ಟರು. ಸರ್ಕಾರಿ ಅಭಿಯೋಜಕ ನಾರಾಯಣಸ್ವಾಮಿ, ವಕೀಲರಾದ ದೇವದಾಸ್‌, ಜೆ.ಮಹದೇವಯ್ಯ, ಗೋಪಾಲಕೃಷ್ಣ, ಹರೀಶ್‌, ಯೋಗೀಶ್‌.ಪಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.

Post Comments (+)