ಸೋಮವಾರ, ಜನವರಿ 17, 2022
20 °C
ಸ್ಥಳೀಯ ನಗರ ಸಂಸ್ಥೆ ಆದಾಯಕ್ಕೆ ಪೆಟ್ಟು

ರಾಮನಗರ | ಮಾಗಡಿ ಪುರಸಭೆ ಅಂಗಡಿ ಮಳಿಗೆ ಶಿಥಿಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಗಡಿ: ಪಟ್ಟಣದಲ್ಲಿ ಪುರಸಭೆ ಅಂಗಡಿ ಮಳಿಗೆಗಳು ಶಿಥಿಲಗೊಂಡಿದ್ದು, ಅಪಾಯ ಆಹ್ವಾನಿಸುತ್ತಿವೆ. ಯಾವುದೇ ಕ್ಷಣದಲ್ಲಿ ಕುಸಿದು ಬೀಳುವ ಅಪಾಯ ಎದುರಾಗಿದೆ ಎಂದು ಹೂವು, ಬಾಳೆಹಣ್ಣು ಮತ್ತು ತರಕಾರಿ ಮಾರಾಟಗಾರರು ಆತಂಕಗೊಂಡಿದ್ದಾರೆ.

60 ವರ್ಷಗಳ ಹಿಂದೆ ಪುರಸಭೆಯಿಂದ 100 ಅಂಗಡಿ ಮಳಿಗೆಗಳನ್ನು ನಿರ್ಮಿಸಲಾಗಿತ್ತು. ಆದರೆ, ಸೂಕ್ತ ನಿರ್ವಹಣೆ ಇಲ್ಲದೆ ಮಳಿಗೆಗಳು ಕುಸಿದು ಬೀಳುವ ಹಂತ ತಲುಪಿವೆ. ಪುರಸಭೆ ಹರಾಜಿನಲ್ಲಿ ಮಳಿಗೆಯೊಂದಕ್ಕೆ ₹ 500ಕ್ಕೆ ಬಾಡಿಗೆ ಕೂಗಿದ್ದವರು 4ನೇ ವ್ಯಕ್ತಿಗಳಿಗೆ ಮಾಸಿಕವಾಗಿ ₹ 15 ಸಾವಿರಕ್ಕೆ ಲೀಸ್‌ಗೆ ನೀಡಿದ್ದಾರೆ. ಇದರಿಂದ ಪುರಸಭೆಯ ಆದಾಯಕ್ಕೆ ಪೆಟ್ಟು ಬಿದ್ದಿದೆ.

ಶಿಥಿಲವಾಗಿರುವ ಅಂಗಡಿ ಮಳಿಗೆಗಳಲ್ಲಿ ಮೀಸಲಾತಿ ಅನ್ವಯ ಎಸ್‌.ಸಿ ಮತ್ತು ಎಸ್‌.ಟಿ ಫಲಾನುಭವಿಗಳಿಗೆ ಅಂಗಡಿ ನೀಡದೆ ವಂಚಿಸಲಾಗಿದೆ. ಪುರಸಭೆ ವ್ಯಾಪ್ತಿಯ ರಾಮರಾಜ ಅರಸ್‌ ರಸ್ತೆಯಲ್ಲಿ ಖಾಸಗಿ ಅಂಗಡಿಗಳಿಗೆ ಮಾಸಿಕ ₹ 20 ಸಾವಿರದಿಂದ ₹ 30 ಸಾವಿರ ಬಾಡಿಗೆ ದರ ಇದೆ. ಅದೇ ರಸ್ತೆಯ ಎದುರಿಗೆ ಇರುವ ಪುರಸಭೆ ಅಂಗಡಿಗಳಿಗೆ ₹ 500 ರಿಂದ ₹ 1 ಸಾವಿರ ಬಾಡಿಗೆ ದರ ನಿಗದಿಪಡಿಸಲಾಗಿದೆ.

‘ಪುರಸಭೆಗೆ ಬರಬೇಕಿದ್ದ ಹಣ ಖಾಸಗಿ ವ್ಯಕ್ತಿಗಳ ಕೈಗೆ ಸೇರುತ್ತಿದೆ. ಹೂವು, ಬಾಳೆಹಣ್ಣು, ತರಕಾರಿ ಮಾರಾಟ ಮಾಡಲು ಶಿಥಿಲ ಮಳಿಗೆಯ ಒಳಗೆ ಹೋಗಲು ಭಯವಾಗುತ್ತಿದೆ. ರಸ್ತೆ ಮೇಲೆ ತರಕಾರಿ ವ್ಯಾಪಾರ ಮಾಡುತ್ತಿದ್ದೇವೆ’ ಎಂದು ತರಕಾರಿ ಮಾರಾಟಗಾರರು ಆತಂಕ ವ್ಯಕ್ತಪಡಿಸಿದ್ದಾರೆ.

‘ಪುರಸಭೆ ಅಧ್ಯಕ್ಷರು ಸೂಕ್ತ ಕ್ರಮಕೈಗೊಂಡು ಅಂಗಡಿಗಳನ್ನು ಕೆಡವಿ ನೂತನ ಕಟ್ಟಡ ಕಟ್ಟಿಸಬೇಕು. ಎಸ್‌.ಸಿ ಮತ್ತು ಎಸ್‌.ಟಿ ಫಲಾನುಭವಿಗಳಿಗೆ ಅಂಗಡಿಗಳನ್ನು ಮೀಸಲಿಡಬೇಕು’ ಎಂದು ದಲಿತ ಮುಖಂಡ ಗೋಪಾಲಕೃಷ್ಣ ಆಗ್ರಹಿಸಿದ್ದಾರೆ.

‘ಅಂಗಡಿ ಮಳಿಗೆಗಳು ಶಿಥಿಲವಾಗಿರುವ ಬಗ್ಗೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗುವುದು. ಅಂಗಡಿಗಳನ್ನು ಕೆಡವಿ ನೂತನ ಮಾರುಕಟ್ಟೆ ಕಟ್ಟಡ ಕಟ್ಟಿಸುವ ಬಗ್ಗೆ ಶಾಸಕ ಎ. ಮಂಜುನಾಥ್‌ ಅವರೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು’ ಎಂದು ಪುರಸಭೆ ಅಧ್ಯಕ್ಷರಾದ ವಿಜಯ ರೂಪೇಶ್‌ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.