ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಚಟುವಟಿಕೆಗೆ ಮತ್ತೆ ಜೀವ

ಜಿಲ್ಲೆಯಾದ್ಯಂತ ಇಂದಿನಿಂದ ಲಾಡ್‌ಡೌನ್ ಸಡಿಲ; ಜನರ ಓಡಾಟಕ್ಕೆ ಅನುಕೂಲ
Last Updated 4 ಮೇ 2020, 10:33 IST
ಅಕ್ಷರ ಗಾತ್ರ

ರಾಮನಗರ: ಸರಿಸುಮಾರು ಒಂದೂವರೆ ತಿಂಗಳ ತರುವಾಯ ರಾಮನಗರದಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಮರು ಜೀವ ದೊರೆಯತ್ತಿದ್ದು, ಅಂಗಡಿ ಮುಂಗಟ್ಟುಗಳು ಬಹುತೇಕ ತೆರೆದಿರಲಿವೆ. ಜಿಲ್ಲೆಯೊಳಗೆ ಬಸ್ ಸಂಚಾರ ಸಹ ಆರಂಭಗೊಳ್ಳುವ ಸಾಧ್ಯತೆ ಇದೆ.

ಇದೇ 17ರವರೆಗೆ ಲಾಕ್‌ಡೌನ್‌ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶಿಸಿದೆಯಾದರೂ ಕೊರೊನಾ ಹಸಿರು ವಲಯದಲ್ಲಿ ಇರುವ ಜಿಲ್ಲೆಗಳಲ್ಲಿ ಆರ್ಥಿಕ ಚಟುವಟಿಕೆಗಳ ಪುನರಾರಂಭಕ್ಕೆ ಅವಕಾಶ ನೀಡಿದೆ. ಹೀಗಾಗಿ ಅಂಗಡಿ ಮುಂಗಟ್ಟು, ಸರ್ಕಾರಿ ಕಚೇರಿಗಳು ಬಾಗಿಲು ತೆರೆಯಲಿವೆ. ಬ್ಯಾಂಕ್‌ಗಳೂ ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಸ್ವಂತ ವಾಹನಗಳಲ್ಲಿ ಜನರ ಓಡಾಟಕ್ಕೆ ಅನುಮತಿಯೂ ಸಿಗಲಿದೆ.

ಬಫರ್ ಝೋನ್‌ ಬದಲು: ಹಸಿರು ವಲಯದ ಪ್ರದೇಶಗಳಲ್ಲಿ ಲಾಕ್‌ಡೌನ್‌ ಸಡಿಲಿಸಿ ರಾಜ್ಯ ಸರ್ಕಾರ ಏಪ್ರಿಲ್ 28ರಂದು ಆದೇಶ ಹೊರಡಿಸಿತ್ತು. ಜಿಲ್ಲೆಯಲ್ಲಿ ಉಳಿದ ಮೂರು ತಾಲ್ಲೂಕುಗಳಲ್ಲಿ ಈ ಸಡಿಲಿಕೆ ಜಾರಿಯಾಗಿದ್ದರೂ ರಾಮನಗರ ನಗರಸಭೆ ವ್ಯಾಪ್ತಿಯಲ್ಲಿ ಮಾತ್ರ ಇದಕ್ಕೆ ಅನುಮತಿ ಸಿಕ್ಕಿರಲಿಲ್ಲ. ಪಾದರಾಯನಪುರ ಗಲಭೆ ಆರೋಪಿಗಳನ್ನು ರಾಮನಗರ ಜೈಲಿಗೆ ಸ್ಥಳಾಂತರಿಸಿದ್ದು, ಅವರ ಪೈಕಿ ಐವರಲ್ಲಿ ಕೋವಿಡ್‌-19 ಸೋಂಕು ಕಾಣಿಸಿಕೊಂಡಿತ್ತು. ಹೀಗಾಗಿ ರಾಮನಗರ ಜೈಲು ಸುತ್ತಲಿನ 100 ಮೀಟರ್‌ ಪ್ರದೇಶವನ್ನು ಕಂಟೈನ್‌ಮೆಂಟ್‌ ಎಂದೂ ಹಾಗೂ ಸುತ್ತಲಿನ ಐದು ಕಿ.ಮೀ. ಪ್ರದೇಶವನ್ನು ಬಫರ್‌ ಝೋನ್ ಎಂದು ಘೋಷಣೆ ಮಾಡಿತ್ತು. ಹೀಗಾಗಿ ರಾಮನಗರ ಪಟ್ಟಣದಲ್ಲಿ ನಿರ್ಬಂಧ ಮುಂದುವರಿದಿತ್ತು.

ಇದೀಗ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಬಫ‌ರ್ ವಲಯ ಆದೇಶ ಹಿಂಪಡೆದಿದ್ದು, ಇಲ್ಲಿಯೂ ಆರ್ಥಿಕ ಚಟುವಟಿಕೆಗೆ ಅವಕಾಶ ನೀಡಿದ್ದಾರೆ. ಹೀಗಾಗಿ ನಗರಸಭೆ ವ್ಯಾಪ್ತಿಯಲ್ಲಿನ ಅಂಗಡಿ-ಮುಂಗಟ್ಟುಗಳೂ ಬಾಗಿಲು ತೆರೆಯಬಹುದಾಗಿದೆ. ಕಂಟೈನ್‌ಮೆಂಟ್ ವಲಯದಲ್ಲಿ ಮಾತ್ರ ನಿಷೇಧಾಜ್ಞೆ ಮುಂದುವರಿಯಲಿದೆ.

ಯಾವುದಕ್ಕೆ ಅವಕಾಶ: ನಗರಸಭೆ ಹಾಗೂ ಪುರಸಭೆಗಳ ವ್ಯಾಪ್ತಿಯಲ್ಲಿ ಸ್ವತಂತ್ರವಾಗಿ ಇರುವ ಅಂಗಡಿಗಳು, ವಸತಿ ಸಮುಚ್ಚಯಗಳಲ್ಲಿ ಇರುವ ಅಂಗಡಿಗಳು ತೆರೆಯಬಹುದಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರ ಇದೇ ಏ.28ರಂದು ಆದೇಶಿಸಿರುವಂತೆ ಅಂತರ ಕಾಯ್ದುಕೊಂಡು ವಹಿವಾಟು ನಡೆಸಲು ಅವಕಾಶ ಕಲ್ಪಿಸಲಾಗಿದೆ.

ಪುರಸಭೆ ಹಾಗೂ ನಗರಸಭೆಗಳ ವ್ಯಾಪ್ತಿಯಲ್ಲಿ ಮಾಲ್‌ ಹಾಗೂ ಬೃಹತ್‌ ವಾಣಿಜ್ಯ ಸಂಕೀರ್ಣಗಳನ್ನು ಹೊರತುಪಡಿಸಿ ಉಳಿದ ಕಡೆ ಇರುವ ಮಳಿಗೆಗಳು ತಮ್ಮ ವಹಿವಾಟು ನಡೆಸಬಹುದಾಗಿದೆ. ಜನರಲ್‌ ಸ್ಟೋರ್‌ಗಳು, ಹಾರ್ಡ್‌‌ವೇರ್ ಅಂಗಡಿಗಳು, ಗ್ಯಾರೇಜ್‌, ಕೃಷಿ ಪರಿಕರಗಳ ಮಾರಾಟ, ಬಟ್ಟೆ, ಎಲೆಕ್ಟ್ರಾನಿಕ್ ಪರಿಕರಗಳ ಮಾರಾಟ, ಪಾತ್ರೆ ಮಾರಾಟದ ಅಂಗಡಿಗಳು, ತರಕಾರಿ ಮಳಿಗೆಗಳೂ ಸೇರಿದಂತೆ ನಾನಾ ಬಗೆಯ ವ್ಯಾಪಾರಕ್ಕೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕೊಂಚ ಹೆಚ್ಚುವರಿ ವಿನಾಯಿತಿ ದೊರೆತಿದೆ. ಅಲ್ಲಿ ವಾಣಿಜ್ಯ ಸಂಕೀರ್ಣಗಳಲ್ಲಿನ ಅಂಗಡಿಗಳೂ ತೆರೆಯಬಹುದಾಗಿದೆ. ಹೋಟೆಲ್‌ಗಳ ಆರಂಭಕ್ಕೆ ಸರ್ಕಾರ ಅನುಮತಿ ನೀಡಿದೆಯಾದರೂ ಪಾರ್ಸಲ್ ಸೇವೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಬೇಕರಿಗಳು ಬಾಗಿಲು ತೆರೆಯಬಹುದಾಗಿದೆ. ಕ್ಷೌರದಂಗಡಿಗಳ ಆರಂಭಕ್ಕೂ ಅನುಮತಿ ದೊರೆತಿದೆ.

ಅಂತರ ಪಾಲನೆ ಕಡ್ಡಾಯ: ಸದ್ಯ ಅನುಮತಿ ನೀಡಲಾಗಿರುವ ಪ್ರದೇಶಗಳಲ್ಲಿ ವಹಿವಾಟು ಆರಂಭಿಸುವ ವರ್ತಕರು ಹಾಗೂ ಗ್ರಾಹಕರು ಪರಸ್ಪರ ದೈಹಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಅಂಗಡಿಗಳ ಮಾಲೀಕರು ತಮ್ಮಲ್ಲಿನ ಒಟ್ಟು ಸಿಬ್ಬಂದಿಯ ಪೈಕಿ ಶೇ 50ರಷ್ಟು ಜನರನ್ನು ಮಾತ್ರ ಬಳಸಿಕೊಳ್ಳಬೇಕು. ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್‌ ಬಳಸಬೇಕು. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಗುಂಪಾಗಿ ಸೇರುವಂತೆ ಇಲ್ಲ ಎಂದು ನಿರ್ಬಂಧ ವಿಧಿಸಲಾಗಿದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬೇಕರಿಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದೆಯಾದರೂ ಅಲ್ಲಿ ಆಹಾರ ತಯಾರಿಸುವಂತೆ ಇಲ್ಲ. ಕಂಪನಿಗಳಿಂದ ಪ್ಯಾಕಿಂಗ್‌ ರೂಪದಲ್ಲಿ ಬರುವ ವಸ್ತುಗಳನ್ನು ಮಾತ್ರ ಮಾರಾಟ ಮಾಡಬಹುದಾಗಿದೆ.

ಯಾವುದೆಲ್ಲ ಬಂದ್: ದೊಡ್ಡದಾದ ವಾಣಿಜ್ಯ ಸಂಕೀರ್ಣಗಳು, ಚಿತ್ರಮಂದಿರ ಸಹಿತ ಸಾರ್ವಜನಿಕರು ಗುಂಪಾಗಿ ಸೇರುವ ಎಲ್ಲ ಪ್ರದೇಶಗಳಲ್ಲಿ ವಹಿವಾಟಿಗೆ ಸರ್ಕಾರ ನಿರ್ಬಂಧ ವಿಧಿಸಿದೆ. ಇದಲ್ಲದೆ ಆಟೊ, ಖಾಸಗಿ ಬಸ್‌, ಟ್ಯಾಕ್ಸಿ ಸೇರಿದಂತೆ ಸಮೂಹ ಸಾರಿಗೆ ವ್ಯವಸ್ಥೆ ಮೇಲಿನ ನಿರ್ಬಂಧ ಮುಂದುವರಿಯುವ ಸಾಧ್ಯತೆ ಇದೆ. ಜನರು ಸ್ವಂತ ವಾಹನಗಳಲ್ಲೇ ಓಡಾಡುವುದು ಅನಿವಾರ್ಯ ಆಗಲಿದೆ.

ಜನರು ಅವಶ್ಯಕ ಸಾಮಗ್ರಿಗಳ ಖರೀದಿಗೆ ಮಾತ್ರ ಹೊರಬರಬೇಕು. ಕುಟುಂಬದವರು ಗುಂಪಾಗಿ ಓಡಾಡುವಂತೆ ಇಲ್ಲ. ಬೈಕ್‌ನಲ್ಲಿ ಒಬ್ಬರು ಹಾಗೂ ಕಾರ್‌ನಲ್ಲಿ ಚಾಲಕ ಸೇರಿ ಮೂವರು ಮಾತ್ರ ಪ್ರಯಾಣಿಸಲು ಅವಕಾಶ ಇದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುವಂತೆ ಇಲ್ಲ ಎನ್ನುತ್ತಾರೆ ಪೊಲೀಸರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT