ಬುಧವಾರ, ಮೇ 25, 2022
30 °C
ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ

ರಾಮನಗರ: ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಮೇಕೆಗಳ ಮೆರವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಬಹು ನಿರೀಕ್ಷಿತ ಮೇಕೆದಾಟು ಯೋಜನೆ ಅನುಷ್ಠಾನ ಮಾಡಲು ಸರ್ಕಾರವನ್ನು ಒತ್ತಾಯಿಸಿ ಡಿಸೆಂಬರ್‌ನಲ್ಲಿ ಮೇಕೆಗಳ ಮೆರವಣಿಗೆ ನಡೆಸಲಾಗುವುದು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದರು.

ನಗರದ ಐಜೂರು ವೃತ್ತದಲ್ಲಿ ಮೇಕೆದಾಟು ಯೋಜನೆಗೆ ಒತ್ತಾಯಿಸಿ ಕರುನಾಡ ಸೇನೆ ವತಿಯಿಂದ ಭಾನುವಾರ ನಡೆದ ಪ್ರತಿಭಟನೆಯ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಮೇಕೆದಾಟು ಯೋಜನೆ ಅನುಷ್ಠಾನದ ವಿಚಾರದಲ್ಲಿ ರಾಜ್ಯದ ಪ್ರಮುಖ ಪಕ್ಷಗಳು ಹೈಡ್ರಾಮ ಮಾಡುತ್ತಿವೆ ಎಂದು ಆರೋಪಿಸಿದರು.

‘ಮೇಕೆದಾಟು ಯೋಜನೆಗೆ ಒತ್ತಾಯಿಸಿ ನಮ್ಮ ಸಂಘಟನೆಯೂ ಸೇರಿದಂತೆ ವಿವಿಧ ಸಂಘಟನೆಗಳು ಹೋರಾಟ ಮಾಡಿವೆ. ಆದರೆ ರಾಜಕೀಯ ಪಕ್ಷಗಳು ಒಮ್ಮೆಯಾದರೂ ಹೋರಾಟ ಮಾಡಿವೆಯೇ? ಬಿಜೆಪಿ ಅಧಿಕಾರಕ್ಕೆ ಬಂದರೆ ಉಳಿದ
ಪಕ್ಷಗಳು ಯೋಜನೆಗೆ ಒತ್ತಾಯಿಸುತ್ತವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಿಜೆಪಿ ಸಹ ಅದನ್ನೆ ಮಾಡುತ್ತದೆ. ಯಾರಿಗೂ ಈ ಯೋಜನೆ ಬಗ್ಗೆ ಬದ್ಧತೆ ಇಲ್ಲ’
ಎಂದರು.

‘ಮೇಕೆದಾಟು ಯೋಜನೆಗೆ ತಡೆ ತಂದಿದ್ದೇವೆ ಎಂದು ತಮಿಳುನಾಡಿವರು ಬೊಬ್ಬೆ ಹೊಡೀತಿದ್ದಾರೆ. ಮೇಕೆದಾಟು ಯೋಜನೆಗೂ ತಮಿಳುನಾಡಿಗೂ ಏನು ಸಂಬಂಧ? ರಾಜ್ಯದಲ್ಲಿ ಅಧಿಕಾರಿಯಾಗಿದ್ದ ಅಣ್ಣಾಮಲೈ ಇಂದು ಮೇಕೆದಾಟು ಯೋಜನೆಗೆ ವಿರೋಧಿಸುತ್ತಿದ್ದಾರೆ. ಇದು ಸರಿಯಲ್ಲ. ಮೇಕೆದಾಟು ಯೋಜನೆ ವಿಚಾರದಲ್ಲಿ ತಮಿಳುನಾಡು ಹುಚ್ಚುತನ ಮಾಡಬಾರದು. ರಾಜ್ಯದ ಮೇಲೆ ಗೂಬೆ ಕೂರಿಸಬಾರದು’ ಎಂದು ಒತ್ತಾಯಿಸಿದರು.

ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಎಂ.ಜಗದೀಶ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗಾಯತ್ರಿ ಬಾಯಿ, ಕರುನಾಡ ಸೇನೆ ಜಿಲ್ಲಾಧ್ಯಕ್ಷ ಸಿ.ಎಸ್.ಜಯಕುಮಾರ್, ಕರುನಾಡ ಸೇನೆ ಜಿಲ್ಲಾ ದಲಿತ ಘಟಕದ ಅಧ್ಯಕ್ಷ ಜಯರಾಮು, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಸಮದ್, ತಾಲ್ಲೂಕು ಘಟಕದ ಅಧ್ಯಕ್ಷ ತ್ಯಾಗರಾಜ್, ಪದಾಧಿಕಾರಿಗಳಾದ ವರಲಕ್ಷ್ಮಿ, ರಾಜು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು