ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಗಡಿ | ಸಾವನದುರ್ಗ ಬೆಟ್ಟ: ಚಾರಣಪ್ರಿಯರಿಗೆ ಕೆಂಪು ನಿಶಾನೆ

ಸುಧೀಂದ್ರ ಸಿ.ಕೆ.
Published : 21 ಆಗಸ್ಟ್ 2024, 4:45 IST
Last Updated : 21 ಆಗಸ್ಟ್ 2024, 4:45 IST
ಫಾಲೋ ಮಾಡಿ
Comments

ಮಾಗಡಿ: ಏಷ್ಯಾದ ಅತಿ ಎತ್ತರದ ಏಕಶಿಲಾ ಬೆಟ್ಟ ಎಂದು ಪ್ರಖ್ಯಾತಿ ಪಡೆದಿರುವ ತಾಲ್ಲೂಕಿನ ಸಾವನದುರ್ಗ ಬೆಟ್ಟ ಹತ್ತಲು ಚಾರಣಿಗರಿಗೆ ಎಲ್ಲಿಲ್ಲದ ಉತ್ಸಾಹ. ವಾರಾಂತ್ಯದಲ್ಲಂತೂ ಇತ್ತ ಚಾರಣಪ್ರಿಯರ ದಂಡೇ ಹರಿದು ಬರುತ್ತದೆ. ಆದರೆ, ಇಕೋ ಟೂರಿಸಂ ಹಾಗೂ ಅರಣ್ಯ ಇಲಾಖೆಯ ನಡುವಿನ ಗುದ್ದಾಟದ ಕಾರಣ ಇದೀಗ ಚಾರಣಿಗರಿಗೆ ಪ್ರವೇಶ ನಿಷೇಧಿಸಲಾಗಿದೆ.

ಕೆಲವು ತಿಂಗಳ ಹಿಂದೆ ಉತ್ತರ ಪ್ರದೇಶದ ಗಗನ್ ದೀಪ್ ಸಿಂಗ್ ಅವರು ಬೆಟ್ಟ ಹತ್ತಿ ಕಾಣೆಯಾಗಿದ್ದರು. ಆ ಸಂದರ್ಭದಲ್ಲಿ ಇಕೋ ಟೂರಿಸಂ ಸರಿಯಾಗಿ ಸ್ಪಂದಿಸಲಿಲ್ಲ. ಇದರಿಂದ ಅರಣ್ಯ ಇಲಾಖೆ ಮತ್ತು ಇಕೋ ಟೂರಿಸಂ ನಡುವೆ ಹೊಂದಾಣಿಕೆ ಸಮಸ್ಯೆ ಉಂಟಾಗಿತ್ತು. ಇದೀಗ ಅರಣ್ಯ ಇಲಾಖೆಯು ಬೆಟ್ಟ ಹತ್ತಲು ಬರುವ ಚಾರಣಪ್ರಿಯರಿಗೆ ಕೆಂಪು ನಿಶಾನೆ ತೋರಿಸಿದ್ದು, ಕೆಲ ದಿನಗಳ ಮಟ್ಟಿಗೆ ಪ್ರವೇಶವನ್ನು ನಿಷೇಧಿಸಿದೆ. ಅರಣ್ಯ ಇಲಾಖೆ ವತಿಯಿಂದಲೇ ಆಪ್ ಸಿದ್ಧಪಡಿಸಿ ಆನ್‌ಲೈನ್ ಮೂಲಕ ಬೆಟ್ಟ ಹತ್ತಲು ಟಿಕೆಟ್ ಕೊಡುವ ವ್ಯವಸ್ಥೆ ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸಾವನದುರ್ಗ ಬೆಟ್ಟಕ್ಕೆ ಪ್ರವೇಶ ನಿಷೇಧಿಸಲಾಗಿದೆ.

ಘಟನೆಯ ನಂತರ ಇಕೋ ಟೂರಿಸಂ ಆನ್‌ಲೈನ್ ಬುಕಿಂಗ್‌ ಸೇವೆಯನ್ನು ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಆ.1 ರಿಂದ ಬೆಟ್ಟ ಹತ್ತಲು ಅರಣ್ಯ ಇಲಾಖೆ ಯಾರಿಗೂ ಅವಕಾಶ ನೀಡುತ್ತಿಲ್ಲ. ತನ್ನದೇ ಆಪ್‌ ಹಾಗೂ ಸಕಲ ವ್ಯವಸ್ಥೆಗಳು ಸಿದ್ಧಗೊಂಡ ಬಳಿಕವೇ ಪ್ರವೇಶವನ್ನು ಮುಕ್ತಗೊಳಿಸಲಾಗುವುದು ಎಂದು ಅರಣ್ಯ ಇಲಾಖೆ ತಿಳಿಸಿದೆ.

ಸಾವನದುರ್ಗ ಬೆಟ್ಟ ಹತ್ತಲು ಬರುವ ಪ್ರತಿ ಪ್ರವಾಸಿಗರಿಗೆ ಇಕೋ ಟೂರಿಸಂ ಆನ್‌ಲೈನ್ ಟಿಕೆಟ್‌ ಶುಲ್ಕ ₹ 250, ಆನ್‌ಲೈನ್  ಶುಲ್ಕ ₹7.25, ಜಿಎಸ್‌ಟಿ ₹ 46.31 ಸೇರಿ ಒಟ್ಟು ₹ 303.56 ಶುಲ್ಕ ಕಟ್ಟಿಸಿಕೊಳ್ಳುತ್ತಿತ್ತು. ಹತ್ತು ಜನ ಸದಸ್ಯರ ಒಂದು ತಂಡಕ್ಕೆ ಒಬ್ಬರು ಗೈಡ್ ಇರುತ್ತಿದ್ದರು.

ಇಕೋ ಟೂರಿಸಂ ನಿರ್ವಹಣೆ: ಪ್ರವಾಸಿಗರಿಗೆ ಅನುಕೂಲವಾಗುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಇರುವ ಪ್ರಮುಖ ಪ್ರವಾಸಿ ಸ್ಥಳಗಳ ಪ್ರವೇಶಕ್ಕೆ ಟಿಕೆಟ್‌ ಬುಕಿಂಗ್‌ ಮಾಡಲು ಪ್ರವಾಸಿಗರು ಇಕೋ ಟೂರಿಸಂ ಆಪ್‌ ಮೂಲಕ ಆನ್‌ಲೈನ್ ಶುಲ್ಕ ಪಾವತಿಸಬೇಕಾಗಿತ್ತು. ಸಾವನದುರ್ಗ ಬೆಟ್ಟ ಹತ್ತಲು ಇಕೋ ಟೂರಿಸಂ ನಿಂದ ಶುಲ್ಕ ವಿಧಿಸಲಾಗುತ್ತಿತ್ತು. ಆದರೆ, ಸರಿಯಾದ ನಿರ್ವಹಣೆ ಇರಲಿಲ್ಲ. ಗೈಡ್ ಗಳಿಗೆ ಸರಿಯಾದ ವೇತನ ಇರಲಿಲ್ಲ. ಅರಣ್ಯ ಇಲಾಖೆಗೆ ಕಟ್ಟಬೇಕಾದ ಹಣವನ್ನು ಸರಿಯಾಗಿ ಕಟ್ಟುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಕೋ ಟೂರಿಸ್ಂ ಸೇವೆಯನ್ನು ನಿಲ್ಲಿಸಲಾಗಿದೆ. ಅರಣ್ಯ ಇಲಾಖೆ ಸಾವನದುರ್ಗ ಬೆಟ್ಟಕ್ಕೆ ಬರುವ ಚಾರಣಿಗರಿಗೆ ಸೂಕ್ತ ಸೌಲಭ್ಯ ಹಾಗೂ ರಕ್ಷಣೆ ನೀಡುವ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದು, ಮುಂದೆ ಯಾವುದೇ ರೀತಿ ಅಹಿತಕರ ಘಟನೆಗಳು ನಡೆಯದಂತೆ ಅರಣ್ಯ ಇಲಾಖೆ ಜವಾಬ್ದಾರಿ ವಹಿಸಿಕೊಳ್ಳಲಿದೆ. ಈ ವ್ಯವಸ್ಥೆ ಪೂರ್ಣಗೊಳ್ಳುವವರೆಗೆ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರವಾಸಿಗರ ಸುರಕ್ಷತೆ ಮುಖ್ಯ: ಏಷ್ಯಾದ ಅತಿ ಎತ್ತರದ ಏಕಶಿಲಾ ಬೆಟ್ಟವಾಗಿರುವ ಸಾವನದುರ್ಗಕ್ಕೆ ಅಸಂಖ್ಯೆ ಪ್ರವಾಸಿಗರು ಬರುತ್ತಾರೆ. ಅವರ ಸುರಕ್ಷತೆ ಮುಖ್ಯವಾಗಿರುತ್ತದೆ. ಪ್ರವಾಸಿಗರು ಬೆಟ್ಟ ಹತ್ತಿ, ಇಳಿದು ತೆರಳುವವರೆಗೂ ಅವರ ಸುರಕ್ಷತೆ ಅರಣ್ಯ ಇಲಾಖೆಯ ಜವಾಬ್ದಾರಿಯಾಗಿರುತ್ತದೆ. ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ, ಒಂದು ವೇಳೆ ಅವಘಡಗಳು ಸಂಭವಿಸಿದರೆ ತಕ್ಷಣವೇ ಅವರಿಗೆ ಪ್ರಥಮ ಚಿಕಿತ್ಸೆ ಲಭ್ಯವಾಗುವಂತೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು. ಪ್ರವಾಸಿಗರ ಬೆಲೆಬಾಳುವ ವಸ್ತುಗಳನ್ನು ಹಾಗೂ ಅವರ ವಾಹನಗಳನ್ನು ಸುರಕ್ಷಿತವಾಗಿರಿಸಲು ಅರಣ್ಯ ಇಲಾಖೆ ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯರು ಅಭಿಪ್ರಾಯ ಹಂಚಿಕೊಂಡರು.

ಇಕೋ ಟೂರಿಸಂ ಆನ್‌ಲೈನ್ ಟಿಕೆಟ್‌ ನಿರ್ವಹಿಸುವಾಗ ಸಾವನದುರ್ಗ ಬೆಟ್ಟ ಹತ್ತಲು ಪ್ರತಿದಿನ 100 ಜನ ಪ್ರವಾಸಿಗರಿಗೆ ಅವಕಾಶ ಮಾಡಿಕೊಡಲಾಗುತ್ತಿತ್ತು. ಈಗ ಅರಣ್ಯ ಇಲಾಖೆಯಿಂದ ಆನ್‌ಲೈನ್ ಟಿಕೆಟ್ ನೀಡಲಾಗುವುದು, ದಿನಕ್ಕೆ 200 ಜನ ಪ್ರವಾಸಿಗರಿಗೆ ಅವಕಾಶ ಮಾಡಿಕೊಡಲು ತೀರ್ಮಾನಿಸಲಾಗಿದ್ದು, ದಿನಕ್ಕೆ ಮೂರು ಬಾರಿ ಬೆಟ್ಟ ಹತ್ತಲು ಸಮಯ ನಿಗದಿ ಮಾಡಲಾಗುವುದು. ಹತ್ತು ಜನರ ಒಂದು ತಂಡಕ್ಕೆ ಒಬ್ಬರು ಗೈಡ್ ಇರಲಿದ್ದಾರೆ ಎಂದು ಅರಣ್ಯ ಇಲಾಖೆ ತಿಳಿಸಿದೆ. 

ವ್ಯಾಪಾರಿಗಳಿಗೆ ತೊಂದರೆ

ಆಗಸ್ಟ್ 1ರಿಂದ ಸಾವನದುರ್ಗ ಬೆಟ್ಟ ಹತ್ತಲು ಚಾರಣಿಗರಿಗೆ ನಿಷೇಧ ಮಾಡಿ ಅರಣ್ಯ ಇಲಾಖೆಯಿಂದ ಬ್ಯಾನರ್ ಹಾಕಿರುವುದು.
ಆಗಸ್ಟ್ 1ರಿಂದ ಸಾವನದುರ್ಗ ಬೆಟ್ಟ ಹತ್ತಲು ಚಾರಣಿಗರಿಗೆ ನಿಷೇಧ ಮಾಡಿ ಅರಣ್ಯ ಇಲಾಖೆಯಿಂದ ಬ್ಯಾನರ್ ಹಾಕಿರುವುದು.

ಸಾವನದುರ್ಗ ಪ್ರವಾಸಿಗರ ನೆಚ್ಚಿನ ತಾಣವಾಗಿದ್ದು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಚಾರಣಗರು ಬರುತ್ತಾರೆ. ಈಗ ಇಕೋ ಟೂರಿಸಂ ಆನ್‌ಲೈನ್ ಬುಕಿಂಗ್‌ ಸ್ಥಗಿತ ಮಾಡಿರುವುದರಿಂದ ಬೆಟ್ಟ ಹತ್ತಲು ಆ.1 ರಿಂದ ಯಾರಿಗೂ ಅವಕಾಶ ನೀಡಿಲ್ಲ. ಇದರಿಂದ ಬೆಟ್ಟದ ಹತ್ತಿರ ವ್ಯಾಪಾರಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ವ್ಯಾಪಾರವನ್ನೇ ನಂಬಿಕೊಂಡಿದ್ದ ಹಲವು ಕುಟುಂಬಗಳಿಗೆ ಜೀವನ ನಿರ್ವಹಣೆ ಕಷ್ಟವಾಗಿದೆ. ಕೂಡಲೇ ಅರಣ್ಯ ಇಲಾಖೆ ಬೆಟ್ಟ ಹತ್ತಲು ಅವಕಾಶ ಮಾಡಿಕೊಟ್ಟರೆ ಕುಟುಂಬ ನಿರ್ವಹಣೆ ಸಾಧ್ಯವಾಗುತ್ತದೆ. ಆದಷ್ಟು ಬೇಗ ಪ್ರವಾಸಿಗರಿಗೆ ಬೆಟ್ಟ ಹತ್ತಲು ಅವಕಾಶ ಕಲ್ಪಿಸಿಕೊಡಬೇಕು ಎಂದು ವ್ಯಾಪಾರಿಗಳಾದ ಲೋಕೇಶ್, ಪ್ರಕಾಶ್, ಸ್ವಾಮಿ, ರಾಜು, ಪಾಲನೇತ್ರ ಒತ್ತಾಯಿಸಿದ್ದಾರೆ.

ಇಕೋ ಟೂರಿಸಂ ನವರು ಸಾವನದುರ್ಗ ಬೆಟ್ಟ ಹತ್ತಲು ಆನ್‌ಲೈನ್ ಮೂಲಕ ಶುಲ್ಕ ವಸೂಲಿ ಮಾಡುತ್ತಿದ್ದರು. ಆದರೆ ನಮ್ಮ ಇಲಾಖೆಯ ಜೊತೆಗೆ ಹೊಂದಾಣಿಕೆ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಬೆಟ್ಟದ ಸಂಪೂರ್ಣ ಜವಾಬ್ದಾರಿಯನ್ನು ಅರಣ್ಯ ಇಲಾಖೆಯೇ ವಹಿಸಿಕೊಂಡಿದ್ದು, ಪ್ರಾಯೋಗಿಕವಾಗಿ ಆನ್‌ಲೈನ್ ಬುಕಿಂಗ್ ಆಪ್ ಸಿದ್ದಪಡಿಸಲಾಗುತ್ತಿದೆ. ಅತಿ ಶೀಘ್ರದಲ್ಲೇ ಸಾವನದುರ್ಗ ಬೆಟ್ಟ ಹತ್ತಲು ಪ್ರವಾಸಿಗರಿಗೆ ಅವಕಾಶ ಮಾಡಿಕೊಡಲಾಗುತ್ತದೆ ಮತ್ತು ಪ್ರವಾಸಿಗರ ಸುರಕ್ಷತೆಗೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ.
ರಾಮಕೃಷ್ಣಪ್ಪ, ಜಿಲ್ಲಾ ಅರಣ್ಯ ಇಲಾಖೆ ಡಿಸಿಎಫ್
ಸಾವನದುರ್ಗ ಪ್ರವಾಸಿಗರ ಸ್ವರ್ಗವಾಗಿದ್ದು, ದೇಶವಿದೇಶದಿಂದಲೂ ಪ್ರವಾಸಿಗರು ಬೆಟ್ಟಕ್ಕೆ ಬರುತ್ತಾರೆ. ಈಗ ಆನ್‌ಲೈನ್ ಬುಕಿಂಗ್ ಸ್ಥಗಿತವಾಗಿರುವುದರಿಂದ ಪ್ರವಾಸಿಗರಿಲ್ಲದೆ ಸ್ಥಳೀಯ ವ್ಯಾಪಾರಿಗಳಿಗೆ ಸಾಕಷ್ಟು ತೊಂದರೆಯಾಗಿದೆ. ಕೂಡಲೇ ಅರಣ್ಯ ಇಲಾಖೆಯವರು ಸಾವನದುರ್ಗ ಬೆಟ್ಟಕ್ಕೆ ಪ್ರವೇಶ ನೀಡಬೇಕು. ಸ್ಥಳೀಯರಿಗೆ ಬೆಟ್ಟ ಹತ್ತಲು ಉಚಿತ ಪ್ರವೇಶ ನೀಡಬೇಕು.
ನರಸಿಂಹಯ್ಯ ಶೆಟ್ಟಿ, ಹಂಚಿಕುಪ್ಪೆ ಗ್ರಾಮ ಪಂಚಾಯಿತಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT