ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ | ಸೋಬಾನೆ ಉಳಿವಿಗೆ ಮೊಮ್ಮಕ್ಕಳಿಗೆ ತರಬೇತಿ: ಕಲಾವಿದೆ ಚನ್ನಾಜಮ್ಮ

‘ಲೋಕಸಿರಿ’ಯಲ್ಲಿ ಸೋಬಾನೆ ಕಲಾವಿದೆ ಚನ್ನಾಜಮ್ಮ ಮನದಾಳ
Published : 11 ಸೆಪ್ಟೆಂಬರ್ 2024, 6:07 IST
Last Updated : 11 ಸೆಪ್ಟೆಂಬರ್ 2024, 6:07 IST
ಫಾಲೋ ಮಾಡಿ
Comments

ರಾಮನಗರ: ‘ಹಿರಿಯರಿಂದ ನಾನು ಕಲಿತಿರುವ ಸೋಬಾನೆ ಪದಗಳು ಉಳಿಯಬೇಕು. ನಮ್ಮ ಮುಂದಿನ ತಲೆಮಾರಿಗೂ ಅವುಗಳು ಗೊತ್ತಾಗಬೇಕು. ಅದಕ್ಕಾಗಿ, ಮನೆಯಲ್ಲಿರುವ ನನ್ನ ಮಕ್ಕಳು ಹಾಗೂ ಮೊಮ್ಮಕ್ಕಳಿಗೆ ಸೋಬಾನೆ ಪದಗಳನ್ನು ಹೇಳಿ ಕೊಡುತ್ತಿದ್ದೇನೆ. ಈ ಕಲೆ ನಮ್ಮೊಂದಿಗೆ ಹೋಗಬಾರದು’ ಎಂದು ಸೋಬಾನೆ ಪದಗಳ ಕಲಾವಿದೆ ಚನ್ನಾಜಮ್ಮ ಹೇಳಿದರು.

ಕರ್ನಾಟಕ ಜಾನಪದ ಪರಿಷತ್ತು ಹಾಗೂ ಜಾನಪದ ಲೋಕವು ನಗರದ ಹೊರಲವಯದ ಜಾನಪದ ಲೋಕದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಎಚ್.ಎಲ್. ನಾಗೇಗೌಡರ ನೆನಪಿನ ‘ಲೋಕಸಿರಿ-98’ ಕಾರ್ಯಕ್ರಮದ ತಿಂಗಳ ಅತಿಥಿಯಾಗಿ ಭಾಗವಹಿಸಿದ್ದ ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲ್ಲೂಕಿನ ಯಾಚೇನಹಳ್ಳಿಯ ಚನ್ನಾಜಮ್ಮ ತಮ್ಮ ಮನದಾಳ ಹಂಚಿಕೊಂಡರು.

‘ಶುಭ ಸಮಾರಂಭ ಸೇರಿದಂತೆ ದೈನಂದಿನ ಕೆಲಸಗಳನ್ನು ಮಾಡುವಾಗ ನಮ್ಮೂರಿನ ಹೆಂಗಸರು ಹಾಡುತ್ತಿದ್ದನ್ನು ಚಿಕ್ಕವಳಾಗಿದ್ದ ನಾನು ಆಸಕ್ತಿಯಿಂದ ನೋಡುತ್ತಿದ್ದೆ. ಮುಂದೆ ಅವರ ಜೊತೆ ನಾಟಿ ಕೆಲಸ ಹಾಕುವಾಗ, ರಾಗಿ ಬೀಸುವಾಗ, ಮದುವೆ ಸಮಾರಂಭಗಳಲ್ಲಿ ಅವರಿಗೆ ದನಿಯಾಗುತ್ತಾ ನಾನೂ ಆ ಪದಗಳನ್ನು ಕಲಿತೆ’ ಎಂದರು.

‘ಸಂದರ್ಭಕ್ಕೆ ಅನುಗುಣವಾಗಿ ನಮ್ಮ ಹಿರಿಯರು ಸೋಬಾನೆ ಪದಗಳನ್ನು ಹಾಡುತ್ತಾ ಬಂದಿದ್ದಾರೆ. ಬಾಯಿಂದ ಬಾಯಿಗೆ ಹರಿದು ಬಂದಿರುವ ಪದಗಳನ್ನು ಗಮನವಿಟ್ಟು ಆಲಿಸಿದರೆ, ಅವುಗಳಲ್ಲಿ ಬದುಕಿನ ಸುಖ–ದುಃಖವು ಅಡಗಿರುವುದು ಗೊತ್ತಾಗುತ್ತದೆ. ಅಂತಹ ಪದಗಳನ್ನು ಹಾಡುತ್ತಾ ಬಂದಿರುವ ನನಗೆ ಜಾನಪದ ಲೋಕಕ್ಕೆ ಕರೆಸಿ ಸನ್ಮಾನಿಸಿರುವುದು ತುಂಬಾ ಸಂತೋಷವಾಗಿದೆ’ ಎಂದು ತಿಳಿಸಿದರು.

ಮಾತು ಮುಗಿಯುತ್ತಿದ್ದಂತೆ ತಮ್ಮ ಕಂಚಿನ ಕಂಠದಿಂದ ಬೈರವೇಶ್ವರ, ಮಾದೇಶ್ವರನ ಕುರಿತ ಗೀತೆಗಳನ್ನು, ಹೆಣ್ಣನ್ನು ಧಾರೆ ಎರೆಯುವ ಪದ, ಜರಿಯೋ ಪದ, ಅಣ್ಣ ತಂಗಿಯರ ಮೇಲಿನ ಪದಗಳನ್ನು ಹಾಡಿ ರಂಜಿಸಿದರು. ಹಾಡುಗಾರ್ತಿಯರಾದ ರಾಜಮ್ಮ, ನಿಂಗಮ್ಮ, ಮಂಚಮ್ಮ, ರಾಜಮ್ಮ ಅವರು ಚನ್ನಾಜಮ್ಮಗೆ ಹಾಡಿಗೆ ದನಿ ಗೂಡಿಸಿದರು.

ಸಂಸ್ಕೃತಿ ಚಿಂತಕ ಶ್ರೀಧರ ಅಗಲಾಯ, ‘ನಾನು ಚಿಂತನೆಗಿಂತ ಕ್ರಿಯೆಯಲ್ಲಿ ನಂಬಿಕೆ ಇಟ್ಟವನು. ವಿಶ್ವಮಟ್ಟದಲ್ಲಿ ಹೇಗೆ ಜಾನಪದವನ್ನು ಪ್ರಚಾರ ಮಾಡಬೇಕು ಎನ್ನುವುದನ್ನು ನಾವು ಅರಿತುಕೊಂಡು, ನಮ್ಮ ಕಲೆಯನ್ನು ಜಾಗತಿಕ ಮಟ್ಟಕ್ಕೆ ಪರಿಚಯಿಸುವ ಕೆಲಸ ಮಾಡಬೇಕಿದೆ’ ಎಂದು ಅಭಿಪ್ರಾಯಪಟ್ಟರು.

ಸಾಹಿತಿ ವಿಜಯ ರಾಂಪುರ, ‘ಜನಪದರ ಜ್ಞಾನ ಅಪಾರವಾದದ್ದು. ನಾಡಿಗೆ ಬರ ಬಂದರೂ, ಕಲೆಗೆ ಎಂದಿಗೂ ಬರ ಬಂದಿಲ್ಲ. ಅದಕ್ಕೆ ನಮ್ಮ ನಾಡಿನಲ್ಲಿರುವ ಅಗಾಧ ಜನಪದ ಕಲೆಗಳೇ ಸಾಕ್ಷಿ’ ಎಂದರು.

ಜಾನಪದ ಲೋಕದ ಕ್ಯೂರೇಟರ್ ಡಾ. ರವಿ ಯು.ಎಂ ನಿರೂಪಣೆ ಮಾಡಿ, ಸಂವಾದ ನಡೆಸಿಕೊಟ್ಟರು. ಸಂಶೋಧನಾ ಸಂಚಾಲಕ ಡಾ. ಸಂದೀಪ್ ಕೆ.ಎಸ್ ಸ್ವಾಗತಿಸಿದರು. ಸಾಹಿತಿ ವಿಜಯ ರಾಂಪುರ, ಅಬ್ಬೂರು ಶ್ರೀನಿವಾಸ್, ಜಾನಪದ ಲೋಕದ ಸಿಬ್ಬಂದಿ, ಡಿಪ್ಲೊಮೊ ವಿದ್ಯಾರ್ಥಿಗಳು ಇದ್ದರು.

‘ಕಲಾವಿದರ ಚರಿತ್ರೆ ಕಟ್ಟುವ ಪರಿಷತ್ತು’ ‘ಪ್ರತಿ ಊರಲ್ಲೂ ಸಾವಿರಾರು ಜನಪದ ಕಲಾವಿದರಿದ್ದಾರೆ. ಅವರ ಜೀವನ-ಸಾಧನೆಗಳನ್ನು ಸಂಗ್ರಹಿಸಿ ಜಿಲ್ಲಾವಾರು ದಾಖಲೀಕರಿಸುತ್ತಾ ಕಲಾವಿದರ ಚರಿತ್ರೆಯನ್ನು ಕಟ್ಟುವ ಕೆಲಸವನ್ನು ಜಾನಪದ ಪರಿಷತ್ತು ಮಾಡುತ್ತಿದೆ. ಜಾನಪದ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಜನಪದ ಕಲಾವಿದರ ವಿಶ್ವಕೋಶವನ್ನು ತರಲು ಜಾನಪದ ಪರಿಷತ್ತು ಚಿಂತನೆ ನಡೆಸಿದೆ. ಇದರಿಂದ ಜನಪದರ ಕಲೆ ವೈವಿಧ್ಯ ಅಪರೂಪದ ಕಲೆಗಳನ್ನು ದಾಖಲಿಸುವ ಕೆಲಸವಾಗುತ್ತದೆ. ನಾವು ಆಳುವ ಚರಿತ್ರೆಯನ್ನು ಓದುತ್ತಿದ್ದೇವೆ. ಆದರೆ ಜನಸಾಮಾನ್ಯರ ಕಲಾವಿದರ ಬಡವರ ಚರಿತ್ರೆ ಬರೆಯಬೇಕು’ ಎಂದು ಪರಿಷತ್ತಿನ ಅಧ್ಯಕ್ಷ ಪ್ರೊ.ಹಿ.ಚಿ. ಬೋರಲಿಂಗಯ್ಯ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT