ಸೋಮವಾರ, ಸೆಪ್ಟೆಂಬರ್ 20, 2021
23 °C
ಮನೆಮನೆಗೆ ತೆರಳಿ ಮಾಹಿತಿ ಸಂಗ್ರಹ: ಕಾರ್ಯಕರ್ತರಿಗೆ ತರಬೇತಿ

ಅಪೌಷ್ಠಿಕ ಮಕ್ಕಳ ಸಮೀಕ್ಷೆ ಶೀಘ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಜಿಲ್ಲೆಯಲ್ಲಿ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳ ಸಮೀಕ್ಷೆಗೆ ಜಿಲ್ಲಾ ಪಂಚಾಯಿತಿ ಹಾಗೂ ಆರೋಗ್ಯ ಇಲಾಖೆಯು ಸಿದ್ಧತೆ ನಡೆಸಿದೆ. ಇದಕ್ಕಾಗಿ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ತರಬೇತಿಯು ಆರಂಭವಾಗಿದೆ.

ಹುಟ್ಟಿನಿಂದ ಆರು ವರ್ಷದ ಒಳಗಿನ ಎಲ್ಲ ಮಕ್ಕಳನ್ನು ಸಮೀಕ್ಷೆಗೆ ಒಳಪಡಿಸಿ, ಅವರಲ್ಲಿ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಪತ್ತೆ ಮಾಡುವುದು ಈ ಸಮೀಕ್ಷೆ ಉದ್ದೇಶವಾಗಿದೆ. ಇದರಿಂದ ಆ ಮಕ್ಕಳ ಕಾಳಜಿ ವಹಿಸಲು ಸಾಧ್ಯವಾಗಲಿದೆ.

ಏತಕ್ಕೆ ಸಮೀಕ್ಷೆ: ರಾಷ್ಟ್ರೀಯ ಆರೋಗ್ಯ ಇಲಾಖೆಯು ಜಿಲ್ಲಾವಾರು ಮಾದರಿ ಸಮೀಕ್ಷೆ ನಡೆಸಿದ್ದು, ಅದರ ಅಂಕಿ–ಅಂಶಗಳನ್ನು ಬಿಡುಗಡೆ ಮಾಡಿದೆ. ಆದರೆ ಈ ಅಂಶಗಳಿಗೂ ರಾಜ್ಯ ಸರ್ಕಾರದ ಸಂಸ್ಥೆಗಳು ನಡೆಸಿರುವ ಸಮೀಕ್ಷೆಗಳಿಗೂ ಅಜಗಜಾಂತರ ವ್ಯತ್ಯಾಸ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ವಸ್ತುಸ್ಥಿತಿ ಅರಿಯಲು ಆರೋಗ್ಯ ಇಲಾಖೆಯು ನಿಖರವಾದ ಸಮೀಕ್ಷೆಗೆ ಮುಂದಾಗಿದೆ.

‘ನಮ್ಮ ಅಂಕಿ–ಅಂಶಗಳ ಪ್ರಕಾರ ಜಿಲ್ಲೆಯಲ್ಲಿನ ಕೇವಲ 0.86ರಷ್ಟು ಮಕ್ಕಳು ಮಾತ್ರ ಅಪೌಷ್ಠಿಕತೆ ತೊಂದರೆ ಎದುರಿಸುತ್ತಿದ್ದಾರೆ. ಆದರೆ ರಾಷ್ಟ್ರೀಯ ಸರ್ವೆಯಲ್ಲಿ ಈ ಪ್ರಮಾಣವು ಶೇ 22ರಷ್ಟಿದೆ. ಎರಡರ ನಡುವೆ ತುಂಬಾ ವ್ಯತ್ಯಾಸ ಇದೆ. ಹೀಗಾಗಿ ಆಂದೋಲನದ ಮಾದರಿಯಲ್ಲಿ ಸಮೀಕ್ಷೆ ನಡೆಸಲು ನಿರ್ಧರಿಸಿದ್ದೇವೆ’ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಪಿ. ಮುಲ್ಲೈ ಮುಹಿಲನ್‌.

ಹೇಗೆ ನಡೆಯಲಿದೆ ಸಮೀಕ್ಷೆ: ಅಂಗನವಾಡಿ, ಆಶಾ ಕಾರ್ಯಕರ್ತರು ಹಾಗೂ ಆರೋಗ್ಯ ಇಲಾಖೆಯ ಎಲ್ಲ ಸಿಬ್ಬಂದಿ ಈ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ವೈದ್ಯಾಧಿಕಾರಿಯು ಇದರ ನೇತೃತ್ವ ವಹಿಸಲಿದ್ದಾರೆ. ಪ್ರತಿ ಮನೆಗೆ ತೆರಳಿ ಆರು ವರ್ಷದ ಪ್ರಾಯದ ಮಕ್ಕಳ ವಿವರ, ಅವರ ತೂಕ ಮತ್ತು ಎತ್ತರ ಹಾಗೂ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮಾಹಿತಿ ಪಡೆಯಲಿದ್ದಾರೆ.

ಜೂನ್‌ನಲ್ಲಿ ಶಾಲೆಗಳು ಹಾಗೂ ಅಂಗನವಾಡಿಗಳು ಆರಂಭವಾಗಲಿವೆ. ಅಲ್ಲಿ 3ರಿಂದ 6 ವರ್ಷ ಪ್ರಾಯದ ಎಲ್ಲ ಮಕ್ಕಳ ವಿವರಗಳೂ ಸಿಗಲಿವೆ. ಮೂರು ವರ್ಷದ ಒಳಗಿನ ಮಕ್ಕಳ ವಿವರಗಳನ್ನು ಅವರ ಮನೆಗಳಿಗೆ ತೆರಳಿ ಕಲೆ ಹಾಕಲು ನಿರ್ಧರಿಸಲಾಗಿದೆ.

ಲೆಕ್ಕ ಹೇಗೆ?

ಅಪೌಷ್ಠಿಕತೆಯ ಲೆಕ್ಕವನ್ನು ಎರಡು ಮಾನದಂಡಗಳ ಮೂಲಕ ಅಳೆಯಲಾಗುತ್ತದೆ. ಮೊದಲನೆಯದಾಗಿ ಮಗುವಿನ ವಯಸ್ಸು ಮತ್ತು ಎತ್ತರವನ್ನು ತಾಳೆ ಹಾಕಲಾಗುತ್ತದೆ. ಆ ಮಗುವು ವಯಸ್ಸಿಗೆ ತಕ್ಕಂತೆ ದೈಹಿಕವಾಗಿ ಬೆಳವಣಿಗೆ ಆಗಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ. ನಂತರದಲ್ಲಿ ಮಗುವಿನ ಎತ್ತರ ಮತ್ತು ತೂಕವನ್ನು ಹೋಲಿಕೆ ಮಾಡಲಾಗುತ್ತದೆ. ಇದರಿಂದ ಮಗು ಎಷ್ಟು ಕಡಿಮೆ ತೂಕ ಇದೆ ಎನ್ನುವುದರ ಮೇಲೆ ಅಪೌಷ್ಠಿಕತೆಯ ಮಟ್ಟವನ್ನು ನಿರ್ಧರಿಸಲಾಗುತ್ತದೆ ಎನ್ನುತ್ತಾರೆ ಮುಲ್ಲೈ ಮುಹಿಲನ್‌.

ವಾರದ ಕಾಲ ತರಬೇತಿ

ಸಮೀಕ್ಷೆಗೆಂದು ಪ್ರತಿ ಬ್ಲಾಕ್‌ಗೆ ಮೂರು ತಂಡಗಳನ್ನು ರಚನೆ ಮಾಡಲಾಗಿದೆ. ಈ ತಂಡಗಳಲ್ಲಿನ ಆಶಾ, ಅಂಗನವಾಡಿ ಕಾರ್ಯಕರ್ತರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ನಗರದ ಬಿಇಒ ಕಚೇರಿ ಬಳಿಕ ಸರ್ಕಾರಿ ಶಾಲೆಯಲ್ಲಿ ಸದ್ಯ ತರಬೇತಿ ನಡೆದಿದೆ.

ಒಂದು ವಾರದ ಕಾಲದ ತರಬೇತಿ ಇದಾಗಿದ್ದು, ಸಮೀಕ್ಷೆಯ ರೂಪುರೇಷೆ ಮತ್ತು ಅನುಸರಿಸಬೇಕಾದ ಕ್ರಮಗಳು, ದತ್ತಾಂತ ಸಂಗ್ರಹದ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.