ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ

Last Updated 31 ಡಿಸೆಂಬರ್ 2019, 12:41 IST
ಅಕ್ಷರ ಗಾತ್ರ

ರಾಮನಗರ: ಸಮಾಜದಲ್ಲಿ ಸಾಮಾಜಿಕ ಸಮಾನತೆಯನ್ನು ತರಲು ಸಾಹಿತಿಗಳು ಹಾಗೂ ಪತ್ರಕರ್ತರು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು ಎಂದು ಸಾಹಿತಿ ಸು.ತ. ರಾಮೇಗೌಡ ಹೇಳಿದರು.

ಇಲ್ಲಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಂಗಳವಾರ ಆಯೋಜಿಸಿದ್ದ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾಹಿತಿಗಳು, ಪತ್ರಕರ್ತರು ಸಾಮಾಜಿಕ ಜವಾಬ್ದಾರಿಯಿಂದ ಕಾರ್ಯನಿರ್ವಹಿಸದಿದ್ದರೆ ಸಮಾಜದ ವ್ಯವಸ್ಥೆ ಹದಗೆಡುತ್ತದೆ. ಉದಾತ್ತ ಚಿಂತನೆ, ಗುರಿ, ಜೀವನ ಶೈಲಿ ಹಾಗೂ ಹೊಸ ಬೆಳಕನ್ನು ತೋರಿಸುವ ನಿಸ್ವಾರ್ಥ ವಿಚಾರಧಾರೆಗಳನ್ನು ಒಳಗೊಂಡ ಸಾಹಿತ್ಯ ರಚನೆಯಲ್ಲಿ ಈ ವರ್ಗ ತೊಡಗಿಸಿಕೊಳ್ಳಬೇಕು ಎಂದರು.

‘ವಿದ್ಯಾರ್ಥಿ ದೆಸೆಯಲ್ಲಿ ಬರವಣಿಗೆಯಲ್ಲಿ ತೊಡಿಗಿಸಿಕೊಂಡಿದ್ದ ನಾನು ಹಲವು ಸಾಹಿತ್ಯ ಕೃತಿಗಳನ್ನು ರಚಿಸಿದ್ದೇನೆ. ಸಾಹಿತ್ಯದ ಗೀಳು ಪತ್ರಿಕೋದ್ಯಮಕ್ಕೆ ಬರುವಂತೆ ಮಾಡಿತು. ಬಿಎಸ್ಸಿ ಪದವಿ ಮುಗಿದ ನಂತರ 1976ರಲ್ಲಿ 'ಬಯಲು ಸೀಮೆ' ವಾರ ಪತ್ರಿಕೆಯನ್ನು ಪ್ರಾರಂಭಿಸಿದೆ. ನಂತರ ರೈತ ಮುಖಂಡ ಎನ್.ಡಿ. ಸುಂದರೇಶ್ ಅವರ ಮಾರ್ಗದರ್ಶನದಂತೆ 1983ರಲ್ಲಿ ವಾರ ಪತ್ರಿಕೆಯನ್ನು ದಿನಪತ್ರಿಕೆಯನ್ನಾಗಿ ರೂಪಿಸಿದೆ. ರೈತ ಸಂಘದ ಒಡನಾಟದಿಂದ ರೈತ ಚಳವಳಿಗಳಲ್ಲೂ ಸಕ್ರಿಯವಾಗಿ ಪಾಲ್ಗೊಂಡೆ’ ಎಂದು ತಿಳಿಸಿದರು.

‘ಬರವಣಿಗೆಯ ಮೂಲಕ 45 ವರ್ಷಗಳಿಂದ ಸಮಾಜದ ಓರೆಕೋರೆಗಳನ್ನು ತಿದ್ದುತ್ತಿದ್ದೇನೆ. 1980ರಲ್ಲಿ ರಾಜ್ಯ ರೈತ ಸಂಘದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಂಚಾಲಕರಾಗಿ, ಪ್ರೊ.ಎಂ.ಡಿ. ನಂಜುಂಡಸ್ವಾಮಿ, ಎಚ್.ಎಚ್. ರುದ್ರಪ್ಪ, ಎನ್.ಡಿ. ಸುಂದರೇಶ್ ಅವರ ಜತೆಯಲ್ಲಿ ರೈತಪರ ಹೋರಾಟದಲ್ಲಿ ಪಾಲ್ಗೊಂಡು ಜೈಲವಾಸ ಅನುಭವಿಸಿದೆ’ ಎಂದು ತಿಳಿಸಿದರು.

ಅಸಮಾನತೆ, ಭ್ರಷ್ಟಾಚಾರವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ರೈತ ಸಂಘದ ನೇತೃತ್ವದಲ್ಲಿ ವಿಧಾನಸಭೆಗೂ ಸ್ಪರ್ಧಿಸಿದೆ. ಆದರೆ ಫಲಪ್ರದವಾಗಲಿಲ್ಲ. ಎಲ್ಲರೂ ಸರಳ ಜೀವನವನ್ನು ಅಳವಡಿಸಿಕೊಳ್ಳಬೇಕು. ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ಶ್ರಮಿಸಬೇಕು ಎಂದು ತಿಳಿಸಿದರು.

ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ರಾಜ್ಯ ಘಟಕದ ಅಧ್ಯಕ್ಷ ಎಲ್ಲೇಗೌಡ ಬೆಸಗರಹಳ್ಳಿ ಮಾತನಾಡಿ, ಸು.ತ. ರಾಮೇಗೌಡರು ಕನ್ನಡ ಸಾಹಿತ್ಯ ಪರಿಷತ್‌ ಸೇರಿದಂತೆ ಹಲವು ಸಂಘಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. ಹಲವು ಕೃತಿಗಳನ್ನು ರಚಿಸಿದ್ದಾರೆ. ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು ಎಂದು ತಿಳಿಸಿದರು.

ಜನಪದ ವಿದ್ವಾಂಸ ಡಾ. ಕುರುವ ಬಸವರಾಜ್, ಪತ್ರಕರ್ತ ದೊಡ್ಡಬಾಣಗೆರೆ ಮಾರಣ್ಣ, ಸಾಹಿತಿ ಯೋಗೇಶ್ ಚಕ್ಕೆರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಸ್. ಶಂಕರಪ್ಪ, ಸಂಗೀತ ವಿದ್ವಾನ್ ಶಿವಾಜಿ ರಾವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT