ಶುಕ್ರವಾರ, ನವೆಂಬರ್ 15, 2019
22 °C
ಮಿನಿ ವಿಧಾನಸೌಧ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವ

ದಿನವೂ ಕನ್ನಡ ಭಾಷೆ ನಿತ್ಯೋತ್ಸವವಾಗಲಿ

Published:
Updated:
Prajavani

ಕನಕಪುರ: ನಗರ ‍ಪ್ರದೇಶದ ಜನರು ಕನ್ನಡಭಾಷೆ ಬಳಕೆ ತಮಗೆ ಅಪಮಾನ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಮನೆ ಮಂದಿಯಲ್ಲಾ ಇಂಗ್ಲಿಷ್‌ ಮಾತನಾಡುತ್ತಾ ಕನ್ನಡ ಭಾಷೆ ನಿರ್ಲಕ್ಷ್ಯಿಸುತ್ತಿದ್ದಾರೆ ಎಂದು ತಹಶೀಲ್ದಾರ್‌ ಎಂ.ಆನಂದಯ್ಯ ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ಮಿನಿ ವಿಧಾನಸೌಧ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಶುಕ್ರವಾರ ನಡೆದ 64ನೇ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿದರು.

ಕನ್ನಡ ಭಾಷೆಗೆ 2ಸಾವಿರ ವರ್ಷಗಳ ಇತಿಹಾಸ ಇದೆ. ಇಂತಹ ಭಾಷೆ ಬಗ್ಗೆ ಕೀಳರಿಮೆ ಬೇಡ. ಕನ್ನಡ ಭಾಷೆ ಬಗ್ಗೆ ಹೆಮ್ಮೆ ಇರಬೇಕು ಎಂದರು.

ಆಂಗ್ಲಭಾಷೆ ಬೇಡವೆಂದು ಹೇಳುತ್ತಿಲ್ಲ. ಅದು ವ್ಯವಹಾರಿಕವಾಗಿ ಇರಲಿ. ಭಾಷೆ ಬೆಳೆವಣಿಗೆಗೆ ಎಲ್ಲರೂ ಶ್ರಮಿಸಬೇಕಾಗಿದೆ. ಕನ್ನಡ ರಾಜ್ಯೋತ್ಸವ ನವೆಂಬರ್‌ ತಿಂಗಳಿಗೆ ಸೀಮಿತಗೊಳಿಸದೆ ವರ್ಷದ 365 ದಿನವೂ ಕನ್ನಡ ಭಾಷೆ ನಿತ್ಯೋತ್ಸವವಾಗಲಿ. ಕನ್ನಡ ಭಾಷೆಯಲ್ಲಿ ಚರ್ಚಾಸ್ಪರ್ಧೆ, ಪ್ರಬಂಧ ನಿರಂತವಾಗಿ ಆಯೋಜಿಸಿ ಭಾಷೆ ಶ್ರೀಮಂತಗೊಳಿಸಬೇಕಾಗಿದೆ ಎಂದು ಹೇಳಿದರು.

ಸ್ವತಂತ್ರ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್‌.ಭಾಸ್ಕರ್‌ ಮಾತನಾಡಿ, ಅನ್ಯಭಾಷೆಯಿಂದ ಕನ್ನಡ ಭಾಷೆ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ ಎಂದರು.

ಕನ್ನಡಭಾಷೆ ಮೇಲೆ ನಡೆಯುವ ಪರಕೀಯರ ದೌರ್ಜನ್ಯದಲ್ಲಿ ಕನ್ನಡಿಗರ ಪಾತ್ರವೂ ಇದೆ. ಭಾಷೆ ಗೊತ್ತಿಲ್ಲದೆ ಬೇರೆ ಕಡೆಯಿಂದ ಬರುವ ಅನ್ಯಭಾಷಿಕರಿಗೆ ಭಾಷೆ ಸ್ಪಷ್ಟತೆ ಕಲಿಸಿಕೊಡುವ ಬದಲು ನಾವೇ ಅವರ ಭಾಷೆಗೆ ಹೊಂದಿಕೊಳ್ಳುತ್ತಿರುವುದು ದುರಂತ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಕನ್ನಡ ಭಾಷೆಯಲ್ಲಿ ವ್ಯವಹರಿಸಬೇಕೆಂದು ಸರ್ಕಾರ ಆಡಳಿತ ಭಾಷೆಯನ್ನಾಗಿ ಮಾಡಿದೆ. ಆದರೆ, ಬ್ಯಾಂಕ್‌ ಸೇರಿದಂತೆ ಕಂಪನಿಗಳಲ್ಲಿ ಕನ್ನಡದಲ್ಲಿ ವ್ಯವಹಾರ ನಡೆಯುತ್ತಿಲ್ಲ. ಈ ತಿಂಗಳಿನಿಂದಲೇ ಎಲ್ಲಾ ಬ್ಯಾಂಕ್‌ಗಳಲ್ಲಿ ನಾಮಫಲಕದಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕೆಂದು ಒತ್ತಾಯಿಸಿದರು.

ಆಹಾರ ಇಲಾಖೆ ಶಿರಸ್ತೇದಾರ್‌ ಪ್ರಕಾಶ್‌ ಮಾತನಾಡಿ, ಸ್ವಾತಂತ್ರ‍್ಯ ನಂತರದಲ್ಲಿ ಭಾಷವಾರು ಪ್ರಾಂತ್ಯಗಳನ್ನು ಒಗ್ಗೂಡಿಸುವ ಕೆಲಸವಾಗಿ ಕನ್ನಡ ಭಾಷಿಕರು ಇರುವ ಪ್ರಾಂತ್ಯ ಸೇರಿ ಮೈಸೂರು ರಾಜ್ಯ ಉದಯವಾಯಿತು. ನಂತರದಲ್ಲಿ ದೇವರಾಜ ಅರಸು ಮುಖ್ಯಮಂತ್ರಿ ಆಗಿದ್ದಾಗ ಮೈಸೂರು ರಾಜ್ಯ ಕರ್ನಾಟಕ ರಾಜ್ಯವಾಯಿತು ಎಂದು ತಿಳಿಸಿದರು.

ಶಿಕ್ಷಣ ಇಲಾಖೆ ಡಿ.ಎಸ್‌.ಸತೀಶ್‌, ತೋಟಗಾರಿಕೆ ಇಲಾಖೆ ಹರೀಶ್‌, ಕೃಷಿ ಇಲಾಖೆ ರಾಧಾಕೃಷ್ಣ, ಪಶುಪಾಲನಾ ಇಲಾಖೆ ಡಾ.ಯು.ಸಿ ಕುಮಾರ್‌, ತಾಲ್ಲೂಕು ಕಚೇರಿ ಶಿರಸ್ತೇದಾರ್‌ ರಘು, ಚುನಾವಣಾ ಶಿರಸ್ತೇದಾರ್‌ ಸುನಿಲ್‌ಕುಮಾರ್‌, ಲೋಕೋಪಯೋಗಿ ಇಲಾಖೆಯ ನಿರಂಜನ, ಕಂದಾಯ ಇಲಾಖೆಯ ಜಗದೀಶ್‌, ಚಂದ್ರೇಗೌಡ, ಚೇತನ್‌, ಕನ್ನಡಸೇನೆ ಅಧ್ಯಕ್ಷ ಜಯಸಿಂಹ, ಕನ್ನಡ ಜಾನಪದ ಪರಿಷತ್‌ನ  ಎಂ.ಚಂದ್ರ, ಕನ್ನಡಾಂಬೆ ಸಾಂಸ್ಕೃತಿಕ ಸಾಮಾಜಿಕ ಟ್ರಸ್ಟ್‌ ಅಧ್ಯಕ್ಷ ಅಸ್ಗರ್‌ಖಾನ್‌ ಇದ್ದರು.

ಪ್ರತಿಕ್ರಿಯಿಸಿ (+)