ಮೈತ್ರಿಯಿಂದ ಯಾರಿಗೆ ಲಾಭ? ಯಾರಿಗೆ ನಷ್ಟ?

ಮಂಗಳವಾರ, ಜೂನ್ 25, 2019
26 °C
ಉಲ್ಟಾ ಹೊಡೆದ ಕಾಂಗ್ರೆಸ್‌ ಮುನ್ನಡೆ ಲೆಕ್ಕಾಚಾರ: ಸೋತರೂ ಹೆಚ್ಚು ಮತ ಪಡೆದ ಬಿಜೆಪಿ ಅಭ್ಯರ್ಥಿ

ಮೈತ್ರಿಯಿಂದ ಯಾರಿಗೆ ಲಾಭ? ಯಾರಿಗೆ ನಷ್ಟ?

Published:
Updated:

ರಾಮನಗರ: ಜಿಲ್ಲೆಯ ದಶಕಗಳ ರಾಜಕೀಯ ವೈರಿಗಳಾದ ಕಾಂಗ್ರೆಸ್‌ ಹಾಗೂ ಜೆಡಿಎಸ್ ಮೈತ್ರಿಯಿಂದಾಗಿ ಈ ಲೋಕಸಭಾ ಚುನಾವಣೆಯಲ್ಲಿ ಲಾಭ ಆಗಿದ್ದು ಯಾರಿಗೆ? ಮೈತ್ರಿ ರಾಜಕಾರಣ ಸುರೇಶ್ ಗೆಲುವಿಗೆ ಬಲ ತುಂಬಿದೆಯೇ?

ಇಂತಹದ್ದೊಂದು ರಾಜಕೀಯ ಚರ್ಚೆಯು ಸದ್ಯ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ನಡೆದಿದೆ. ‘ಎರಡೂ ಪಕ್ಷಗಳ ನಾಯಕರು, ಕಾರ್ಯಕರ್ತರ ಪರಿಶ್ರಮವೇ ನನ್ನ ಗೆಲುವಿಗೆ ಕಾರಣ’ ಎಂದು ನೂತನ ಸಂಸದ ಡಿ.ಕೆ. ಸುರೇಶ್‌ ಹೇಳಿಕೊಂಡಿದ್ದಾರೆ. ಮೈತ್ರಿ ರಾಜಕಾರಣ ಮೇಲ್ನೋಟಕ್ಕೆ ಲಾಭಕರವಾಗಿದ್ದರೂ ಸುರೇಶ್‌ರ ಗೆಲುವಿನ ಅಂತರ ಕುಸಿದಿರುವುದು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ 2013ರ ಉಪ ಚುನಾವಣೆ ಮೂಲಕ ರಾಜಕೀಯ ಜೀವನ ಆರಂಭಿಸಿದ ಡಿ.ಕೆ. ಸುರೇಶ್‌ ಮೊದಲ ಚುನಾವಣೆಯಲ್ಲಿಯೇ ಬರೋಬ್ಬರಿ 1,37,007 ಮತಗಳ ಅಂತರದಿಂದ ಜಯ ಗಳಿಸಿದ್ದರು. 2014ರಲ್ಲಿ ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಅವರ ಗೆಲುವಿನ ಅಂತರ 2,31,480 ಮತಗಳಿಗೆ ಏರಿತ್ತು. ಆದರೆ ಈ ಚುನಾವಣೆಯಲ್ಲಿ ಆ ಅಂತರ 2,06,870 ಮತಗಳಿಗೆ ಇಳಿಕೆಯಾಗಿದೆ. ಕಳೆದ ಚುನಾವಣೆಗೆ ಹೋಲಿಸಿದರೆ 24,610 ಮತಗಳ ಅಂತರ ಕಡಿಮೆ ಆಗಿದೆ.

2013ರ ಉಪ ಚುನಾವಣೆಯ ಕಣದಲ್ಲಿ ಬಿಜೆಪಿ ಅಭ್ಯರ್ಥಿಯೇ ಇರಲಿಲ್ಲ. ಆ ಚುನಾವಣೆಯಲ್ಲಿ ಒಟ್ಟು 10,53,358 ಮತಗಳು ಚಲಾವಣೆಯಾಗಿದ್ದವು. ಅದರಲ್ಲಿ ಸುರೇಶ್ 5,78,608 (ಶೇ 54.92) ಹಾಗೂ ಜೆಡಿಎಸ್‌ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ 4,41,601 (ಶೇ 41,92) ಮತ ಪಡೆದಿದ್ದರು. ಈ ಎರಡೂ ಪಕ್ಷಗಳು ಪಡೆದ ಮತವೇ ಶೇ 95ರಷ್ಟಿತ್ತು.

2014ರ ಚುನಾವಣೆಯಲ್ಲಿ 14,55,244 ಮತ ಚಲಾವಣೆಯಾದವು. ಸುರೇಶ್‌ 6,52,723 (ಶೇ 44.85), ಬಿಜೆಪಿಯ ಮುನಿರಾಜು ಗೌಡ 4,21,243 (ಶೇ 28.95) ಹಾಗೂ ಜೆಡಿಎಸ್‌ನ ಪ್ರಭಾಕರ ರೆಡ್ಡಿ 3,17,870 (ಶೇ 21.84) ಮತ ಪಡೆದಿದ್ದರು. ಇಲ್ಲಿ ಕಾಂಗ್ರೆಸ್‌ –ಜೆಡಿಎಸ್ ಅಭ್ಯರ್ಥಿಗಳು ಚಲಾವಣೆಯಾದ ಒಟ್ಟು ಮತಗಳಲ್ಲಿ ಶೇ 66.69 ಮತ ತಮ್ಮದಾಗಿಸಿಕೊಂಡಿದ್ದರು.

5 ಲಕ್ಷ ಮುನ್ನಡೆಯ ಲೆಕ್ಕ: ಕಳೆದ ಎರಡು ಚುನಾವಣೆಗಳ ಲೆಕ್ಕಾಚಾರದ ಆಧಾರದ ಮೇಲೆ ಮೈತ್ರಿ ಅಭ್ಯರ್ಥಿಯು ಈ ಚುನಾವಣೆಯಲ್ಲಿ 5 ಲಕ್ಷ ಮತಗಳ ಅಂತರದಲ್ಲಿ ಗೆಲ್ಲಲಿದ್ದಾರೆ ಎನ್ನುವುದು ಕಾಂಗ್ರೆಸ್‌ ಲೆಕ್ಕಾಚಾರವಾಗಿತ್ತು. ಆದರೆ ಮೈತ್ರಿ ನಾಯಕರು ನಿರೀಕ್ಷಿಸಿದ್ದ ಮಟ್ಟದಲ್ಲಿ ಕೈ ಪಾಳಯಕ್ಕೆ ಮನ್ನಡೆ ದೊರೆತಿಲ್ಲ.

ಈ ಬಾರಿ ಚಲಾವಣೆಯಾದ ಒಟ್ಟು ಮತಗಳ ಪೈಕಿ ಶೇ 55 ರಷ್ಟು ಮತಗಳು ಮಾತ್ರ ಕಾಂಗ್ರೆಸ್‌ ಪರವಾಗಿ ಬಿದ್ದಿವೆ. ಬಿಜೆಪಿ ಅಭ್ಯರ್ಥಿ ಶೇ 41.5ರಷ್ಟು ಮತಗಳನ್ನು ತಮ್ಮತ್ತ ಸೆಳೆಯುವಲ್ಲಿ ಯಶಸ್ವಿ ಆಗಿದ್ದಾರೆ.

ಕಾಂಗ್ರೆಸ್‌ ಲೆಕ್ಕ ತಪ್ಪಿದ್ದು ಎಲ್ಲಿ?: ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಲ್ಪ ಮತಗಳು ಪಡೆದಿದ್ದ ರಾಮನಗರ, ಕನಕಪುರ, ಮಾಗಡಿ, ಚನ್ನಪಟ್ಟಣ ಹಾಗೂ ಕುಣಿಗಲ್‌ನಲ್ಲಿ ಮೈತ್ರಿ ಅಭ್ಯರ್ಥಿಗೆ ಭಾರಿ ಮುನ್ನಡೆ ಸಿಗಲಿದೆ ಎಂಬುದು ಕಾಂಗ್ರೆಸ್‌ ಲೆಕ್ಕಾಚಾರವಾಗಿತ್ತು. ಆದರೆ ಈ ಪೈಕಿ ಕನಕಪುರದಲ್ಲಿ ಮಾತ್ರ ನಿರೀಕ್ಷೆಯಷ್ಟು ಮುನ್ನಡೆ ಸಿಕ್ಕಿದೆ. ಮಾಗಡಿಯಲ್ಲಿ ಹಾಲಿ ಮಾಜಿ ಶಾಸಕರಿಬ್ಬರೂ ಜೆಡಿಎಸ್‌–ಕಾಂಗ್ರೆಸ್‌ನವರೇ ಆದ ಕಾರಣ ಇಲ್ಲಿಯೂ ಹೆಚ್ಚು ಮುನ್ನಡೆಯನ್ನು ಕಾಂಗ್ರೆಸ್ ನಿರೀಕ್ಷೆ ಮಾಡಿತ್ತು. ಆದರೆ ಇಲ್ಲಿ ಬಿಜೆಪಿಯು 65,161 ಮತ ಗಳಿಕೆ ಮಾಡುವ ಮೂಲಕ ಮೈತ್ರಿ ಪಕ್ಷಗಳಿಗೆ ತಕ್ಕ ಹೊಡೆತವನ್ನೇ ನೀಡಿದೆ.

ಕಾಂಗ್ರೆಸ್‌ಗೆ ಆಘಾತ ನೀಡಿದ ಇನ್ನೊಂದು ಕ್ಷೇತ್ರ ಎಂದರೆ ಅದು ರಾಮನಗರ. ಇಲ್ಲಿ ಕಾಂಗ್ರೆಸ್ 1 ಲಕ್ಷ ಮತ ಮುನ್ನಡೆಯ ನಿರೀಕ್ಷೆ ಹೊಂದಿತ್ತು. ಇಲ್ಲಿ ಬಿಜೆಪಿಯು 46,328 ಮತ ಗಳಿಕೆ ಮಾಡಿರುವುದು ಕೈ ಪಾಳಯಕ್ಕೆ ಅರಗಿಸಿಕೊಳ್ಳಲು ಆಗಿಲ್ಲ. ಕಳೆದ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಇಲ್ಲಿ ಬಿಜೆಪಿ ಅಭ್ಯರ್ಥಿಗಳ ಮತ ಗಳಿಕೆ ಅಷ್ಟಕ್ಕಷ್ಟೇ ಆಗಿತ್ತು. ಕಳೆದ ಉಪ ಚುನಾವಣೆಯಲ್ಲಿ ಇಲ್ಲಿ ಬಿಜೆಪಿ ಅಭ್ಯರ್ಥಿಯೇ ಚುನಾವಣಾ ಕಣದಿಂದ ಹಿಂದೆ ಸರಿದು ಪಕ್ಷಕ್ಕೆ ಹೊಡೆತ ನೀಡಿದ್ದರು. ಆದರೂ ಈ ಕ್ಷೇತ್ರದ ಮತದಾರರು ಬಿಜೆಪಿಯ ಪರ ಒಲವು ವ್ಯಕ್ತಪಡಿಸಿದ್ದಾರೆ.

ಬಿಜೆಪಿಗೆ ನಿರಾಸೆಯಲ್ಲೂ ಸಮಾಧಾನ
ಬೆಂಗಳೂರು ದಕ್ಷಿಣ ಹಾಗೂ ರಾಜರಾಜೇಶ್ವರಿ ಕ್ಷೇತ್ರಗಳಲ್ಲಿ ಬಿಜೆಪಿಗೆ ಸಿಕ್ಕಿರುವ ಮುನ್ನಡೆಯು ನಿರೀಕ್ಷೆಯೇ ಆಗಿದೆ. ಆದರೆ ಇದರೊಟ್ಟಿಗೆ ಆನೇಕಲ್‌ ವಿಧಾನಸಭಾ ಕ್ಷೇತ್ರದಲ್ಲಿಯೂ ಕಮಲ ಪಾಳಯಕ್ಕೆ ಉತ್ತಮ ಮತ ಸಿಗಬಹುದು ಎನ್ನುವ ನಿರೀಕ್ಷೆ ಇತ್ತು. ಕಳೆದ ಚುನಾವಣೆಯಲ್ಲಿ ಇಲ್ಲಿ ಬಿಜೆಪಿಗೇ ಮುನ್ನಡೆ ದೊರೆತಿತ್ತು. ಆದರೆ ಈ ಬಾರಿ ಡಿ.ಕೆ. ಸುರೇಶ್‌ಗೆ 1,818 ಮತಗಳ ಅಲ್ಪ ಮುನ್ನಡೆ ಸಿಕ್ಕಿದೆ.

ಚನ್ನಪಟ್ಟಣ ಕ್ಷೇತ್ರದಲ್ಲಿ ಸಿ.ಪಿ. ಯೋಗೇಶ್ವರ್‌ ಕಾರಣಕ್ಕೆ ಉತ್ತಮ ಮುನ್ನಡೆ ಸಿಗಬಹುದು ಎಂದು ಬಿಜೆಪಿ ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ ಮುನ್ನಡೆ ಸಿಗದೇ ಹೋದರೂ ಮತ ಗಳಿಕೆಯ ಪ್ರಮಾಣ ಕಳೆದ ಚುನಾವಣೆಗಿಂತ ನಾಲ್ಕು ಪಟ್ಟು ಜಾಸ್ತಿ ಆಗಿರುವುದು ಸಮಾಧಾನವನ್ನೇ ತಂದಿದೆ.

2014ರ ಲೋಕಸಭಾ ಚುನಾವಣೆಯಲ್ಲಿ ಪಡೆದ ಮತಗಳ ಕ್ಷೇತ್ರವಾರು ವಿವರ

ಕ್ಷೇತ್ರ ಪ್ರಭಾಕರ ರೆಡ್ಡಿ (ಜೆಡಿಎಸ್‌) ಮುನಿರಾಜು ಗೌಡ (ಬಿಜೆಪಿ) ಡಿ.ಕೆ.ಸುರೇಶ್ (ಕಾಂಗ್ರೆಸ್)

ಕುಣಿಗಲ್ 32,929 32,303 64,763
ಆರ್ ಆರ್ ನಗರ 27,656 1,05,395 73,626
ಬೆಂಗಳೂರು ದಕ್ಷಿಣ 22,698 1,34,876 98,841
ಆನೇಕಲ್ 16,889 86,230 79,611
ಮಾಗಡಿ 64,694 20,168 74,933
ರಾಮನಗರ 59,487 13,317 69,214
ಕನಕಪುರ 38,937 11,843 1,10,414
ಚನ್ನಪಟ್ಟಣ 54,538 17,018 81,224
ಪೋಸ್ಟಲ್ 00042 00093 00097
ಒಟ್ಟು 3,17,870 4,21,243 6,52,723

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 5

  Happy
 • 2

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !