ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ 2.0: ವಲಸೆ ಕುಟುಂಬಗಳ ರಕ್ಷಣೆಗೆ ಬೇಕು ಬದ್ಧತೆ

ಶಾಸಕ ಎ.ಮಂಜುನಾಥ್ ಹೇಳಿಕೆ l ವಿವಿಧ ಇಲಾಖೆಯ ಅಧಿಕಾರಿಗಳ ಸಭೆ
Last Updated 15 ಏಪ್ರಿಲ್ 2020, 15:11 IST
ಅಕ್ಷರ ಗಾತ್ರ

ಬಿಡದಿ: ಪುರಸಭೆ ವ್ಯಾಪ್ತಿಯಲ್ಲಿ ಮೂರು ಸಾವಿರಕ್ಕೂ ಹೆಚ್ಚು ವಲಸೆ ಕುಟುಂಬಗಳಿದ್ದು, ಲಾಕ್‌ಡೌನ್ ವಿಸ್ತರಣೆ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತ ಮತ್ತು ಜನಪ್ರತಿನಿಧಿಗಳು ಈ ಕುಟುಂಬಗಳ ಹಿತರಕ್ಷಣೆ ಮಾಡುವಲ್ಲಿ ಬದ್ಧತೆ ತೋರಬೇಕಿದೆ ಎಂದು ಶಾಸಕ ಎ.ಮಂಜುನಾಥ್ ಹೇಳಿದರು.

ಪುರಸಭೆಯಲ್ಲಿ ಬುಧವಾರ ನಡೆದ ಪುರಸಭಾ ಸದಸ್ಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಕೈಗೊಂಡಿರುವ ತುರ್ತು ಕ್ರಮಗಳ ಪ್ರಗತಿ ಬಗ್ಗೆ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ಕೊರೊಬಾ ವೈರಸ್‌ ಇಡೀ ವಿಶ್ವಕ್ಕೆ ಸಂಕಷ್ಟ ತಂದಿದೆ. ಪಕ್ಷ ಭೇದ, ಜಾತಿ ಮತ ಇನ್ನಿತರೆ ತಾರತಮ್ಯಗಳನ್ನು ಬದಿಗಿಟ್ಟು ಸೋಂಕು ತಡೆಗಟ್ಟುವ ಹಾಗೂ ಜನ ಜೀವನವನ್ನು ಸಹಜ ಸ್ಥಿತಿಗೆ ತರಲು ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ. ಬಿಡದಿ ಕೈಗಾರಿಕಾ ಪ್ರದೇಶವಾದ್ದರಿಂದ ಕೂಲಿ ಕಾರ್ಮಿಕರು ಹಾಗೂ ನಾನಾ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು, ರಾಜ್ಯ ಹಾಗೂ ದೇಶದ ಬೇರೆ ಬೇರೆ ಪ್ರದೇಶಗಳಿಂದ ಬಂದು ಇಲ್ಲಿನ ನೆಲೆಸಿದ್ದಾರೆ. ಲಾಕ್‌ಡೌನ್‌ ಸಂದರ್ಭದಲ್ಲಿ ತಮ್ಮ ಊರುಗಳಿಗೆ ತೆರಳದ ಸ್ಥಿತಿಯಲ್ಲಿ ವಲಸಿಗರು ಇದ್ದಾರೆ. ಹೀಗಾಗಿ, ಇಂತಹ ಕುಟುಂಬಗಳ ರಕ್ಷಣೆಗಾಗಿ ಈಗಾಗಲೇ ಬಿಡದಿ ಕೈಗಾರಿಕೆಗಳ ಸಂಘ, ಕಿರು ಕೈಗಾರಿಕೆಗಳು, ಸ್ವಯಂ ಸೇವಕರು, ದಾನಿಗಳು, ಹಲವಾರು ಸಂಘಟನೆಗಳು ಕೈಜೋಡಿಸಿದ್ದು, ದಿನಸಿ ಜೊತೆಗೆ, ಮಾಸ್ಕ್ ಹಾಗೂ ಸಾನಿಟೈಜರ್ ನೀಡಿದ್ದಾರೆ ಎಂದು ಹೇಳಿದರು.

ಇದೀಗ ಎರಡನೇ ಹಂತದಲ್ಲಿ ಲಾಕ್‌ಡೌನ್‌ ವಿಸ್ತರಣೆಯಾಗಿರುವುದರಿಂದ ಮುಂದಿನ ದಿನಗಳಲ್ಲಿ ಮತ್ತೆ ಜೀವನಾವಶ್ಯಕ ವಸ್ತುಗಳನ್ನು ವಿತರಣೆ ಮಾಡಬೇಕಾದ ಅನಿವಾರ್ಯತೆ ಇದೆ. ಪುರಸಭಾ ಸದಸ್ಯರು ತಮ್ಮ ವಾರ್ಡ್ ವ್ಯಾಪ್ತಿಯಲ್ಲಿನ ಅರ್ಹ ಫಲಾನುಭವಿಗಳ ಪಟ್ಟಿಯನ್ನು ಪುರಸಭೆಗೆ ನೀಡಬೇಕು. ಅವುಗಳನ್ನು ಪರಿಶೀಲಿಸಿ ಪುರಸಭೆ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಸೂಚಿಸಿದರು.

ಪುರಸಭಾ ಸದಸ್ಯರು, ತಮ್ಮ ವಾರ್ಡ್ ವ್ಯಾಪ್ತಿಗಳಲ್ಲಿ ಹಾಲು ವಿತರಣೆ ಹಾಗೂ ದಿನಸಿ ವಿತರಣೆಗಳಲ್ಲಿ ಉಂಟಾಗಿರುವ ಗೊಂದಲ ಹಾಗೂ ಲೋಪದೋಷಗಳ ಬಗ್ಗೆ ಗಮನ ಸೆಳೆದರು. ಇದಕ್ಕೆ ಉತ್ತರ ನೀಡಿದ ಶಾಸಕರು, ಇಂತಹ ಸಂದರ್ಭಗಳಲ್ಲಿ ಗೊಂದಲಗಳಾಗುವುದು ಸಹಜ. ಮುಂದಿನ ದಿನಗಳಲ್ಲಿ ಎಲ್ಲ ಸದಸ್ಯರನ್ನು ವಿಶ್ವಾಸಕ್ಕ ತೆಗೆದುಕೊಂಡು ಪುರಸಭೆ ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಹೇಳಿದರು.

ರೇಷನ್ ಕಾರ್ಡ್ ಇರುವವರು ಕೂಡ ದಿನಸಿ ಪದಾರ್ಥಗಳನ್ನು ಕೇಳುತ್ತಿದ್ದಾರೆ ಎಂಬ ಸದಸ್ಯರ ಮಾತಿಗೆ, ಉತ್ತರಿಸಿದ ಶಾಸಕರು, ಪಡಿತರ ಚೀಟಿ ಹಾಗೂ ಅಂತ್ಯೋದಯ ಕಾರ್ಡ್ ಇರುವವರಿಗೆ ಸರ್ಕಾರವೇ ಉಚಿತವಾಗಿ ಈಗಾಗಲೇ ಎರಡು ತಿಂಗಳ ಪಡಿತರ ನೀಡಿದೆ. ಆದರೆ, ಬಿಡದಿ ಭಾಗದಲ್ಲಿ ವಲಸಿಗರು ಹಾಗೂ ಕಾರ್ಮಿಕರು ಹೆಚ್ಚಾಗಿ ಇರುವ ಕಾರಣ, ಅವರಿಗೆ ಆಹಾರ ಪದಾರ್ಥಗಳನ್ನು ಪುರಸಭೆ ಮೂಲಕ ವಿತರಿಸಲಾಗುತ್ತಿದೆ ಎಂದು ಉತ್ತರಿಸಿದರು.

ಕೊರೋನಾ ಸೋಂಕು ತಡೆಗಟ್ಟುವ ರಾಮನಗರ ಜಿಲ್ಲೆಯು ಹಸಿರು ವಲಯದಲ್ಲಿ (ಗ್ರೀನ್ ಝೋನ್ ) ಇರುವುದು ಸಂತಸದಾಯಕ ಬೆಳವಣಿಗೆಯಾಗಿದೆ. ಇದಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿ, ಪೊಲೀಸ್ ಇಲಾಖೆ, ಜಿಲ್ಲಾಧಿಕಾರಿ ಹಾಗೂ ಸಿಇಒ ಸೇರಿದಂತೆ ಈ ಯುದ್ಧದಂತಹ ಸಂದರ್ಭದಲ್ಲಿ ಸೇವೆ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಪುರಸಭೆ ಮುಖ್ಯಾಧಿಕಾರಿ ಚೇತನ್ ಕೊಳವಿ, ಸಬ್ ಇನ್‌ಸ್ಪೆಕ್ಟರ್ ಸಿ.ಭಾಸ್ಕರ್, ಸದಸ್ಯರಾದ ರಮೇಶ್ ಕುಮಾರ್, ಸಂತೋಷ್, ಸಿ.ಲೋಕೇಶ್, ಮಹೀಪತಿ, ರಾಕೇಶ್, ಪೆಟ್ರೋಲ್ ರಾಜು, ರಮೇಶ್, ದೇವರಾಜು, ಮುಖಂಡರಾದ ರಾಮಕೃಷ್ಣಯ್ಯ, ರವಿಕುಮಾರ್, ಹರೀಶ್, ಕಂದಾಯ ಅಧಿಕಾರಿ ಬಿ.ವಿ.ನಾಗರಾಜು, ಪರಿಸರ ಎಂಜಿನಿಯರ್ ಅರ್ಚನಾ ಹಾಗೂ ಪುರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT