ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಮ್ಯಾಂಗೋ ಪಿಕ್ಕಿಂಗ್ ಟೂರಿಸಂ:‘ನೇರ ಮಾರುಕಟ್ಟೆ ವ್ಯವಸ್ಥೆಯಿಂದ ಬೆಳೆಗೆ ಉತ್ತಮ ದರ’

ಕಾರ್ಯಕ್ರಮದದಲ್ಲಿ ಪ್ರಗತಿಪರ ಮಾವು ಬೆಳೆಗಾರ ಬಿ.ಸಿ. ವಾಸು
Last Updated 19 ಮೇ 2019, 14:08 IST
ಅಕ್ಷರ ಗಾತ್ರ

ರಾಮನಗರ : ತೋಟಗಾರಿಕೆ ಇಲಾಖೆ ವತಿಯಿಂದ ಬೆಂಗಳೂರಿನ 40ಕ್ಕೂ ಅಧಿಕ ಮಾವು ಪ್ರಿಯರು 'ಮ್ಯಾಂಗೋ ಪಿಕ್ಕಿಂಗ್ ಟೂರಿಸಂ' ಕಾರ್ಯಕ್ರಮದಡಿ ಇಲ್ಲಿನ ಬಿಳಗುಂಬ ಗ್ರಾಮದ ಪ್ರಗತಿಪರ ರೈತ ವಾಸು ಅವರ ತೋಟಕ್ಕೆ ಭಾನುವಾರ ಭೇಟಿ ನೀಡಿ, ಮಾವಿನ ಹಣ್ಣುಗಳನ್ನು ಕೊಂಡುಕೊಂಡರು.

ಮಾವಿನ ತೋಟವನ್ನು ಸುತ್ತಾಡಿದ ಮಾವು ಪ್ರಿಯರು ವಿವಿಧ ತಳಿಯ ಮಾವಿನ ಮರಗಳ ಪರಿಚಯವನ್ನು ಮಾಡಿಕೊಂಡರು. 8 ಎಕರೆ ಪ್ರದೇಶದಲ್ಲಿ ಬಾದಾಮಿ, ಮಲಗೋವಾ, ರಸಪುರಿ, ಸೇಂದೂರ, ಮಲ್ಲಿಕಾ, ರತ್ನಗಿರಿಯ ಆಲ್ಪಾನ್ಸ್, ದಸೇರಿ ಸಿಂಧೂ, ಕೇಸರಿ, ಕಾಲಪಾಡ್, ಇಮಾಮ್ ಪಾಸ್, ಕೊಂಕಣ ರುಚಿ, ಅಮರಪಲ್ಲ ಸೇರಿದಂತೆ ಆಸ್ಟ್ರೇಲಿಯಾದ 'ಮಾಯಾ' ಮತ್ತು ಸ್ವಿಟ್ಜರ್ ಲ್ಯಾಂಡ್ ನ 'ಲಿಲ್ಲಿ' ತಳಿಯ ಮಾವುಗಳನ್ನು ಪ್ರಗತಿಪರ ಮಾವು ಬೆಳೆಗಾರ ಬಿ.ಸಿ. ವಾಸು ಪರಿಚಯ ಮಾಡಿಕೊಟ್ಟರು.

‘ಐದು ವರ್ಷಗಳಿಂದ 100 ವರ್ಷಗಳ ಮಾವಿನ ಮರಗಳು ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ಮಾವಿನ ಗಿಡಗಳಿವೆ. ತಲಾ 1 ಟನ್ ಹಣ್ಣುಗಳನ್ನು ನೀಡುವ 30 ಮರಗಳಿವೆ. ವರ್ಷಕ್ಕೆ ₹20 ಲಕ್ಷ ಆದಾಯ ನಿರೀಕ್ಷೆಯಿದ್ದು, ಈಗಾಗಲೇ ₹10 ಲಕ್ಷ ಸಂಪಾದಿಸಿದ್ದೇನೆ. 8 ಲಕ್ಷ ಮೌಲ್ಯದ ಮಾವಿನ ಹಣ್ಣುಗಳನ್ನು ವಿವಿಧೆಡೆ ನಡೆಯುವ ಮಾವು ಮೇಳಗಳಿಗೆ ಕಳಿಸಿಕೊಟ್ಟಿದ್ದೇನೆ. ಇನ್ನು ತೋಟದಲ್ಲಿ 20ಕ್ಕೂ ಅಧಿಕ ಟನ್ ಮಾವಿನ ಬೆಳೆ ಇದೆ’ ಎಂದು ವಾಸು ಮಾಹಿತಿ ನೀಡಿದರು.

‘ಪ್ರತಿಯೊಬ್ಬ ರೈತನು ತಾನು ಬೆಳೆದ ಬೆಳೆಗೆ ತಕ್ಕ ಪ್ರತಿಫಲ ಪಡೆಯಲು ನೇರ ಮಾರುಕಟ್ಟೆ ವ್ಯವಸ್ಥೆ ಅಳವಡಿಸಿಕೊಳ್ಳಬೇಕು. ಇದರಿಂದ ಅಧಿಕ ಲಾಭ ಪಡೆಯಲು ಸಾಧ್ಯ. ಉತ್ತಮ ಹಣ್ಣು ನೀಡುವ ಒಂದು ಮಾವಿನ ಮರವನ್ನು ₹3 ಲಕ್ಷಕ್ಕೆ ಗುತ್ತಿಗೆ ನೀಡುತ್ತಿದ್ದೆ. ಅದೇ ಮಾವಿನ ಮರದ ಹಣ್ಣುಗಳನ್ನು ನೇರ ಮಾರುಕಟ್ಟೆ ವ್ಯವಸ್ಥೆಯಿಂದ ₹7 ಲಕ್ಷ ಸಂಪಾದನೆ ಮಾಡಿದ್ದೇನೆ’ ಎಂದು ತಿಳಿಸಿದರು.

ರೈತ ಬೆಳೆದ ಬೆಳೆಯನ್ನು ಎಪಿಎಂಸಿಗೆ ನೀಡಿದರೆ ಶೇ 50ರಷ್ಟು ಲಾಭ. ಅದನ್ನೆ ನೇರ ಮಾರುಕಟ್ಟೆಯ ಮೂಲಕ ಮಾರಾಟ ಮಾಡಿದರೆ ಶೇ 80ರಷ್ಟು ಲಾಭ ದೊರೆಯುತ್ತದೆ. ಇನ್ನು ಮಾವು ಬೆಳೆಯುವಾಗ ಗಿಡಗಳಿಗೆ ನಿಯಮಿತ ನೀರು, ಸಾವಯವ ಗೊಬ್ಬರ ಜತೆಗೆ ನಿರ್ವಹಣೆ ಮಾಡಬೇಕು. ಕೀಟ ಭಾದೆಯಿಂದ ಕಾಯಿಗಳನ್ನು ರಕ್ಷಿಸಿಕೊಳ್ಳಬೇಕು ಎಂದು ತಿಳಿಸಿದರು.

ರೈತಪರ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡರೂ ಬದುಕು ಹಸನಾಗಿಲ್ಲ. 8 ವರ್ಷಗಳ ಹಿಂದೆ ಮತ್ತೆ ವ್ಯವಸ್ಥಿತವಾಗಿ ಕೃಷಿ ಆರಂಭಿಸಿ, ನೇರ ಮಾರುಕಟ್ಟೆ ಪದ್ದತಿಯನ್ನು ಅಳವಡಿಸಿಕೊಂಡು ಉತ್ತಮ ಸಂಪಾದನೆ ಮಾಡುತ್ತಿದ್ದೇನೆ. ರೈತರಲ್ಲಿ ತಾಳ್ಮೆ ಇರಬೇಕು. ನೂರು ಮಾವಿನ ಗಿಡಗಳನ್ನು ವ್ಯವಸ್ಥಿತವಾಗಿ ಬೆಳೆಸಿಕೊಂಡರೆ ಉತ್ತಮ ಜೀವನ ನಿರ್ವಹಣೆ ಮಾಡಬಹುದು ಎಂದು ತಿಳಿಸಿದರು.

ನಗರ ಜೀವನಕ್ಕೆ ಒಗ್ಗಿಕೊಂಡಿರುವ ನಮಗೆ ವಾಸು ಅವರ ಮಾವಿನ ತೋಟವನ್ನು ನೋಡಿ ಸಂತೋಷವಾಯಿತು. ರೈತರ ಹೊಲಗಳಿಗೆ ಗ್ರಾಹಕರನ್ನು ಕರೆದುಕೊಂಡು ಹೋಗಿ ರಸಪೂರಿ, ಬಾದಾಮಿ, ಸಿಂಧೂರ, ಮಲಗೋಬ, ತೋತಾಪುರಿ ಹೀಗೆ ನಾನಾ ಬಗೆಯ ತಮಗೆ ಇಷ್ಟ ಬಂದ ಮಾವಿನ ಹಣ್ಣನ್ನು ನೇರವಾಗಿ ಆಯ್ಕೆ ಮಾಡಿ ಖರೀದಿಸುವ ವ್ಯವಸ್ಥೆ ಮಾಡಿರುವ ತೋಟಗಾರಿಕೆ ಇಲಾಖೆಯ ಕಾರ್ಯ ಶ್ಲಾಘನೀಯ ಎಂದು ಭೂಷಣ್ ತಿಳಿಸಿದರು.

ಇಂತಹ ಪ್ರವಾಸಿಂದ ರೈತರು ಮತ್ತು ಗ್ರಾಹಕರ ಮಧ್ಯೆ ಉತ್ತಮ ಬಾಂಧವ್ಯ ಬೆಳೆಯುತ್ತದೆ. ಸ್ವದೇಶಿ ಮಾರುಕಟ್ಟೆಯನ್ನು ವಿಸ್ತರಣೆಯಾಗುತ್ತದೆ. ತಳಿಗಳ ಬಗ್ಗೆ ಮಾಹಿತಿ ತಿಳಿಯುತ್ತದೆ ಎಂದು ವಿಜಿಶಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT