ಬುಧವಾರ, ಜೂಲೈ 8, 2020
28 °C
ಶುಭ ಸಮಾರಂಭಗಳಿಗೆ 500 ಜನದವರೆಗೆ ಅವಕಾಶ ನೀಡುವಂತೆ ಸರ್ಕಾರಕ್ಕೆ ಮನವಿ

ರಾಮನಗರ | ’ಮದುವೆ ಬಂದ್: ₹16 ಕೋಟಿ ನಷ್ಟ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಜಿಲ್ಲೆಯಲ್ಲಿ 68 ಕಲ್ಯಾಣ ಮಂಟಪಗಳಿದ್ದು, ಕೋವಿಡ್ -19ಲಾಕ್‍ಡೌನ್‍ನಿಂದಾಗಿ ಜಿಲ್ಲೆಯಲ್ಲಿ ಈವರೆಗೆ 1750ಕ್ಕೂ ಹೆಚ್ಚು ಮದುವೆಗಳು ರದ್ದಾಗಿದೆ ಎಂದು ಜಿಲ್ಲಾ ಕಲ್ಯಾಣ ಮಂಟಪಗಳ ಮಾಲೀಕರ ಸಂಘದ ಅಧ್ಯಕ್ಷ ಜೆ.ಜಗದೀಶ್ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್‌ನಿಂದಾಗಿ ಕಳೆದ ನಾಲ್ಕು ತಿಂಗಳಲ್ಲಿ ಮದುವೆಗಳು ನಡೆದಿಲ್ಲ. ಇದರಿಂದ ಕಲ್ಯಾಣಮಂಟಪಗಳ ಮಾಲೀಕರಿಗೆ ಈ ತನಕ 16 ಕೋಟಿ ನಷ್ಟ ಉಂಟಾಗಿದೆ. ಕಲ್ಯಾಣ ಮಂಟಪದ ಮಾಲೀಕರು ₹4.5 ಕೋಟಿಯಷ್ಟು ಜಿಎಸ್‍ಟಿ ಪಾವತಿಸಬೇಕಿದೆ. ಪ್ರಸಕ್ತ ಸಾಲಿನ 2020-21ನೇ ಸಾಲಿನ ಆಸ್ತಿ ತೆರಿಗೆ, ಕಟ್ಟಡ ತೆರಿಗೆಯನ್ನು ಮನ್ನಾ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಹೇಳಿದರು.

ಕ್‍ಡೌನ್ ತೆರವಿನಿಂದಾಗಿ ಮದುವೆಯಲ್ಲಿ ಭಾಗಿಯಾಗಲು 50ಜನರಿಗೆ ಮಾತ್ರ ಸರ್ಕಾರ ಅವಕಾಶ ನೀಡಿದೆ. ಅದನ್ನು 500 ಮಂದಿಗೆ ವಿಸ್ತರಣೆ ಮಾಡಬೇಕು. ಮದುವೆ ಮತ್ತು ಶುಭ ಸಮಾರಂಭದಲ್ಲಿ ಸಾಮಾಜಿಕ ಅಂತರ ಪಾಲನೆ ಸೇರಿದಂತೆ ಸರ್ಕಾರದ ಎಲ್ಲಾ ನಿಬಂಧನೆಗಳನ್ನು ಪಾಲಿಸಿಕೊಂಡು ಹೋಗಲಾಗುತ್ತದೆ ಎಂದು ಹೇಳಿದರು.

ಕಲ್ಯಾಣ ಮಂಟಪದಲ್ಲಿ ನಡೆಯುವ ಮದುವೆ ಸಮಾರಂಭ ನಂಬಿಕೆಕೊಂಡೇ, ಅಸಂಘಟಿತ ವಲಯದ ಹಲವು ಕಾರ್ಮಿಕರು ಜೀವನ ಸಾಗಿಸುತ್ತಿದ್ದಾರೆ. ಅದರಲ್ಲೂ ತರಕಾರಿ ಹಣ್ಣು ಬೆಳೆಗಾರರು, ಹೂವಿನ ಅಲಂಕಾರ, ದೀಪಾಲಂಕಾರ, ಸ್ವಚ್ಛತಾ ಕೆಲಸ ನಿರ್ವಹಿಸುವ ಮಹಿಳೆಯರು, ಸಗಟು ದಿನಸಿ ಮತ್ತು ಬಟ್ಟೆ ವ್ಯಾಪಾರಿಗಳು, ಶಾಮಿಯಾನ, ಅಡುಗೆ ಬಾಣಸಿಗರು, ಮಂಗಳವಾದ್ಯ ಸೇರಿದಂತೆ ಸಾವಿರಾರು ಮಂದಿ ಇದೇ ಉದ್ಯಮ ನಂಬಿಕೊಂಡಿವೆ ಎಂದರು.

ಕಲ್ಯಾಣ ಮಂಟಪದ ಮಾಲೀಕರಿಗೆ ಆಗಿರುವ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಇದಕ್ಕೆ ಜಿಲ್ಲಾಧಿಕಾರಿ ಸ್ಪಂದಿಸಿದ್ದು, ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ ಎಂದರು.

ಸಂಘದ ಪದಾಧಿಕಾರಿಗಳಾದ ಅಪ್ಪಾಜಿಗೌಡ, ಚಕ್ಕಣ್ಣಯ್ಯ, ಬಸವರಾಜು, ಆರ್.ವಿ. ಸುರೇಶ್, ಬಿ.ಬಸವರಾಜು, ಶಿವರಾಮು, ಎನ್.ಶಿವಣ್ಣ, ಸಿ.ಡಿ. ರಾಮದೇವ್, ವೀರಮಾದೇಗೌಡ, ಡಿ.ತಮ್ಮಣ್ಣ, ಬಿ.ಪುಟ್ಟರಾಜು, ಸುಮಂತ್ ಗೌಡ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು