ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಗಡಿಯಲ್ಲಿ ಸ್ವಯಂಪ್ರೇರಿತ ಲಾಕ್‌ಡೌನ್

ಬೆಳಿಗ್ಗೆ 7ರಿಂದ 10ರವರೆಗೆ ಮಾತ್ರ ಅಂಗಡಿ ಮುಂಗಟ್ಟುಗಳ ವ್ಯವಹಾರ
Last Updated 22 ಜೂನ್ 2020, 16:27 IST
ಅಕ್ಷರ ಗಾತ್ರ

ಮಾಗಡಿ: ಪಟ್ಟಣದಲ್ಲಿ ಕೋವಿಡ್-19 ಸೋಂಕು ಪ್ರಕರಣಗಳು ದಿನೇ ದಿನೇ ಹೆಚ್ಚಳವಾಗುತ್ತಿದ್ದು, ಜುಲೈ1ರವರೆಗೆ ಸಾರ್ವಜನಿಕರ ಅಭಿಪ್ರಾಯದ ಮೇರೆಗೆ ಸ್ವಯಂಪ್ರೇರಿತ ಲಾಕ್‌ಡೌನ್ ಜಾರಿಗೊಳಿಸಲಾಗಿದೆ ಎಂದು ಶಾಸಕ ಎ.ಮಂಜುನಾಥ ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಕೋವಿಡ್-19 ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು. ಲಾಕ್‌ಡೌನ್ ಸಮಯದಲ್ಲಿ ಬೆಳಿಗ್ಗೆ 7ರಿಂದ 10ರವರೆಗೆ ಮಾತ್ರ ಅಂಗಡಿ ಮುಂಗಟ್ಟುಗಳು ವ್ಯವಹಾರ ನಡೆಸಬಹುದು. ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಮದ್ಯದ ಅಂಗಡಿ ಬಂದ್‌ ಮಾಡುವ ಕುರಿತು ತೀರ್ಮಾನಿಸಲಾಗುವುದು ಎಂದರು.

ಗ್ರಾಮೀಣ ಭಾಗದ ರೈತರ ಮನೆ ಬಾಗಿಲಿಗೆ ಬ್ಯಾಂಕ್‌ ಪ್ರತಿನಿಧಿಗಳು ಭೇಟಿ ನೀಡಿ ವ್ಯವಹಾರ ನಡೆಸಲಿದ್ದಾರೆ. ರೈತರು ಪ‍ಟ್ಟಣದತ್ತ ಬರುವುದು ಬೇಡ. ಕಂಟೈನ್‌ಮೆಂಟ್ ಪ್ರದೇಶಗಳಲ್ಲಿ ಪಡಿತರ ವಿತರಿಸುವಂತೆ ಈ ಸಂದರ್ಭದಲ್ಲಿ ಸೂಚಿಸಿದರು.

ಜಿಲ್ಲಾ ಕೇಂದ್ರದ ಕೋವಿಡ್ ಆಸ್ಪತ್ರೆ ಮತ್ತು ಹುಲಿಕಟ್ಟೆ ಕ್ವಾರಂಟೈನ್ ಕೇಂದ್ರಗಳು ರೋಗಹರಡುವ ತಾಣಗಳಾಗಿವೆ. ಶೌಚಾಲಯಗಳು ಸ್ವಚ್ಛಗೊಳಿಸುತ್ತಿಲ್ಲ. ಸರಿಯಾದ ಊಟ ನೀಡುತ್ತಿಲ್ಲ ಎಂದು ಆರೋಪಗಳಿದ್ದು ಕ್ರಮಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಾಕೀತು ಮಾಡಿದರು. ಕೋವಿಡ್ ಕಾಯ್ದೆ ಅನ್ವಯ ಹಣ ಖರ್ಚು ಮಾಡಬೇಕು ಎಂದ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕುಮಾರಸ್ವಾಮಿ ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾಡಳಿತ ಕೋವಿಡ್ ಸೋಂಕಿತರನ್ನು ನಿರ್ಲಕ್ಷ್ಯ ಮಾಡುತ್ತಿದೆ ಎಂದು ಆರೋಪವಿದೆ. ಬುಧವಾರ ಅಧಿಕಾರಿಗಳೊಂದಿಗೆ ಹುಲಿಕಟ್ಟೆ ಕ್ವಾರಂಟೈನ್ ಕೇಂದ್ರಕ್ಕೆ ಭೇಟಿ ನೀಡಲಾಗುವುದು. ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಅಧಿಕಾರಿಗಳ ಮೇಲೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಪುರಸಭೆ ಸದಸ್ಯರು, ಅಧಿಕಾರಿಗಳು ಸಾರ್ವಜನಿಕರಲ್ಲಿ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಬೇಕು. ತಾಲ್ಲೂಕು ಆಡಳಿತ ಹೊರಡಿಸಿರುವ ಲಾಕ್‌ಡೌನ್ ಆದೇಶ ತಪ್ಪದೆ ಪಾಲಿಸಬೇಕು. ಎಸ್ಸೆಸ್ಸೆಲ್ಸಿ ಪರೀಕ್ಷಾರ್ಥಿಗಳಿಗೆ ಸರ್ಕಾರಿ ಬಸ್‌ ಸೌಲಭ್ಯ ಇಲ್ಲದಿದ್ದರೆ ಖಾಸಗಿ ಬಸ್‌ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು.

ಜಿಲ್ಲಾ ಸವಿತಾ ಸಮಾಜದ ಉಪಾಧ್ಯಕ್ಷ ಮುನಿಕೃಷ್ಣ ಮಾತನಾಡಿ, ಕೋವಿಡ್‌ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕ್ಷೌರದ ಅಂಗಡಿಗಳನ್ನು ಸ್ವಯಂಪ್ರೇರಿತವಾಗಿ ಮುಚ್ಚಲಾಗಿದೆ. ಉಳ್ಳವರು ಸಹಾಯ ಮಾಡಬೇಕೆಂದು ಮನವಿ ಮಾಡಿದರು.

ತಹಶೀಲ್ದಾರ್ ಶ್ರೀನಿವಾಸ ಪ್ರಸಾದ್, ಸರ್ಕಲ್ ಇನ್‌ಸ್ಪೆಕ್ಟರ್ ಬಿ.ಎನ್.ಮಂಜುನಾಥ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ನಾರಾಯಣಪ್ಪ, ಇಒ ಟಿ.ಪ್ರದೀಪ್, ಕುದೂರು ಸಬ್‌ಇನ್‌ಸ್ಪೆಕ್ಟರ್ ಮಂಜುನಾಥ, ಬಿಇಒ ಎಸ್.ಸಿದ್ದೇಶ್ವರ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸತೀಶ್, ಸರ್ಕಾರಿ ಆಸ್ಪತ್ರೆ ಆಡಳಿತಾಧಿಕಾರಿ ಡಾ.ರಾಜೇಶ್, ಆರೋಗ್ಯ ಶಿಕ್ಷಣ ಅಧಿಕಾರಿ ಆರ್‌.ರಂಗನಾಥ್‌, ಉಪನೋಂದಣಾಧಿಕಾರಿ ಪಾರ್ವತಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT