‘ಪರಿಹಾರ ನಿಗದಿಯಲ್ಲಿ ಅಧಿಕಾರಿಗಳ ತಾರತಮ್ಯ’

ಗುರುವಾರ , ಏಪ್ರಿಲ್ 25, 2019
22 °C
ಮಂಡ್ಯ ಜಿಲ್ಲೆಯ ಹಳೇ ಬೂದನೂರು ಗ್ರಾಮಸ್ಥರಿಂದ ಎನ್‌ಎಚ್‌ಎಐ ಕಚೇರಿಗೆ ಮುತ್ತಿಗೆ

‘ಪರಿಹಾರ ನಿಗದಿಯಲ್ಲಿ ಅಧಿಕಾರಿಗಳ ತಾರತಮ್ಯ’

Published:
Updated:
Prajavani

ರಾಮನಗರ: ರಾಷ್ಟ್ರೀಯ ಹೆದ್ದಾರಿ 275ರ ವಿಸ್ತರಣೆಗೆ ಸ್ವಾಧೀನಪಡಿಸಿಕೊಳ್ಳಲಾದ ಜಮೀನು ಮತ್ತು ಕಟ್ಟಡಗಳಿಗೆ ಪರಿಹಾರ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿ ಮಂಡ್ಯ ಜಿಲ್ಲೆಯ ಹಳೇ ಬೂದನೂರು ಗ್ರಾಮಸ್ಥರು ಗುರುವಾರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಇಲ್ಲಿನ ಬಸವನಪುರ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಕಚೇರಿಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು, ಯೋಜನಾ ನಿರ್ದೇಶಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ‘ಪ್ರಸ್ತುತ ಮಾರುಕಟ್ಟೆ ಬೆಲೆಯನ್ನು ಪರಿಗಣಿಸದೇ ಒಬ್ಬರಿಗೊಂದು ರೀತಿಯಲ್ಲಿ ಪರಿಹಾರ ನಿಗದಿ ಮಾಡಿದ್ದೀರಿ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಮದ ಮುಖಂಡ ಬೂದನೂರು ಬೊಮ್ಮಯ್ಯ ಎಂಬುವರು ಮಾತನಾಡಿ ‘ಪ್ರಾಧಿಕಾರದ ಅಧಿಕಾರಿಗಳು ಭೂಸಂತಸ್ಥರಿಗೆ ಮೊದಲು ನೋಟಿಸ್ ನೀಡಿ, ದಾಖಲೆ ಸಂಗ್ರಹಿಸಿ, ಮಾಲೀಕರ ಸಮ್ಮುಖದಲ್ಲಿ ಸರ್ವೆ ನಡೆಸಬೇಕು. ನಂತರ ಮಾರುಕಟ್ಟೆ ಮೌಲ್ಯದಂತೆ ಪರಿಹಾರ ನಿಗದಿ ಮಾಡಬೇಕು. ಆದರೆ ಅಧಿಕಾರಿಗಳು ನೇರವಾಗಿ ಮಾಲೀಕರ ಬ್ಯಾಂಕ್ ಖಾತೆಗೆ ಆರ್‌ಟಿಜಿಎಸ್ ಮೂಲಕ ಪರಿಹಾರ ಹಾಕಿ ನಂತರ ಅವಾರ್ಡ್ ನೋಟಿಸ್ ನೀಡಿದ್ದಾರೆ’ ಎಂದು ದೂರಿದರು.

‘ಗ್ರಾಮದಲ್ಲಿ ಶಿವಲಿಂಗಯ್ಯ ಎಂಬುವರಿಗೆ ಕೊಳವೆ ಬಾವಿ ಇಲ್ಲ. ಆದರೂ ಅಧಿಕಾರಿಗಳು ಇವರಿಗೂ ಕೊಳವೆ ಬಾವಿಗಾಗಿ ₨6 ಲಕ್ಷ ಪರಿಹಾರವನ್ನು ನೀಡಿದ್ದಾರೆ. ರಸ್ತೆ ವಿಸ್ತರಣೆ ನೆಪದಲ್ಲಿ ಭ್ರಷ್ಟಾಚಾರ ನಡೆದಿರುವುದಕ್ಕೆ ಇದೊಂದು ಉದಾಹರಣೆ’ ಎಂದು ಗ್ರಾಮಸ್ಥರು ದೂರಿದರು.

ಈ ವಿಚಾರಕ್ಕೆ ಸಂಬಂಧಿಸಿ ಯೋಜನಾ ನಿರ್ದೇಶಕ ಶ್ರೀಧರ್ ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು. ‘ನಾನು ಈಚೆಗಷ್ಟೇ ಬಂದಿದ್ದೇನೆ. ಇಂತಹ ಸಾವಿರಾರು ಅರ್ಜಿಗಳು ಬಂದಿದ್ದು, ಎಲ್ಲವನ್ನು ಪರಿಶೀಲಿಸಲು ಆಗದು’ ಎಂದು ಶ್ರೀಧರ್ ಸಮಜಾಯಿಷಿ ನೀಡುವ ಯತ್ನ ಮಾಡಿದರು. ವಿಶೇಷ ಭೂ ಸ್ವಾಧೀನಾಧಿಕಾರಿ ಜಯಮಾಧವ ಗ್ರಾಮಸ್ಥರನ್ನು ಸಮಾಧಾನಪಡಿಸುವ ಪ್ರಯತ್ನ ಮಾಡಿದರು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಗ್ರಾಮಸ್ಥರ ದಾಖಲೆಗಳನ್ನು ಪರಿಶೀಲನೆ ಮಾಡಿದ ಶ್ರೀಧರ್ ‘ಆಸ್ತಿಗಳ ಮರು ಮೌಲ್ಯಮಾಪನಕ್ಕೆ ಶೀಘ್ರದಲ್ಲಿಯೇ ಅಧಿಕಾರಿಗಳನ್ನು ಹಳೇಬೂದನೂರಿಗೆ ಕಳುಹಿಸಿಕೊಡುವ ಭರವಸೆ ನೀಡಿದರು.

ಹಳೇಬೂದನೂರು ಗ್ರಾಮಸ್ಥರಾದ ಮಾದಪ್ಪ, ಬಿ.ಸಿ. ಸುರೇಶ್, ರಾಜೇಶ್, ಮಹದೇವ, ಕುಮಾರ, ಸಿದ್ದೇಗೌಡ, ಬಿ.ಸಿ. ಮಾದಪ್ಪ, , ತಾಯಮ್ಮ ಇದ್ದರು.

ಮತದಾನ ಬಹಿಷ್ಕಾರದ ಎಚ್ಚರಿಕೆ
‘ಅಧಿಕಾರಿಗಳು ಕ್ರಮ ಕೈಗೊಳ್ಳದೇ ಹೋದಲ್ಲಿ ಮುಂಬರುವ ಲೋಕಸಭಾ ಚುನಾವಣೆಯ ಮತದಾನ ಬಹಿಷ್ಕಾರ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಸಿದರು.

‘ಮರು ಮೌಲ್ಯ ಮಾಪನ ನಡೆಸಿ, ಸೂಕ್ತ ರೀತಿಯಲ್ಲಿ ಪರಿಹಾರವನ್ನು ನೀಡಬೇಕು. ಇಲ್ಲವಾದರೆ ರಸ್ತೆ ಕಾಮಗಾರಿ ನಡೆಸಲು ಸಹ ಅವಕಾಶ ನೀಡುವುದಿಲ್ಲ’ ಎಂದು ಎಚ್ಚರಿಸಿದರು.

*
ಹಳೇ ಬೂದನೂರು ಗ್ರಾಮಸ್ಥರ ದೂರಿನ ಹಿನ್ನೆಲೆಯಲ್ಲಿ ಅಲ್ಲಿನ ಆಸ್ತಿಗಳ ಮರು ಮೌಲ್ಯಮಾಪನ ಮಾಡಲಾಗುವುದು. ಯುಗಾದಿ ನಂತರ ಅಧಿಕಾರಿಗಳನ್ನು ಕಳುಹಿಸಿ ಕೊಡಲಾಗುವುದು.
-ಶ್ರೀಧರ್, ಯೋಜನಾ ನಿರ್ದೇಶಕ, ಎನ್‌ಎಚ್‌ಎಐ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !