ಮಂಗಳವಾರ, ಡಿಸೆಂಬರ್ 10, 2019
19 °C
ವಂಚಿಸುತ್ತಿದ್ದ ನಕಲಿ ಐಎಎಸ್ ಅಧಿಕಾರಿ ಬಂಧನ

ನಕಲಿ ಐಎಎಸ್‌ ಅಧಿಕಾರಿಯಿಂದ ಜನರಿಗೆ ನಿವೇಶನ, ಸರ್ಕಾರಿ ಉದ್ಯೋಗದ ಆಮಿಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಚನ್ನಪಟ್ಟಣ ಪೊಲೀಸರಿಗೆ ಸಿಕ್ಕಿ ಬಿದ್ದಿರುವ ನಕಲಿ ಐಎಎಸ್ ಅಧಿಕಾರಿ ಮಹಮದ್ ಸಲ್ಮಾನ್ (37) ಅಮಾಯಕ ಜನರಿಗೆ ಸರ್ಕಾರಿ ಉದ್ಯೋಗ ಹಾಗೂ ನಿವೇಶನ ಕೊಡಿಸುವುದಾಗಿ ನಂಬಿಸಿ ಹಣ ವಂಚಿಸಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಎ. ಶೆಟ್ಟಿ ಹೇಳಿದರು.

ಇಲ್ಲಿನ ಜಿಲ್ಲಾ ಪೊಲೀಸ್ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಐಎಎಸ್ ಅಧಿಕಾರಿ ಎಂದು ಹೇಳಿಕೊಂಡು ಮಹಮದ್ ಸಲ್ಮಾನ್ ಮತ್ತು ತಂಡ ಮೈಸೂರು, ಮಂಡ್ಯ, ತುಮಕೂರು, ರಾಮನಗರ, ಚನ್ನಪಟ್ಟಣ, ಮಾಗಡಿ, ಗಂಗಾವತಿ ಹೀಗೆ ಹಲವಾರು ಕಡೆ ಸಂಚರಿಸಿತ್ತು. ಕೆಲಸ ಕೊಡಿಸುವುದಾಗಿ, ನಿವೇಶನ ಕೊಡಿಸುವುದಾಗಿ ಹೇಳಿ ಹಣ ಪಡೆದು ವಂಚಿಸುತ್ತಿದ್ದನು. ಆರ್.ಡಿ.ಪಿ.ಐ ಅಧಿಕಾರಿ ಎಂದು ಹೇಳಿಕೊಂಡು ವಿಧಾನಸೌಧ, ಎಂ.ಎಸ್.ಬಿಲ್ಡಿಂಗ್ ನಲ್ಲಿರುವ ಹಲವು ಇಲಾಖೆಗಳಿಗೆ ಭೇಟಿ ಕೊಟ್ಟು ಅಲ್ಲಿನ ಅಧಿಕಾರಿಗಳಿಂದ ಕೆಲಸ ಕಾರ್ಯಗಳಿಗೆ ಶಿಫಾರಸು ಮಾಡುತ್ತಿದ್ದ’ ಎಂದು ತಿಳಿಸಿದರು.

ಮಾಗಡಿ ತಾಲ್ಲೂಕಿನ ಕುದೂರು ಮುಂತಾದ ಗ್ರಾಮಗಳಲ್ಲಿ ಇರುವ ಅಂಗನವಾಡಿಗಳು ವಿಶೇಷವಾಗಿ ಉರ್ದು ಶಾಲೆಗಳಿಗೆ ಭೇಟಿ ಕೊಟ್ಟು ಪರಿಶೀಲನೆ ಮಾಡುವುದು, ಶಾಲೆಯನ್ನು ದತ್ತು ಪಡೆದು ಅಭಿವೃದ್ದಿ ಮಾಡುವುದಾಗಿ ಸುಳ್ಳು ಹೇಳಿ ನಂಬಿಸಿದ್ದ. ಶಿವಮೊಗ್ಗ ತಾಲ್ಲೂಕಿನ ಐನೋರ ಹೋಬಳಿ ಅಬ್ಬಲುಗೆರೆ ಗ್ರಾಮದ ಸಾಧಾರಣ ಕುಟುಂಬವೊಂದರಲ್ಲಿ ಜನಿಸಿದ್ದ ಈತ ಏಳು ಸಹೋದರರ ಪೈಕಿ ಒಬ್ಬ. 2014ರಲ್ಲಿ ಶಿವಮೊಗ್ಗ ಜಿಲ್ಲಾ ಪಂಚಾಯಿತಿಯಲ್ಲಿ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡಿದ್ದನು ಎಂದರು.

‘ಜಿಲ್ಲಾ ಪಂಚಾಯಿತಿಗೆ ಬರುತ್ತಿದ್ದ ಸಾರ್ವಜನಿಕರಿಗೆ ಸಣ್ಣಪುಟ್ಟ ಕೆಲಸ ಮಾಡಿಕೊಟ್ಟು ಹಣ ಮಾಡುತ್ತಿದ್ದ. 2016 ರಲ್ಲಿ ಬೆಂಗಳೂರಿಗೆ ಬಂದಿದ್ದ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಲಕ್ಕೇನಹಳ್ಳಿ ಸೊಂಡೆಕೊಪ್ಪ ರಸ್ತೆಯ ಮನೆಯೊಂದರ ವಾಸವಿದ್ದ. ತಾನು ಆರ್.ಡಿ.ಪಿ.ಐ ಇಲಾಖೆಯ ಐಎಎಸ್ ಅಧಿಕಾರಿ ಅಂತಲೂ, ನೆಲಮಂಗಲದಲ್ಲಿ ಕರ್ನಾಟಕ ರಾಜ್ಯ ಸಮಗ್ರ ಜನಸ್ಪಂದನಾ ವೇದಿಕೆಯ ಕಚೇರಿ ಸ್ಥಾಪಿಸಿ ರಾಜ್ಯ ಘಟಕದ ಅಧ್ಯಕ್ಷ ಅಂತಲೂ ಗುರುತಿಸಿಕೊಳ್ಳುತ್ತಿದ್ದ’ ಎಂದರು.

ಜನರನ್ನು ನಂಬಿಸಲು ಕಾರಿಗೆ ಸರ್ಕಾರಿ ಇಲಾಖೆಯವರ ಮಾದರಿಯಲ್ಲಿ ಬೋರ್ಡ್ ತಲುಲಿಸಿದ್ದ. ಕಾರಿಗೆ ರವಿ ಕುಮಾರ್ ಎಂಬ ವ್ಯಕ್ತಿಯನ್ನು ಚಾಲಕ ಮತ್ತು ಗನ್ ಮ್ಯಾನ್ ಆಗಿ ನೇಮಿಸಿಕೊಂಡಿದ್ದ. ಕರ್ನಾಟಕ ರಾಜ್ಯ ಸಮಗ್ರ ಜನಸ್ಪಂದನ ವೇದಿಕೆಯ ಹೆಸರಿನಲ್ಲಿ ನಕಲಿ ಸಂಘಟನೆ ಸ್ಥಾಪಿಸಿ ರಾಜ್ಯ ಘಟಕದ ಅಧ್ಯಕ್ಷನೆಂದು ಹೇಳುತ್ತ ಸರ್ಕಾರಿ ಇಲಾಖೆಗಳಲ್ಲಿ ಅವರಿವರ ಕೆಲಸ ಮಾಡಿಸಿಕೊಡುತ್ತಿದ್ದ ಎಂದು ಮಾಹಿತಿ ನೀಡಿದರು.

ಒಂದಿಬ್ಬರಿಗೆ ನಿವೇಶನ ಮಾಡಿಸಿ ಕೊಟ್ಟು ನಂಬಿಕೆ ಹುಟ್ಟಿಸಿದ್ದ. ಆರೋಪಿಯಿಂದ ಇನೋವ ಕಾರು, ಲ್ಯಾಪ್ ಟಾಪ್‍ ಗಳು, ಕ್ಯಾಮೆರಾ, ಮೊಬೈಲ್‍ ಗಳು, ಪೊಲೀಸ್ ಲಾಠಿ, ಪೊಲೀಸ್ ಟೊಪ್ಪಿ, ಕೆಲವು ರಬ್ಬರ್ ಸ್ಟ್ಯಾಂಪ್‌, ಬೇರೆ ಬೇರೆ ವ್ಯಕ್ತಿಗಳ ಆಧಾರ್ ಕಾರ್ಡ್ ಗಳು, ಸರ್ಕಾರಿ ದಾಖಲೆ ಪತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.

ಪ್ರತಿಕ್ರಿಯಿಸಿ (+)